ನನ್ನ ಮಿತ್ರರೊಬ್ಬರಿಗೆ ಬ್ಯಾಂಕಿನಿಂದ ಕಾರು ಕೊಳ್ಳಲು ಸಾಲ ಮಂಜೂರಾಗಿತ್ತು. ಪಾರ್ಟಿ ಕೊಡಿಸಲು ನಾವು ದುಂಬಾಲು ಬಿದ್ದೆವು. ಅದಕ್ಕೆ ಅವರು ‘ಪಾರ್ಟಿ ಏನಿದ್ದರೂ ಪಾರ್ಕಿಂಗ್‌ಗೆ ತಕ್ಕ ಜಾಗ ಸಿಕ್ಕ ನಂತರ’ ಎಂದರು. ಅವರ ಮಾತಿನಲ್ಲಿ ಅರ್ಥವಿದೆ. ವಾಹನವೊಂದನ್ನು ಕೊಳ್ಳುವಷ್ಟೇ ಮಹತ್ವ ಅದರ ನಿಲುಗಡೆಗೆ ಸೂಕ್ತ ಸ್ಥಳ ವ್ಯವಸ್ಥೆ ಮಾಡಿಕೊಳ್ಳುವುದರಲ್ಲೂ ಇದೆ.
ಗ್ರಾಮ, ನಗರವೆಂಬ ಭೇದವಿಲ್ಲದಂತೆ ವಾಹನಗಳ ಸಂಖ್ಯೆ ಶರವೇಗದಲ್ಲಿ ಏರುತ್ತಿದೆ. ಪ್ರಸ್ತುತ ಜಗತ್ತಿನಲ್ಲಿ 150 ಕೋಟಿ ಕಾರುಗಳಿದ್ದು, 2030ರ ವೇಳೆಗೆ ಈ ಸಂಖ್ಯೆ 250 ಕೋಟಿ ಮುಟ್ಟಬಹುದು ಎನ್ನುವ ಅಂದಾಜಿದೆ. ಇಷ್ಟೆಲ್ಲ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಹೇಗೆ?
ಪಾರ್ಕಿಂಗ್ ಒಂದು ಜಾಗತಿಕ ಸಮಸ್ಯೆ. ಕೆಲವೊಮ್ಮೆ ಅದು ಸಂಘರ್ಷ ಮತ್ತು ಗೊಂದಲಕ್ಕೂ ಕಾರಣ
ವಾಗುತ್ತದೆ. ವಾಹನ ಹೊಂದಿಲ್ಲದೆ ಇರುವವರೇ ವಿರಳ ಎನ್ನುವಂತಹ ದಿನಗಳಿವು. ನಗರಗಳು ವೇಗವಾಗಿ ಬೆಳೆಯುತ್ತಿವೆ. ಪಾರ್ಕಿಂಗ್‌ಗೆ ಸ್ಥಳಾವಕಾಶ ಕಡಿಮೆಯಾಗುತ್ತಿದೆ. ವಾಹನ ಕೊಂಡ ಮೇಲೆ, ಎಲ್ಲಾದರೂ ಒಂದೆಡೆ ನಮ್ಮ ವಾಹನಗಳನ್ನು ನಿಲ್ಲಿಸಲೇಬೇಕಲ್ಲ. ವಾಹನಗಳನ್ನು ನಿಲ್ಲಿಸಲು ರಸ್ತೆ, ಫುಟ್‌ಪಾತ್ ಒತ್ತುವರಿ ಆಗುವ ಉದಾಹರಣೆಗಳು ಅಧಿಕ. ಮನೆ ಮುಂದೆ ವಾಹನಗಳನ್ನು ನಿಲ್ಲಿಸಿದರೆ ರಸ್ತೆ ಮೊಟಕಾಗುತ್ತದೆ. ಇನ್ನು ಫುಟ್‌ಪಾತ್ ಮೇಲೆ ಪಾರ್ಕಿಂಗ್‌ನಿಂದ ಆಗುವ ಅನನುಕೂಲ ಒಂದೆರಡಲ್ಲ. ವಾಹನಗಳಿಂದ ಕಿಕ್ಕಿರಿದ ಕಾಲುಹಾದಿಯಲ್ಲಿ ಸಂಚರಿಸಲು ವೃದ್ಧರು, ಮಕ್ಕಳು ಒದ್ದಾಡುತ್ತಾರೆ. ಫುಟ್‌ಪಾತ್‌ನ ಚಪ್ಪಡಿ, ಹಾಸುಗಲ್ಲುಗಳು ವಾಹನಗಳ ಭಾರಕ್ಕೆ ಕುಸಿಯುವ ಆತಂಕ ಇದ್ದೇಇದೆ. ಕಂಡಕಂಡಲ್ಲಿ ವಾಹನಗಳನ್ನು ನಿಲ್ಲಿಸಿದರೆ ಪೌರ ಕಾರ್ಮಿಕರ ರಸ್ತೆ ಸ್ವಚ್ಛತಾ ಕಾರ್ಯಕ್ಕೆ ಅಡಚಣೆ ಆಗುತ್ತದೆ.
ಮಿಜೋರಾಂ ಸರ್ಕಾರವು 2010ರಲ್ಲಿ ‘ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆಯಿದ್ದರೆ ಮಾತ್ರ ಹೊಸ ಕಾರಿನ ನೋಂದಣಿ’ ಎನ್ನುವ ಕಾಯ್ದೆ ಜಾರಿಗೆ ತಂದಿತು. ಅಲ್ಲಿ ನಗರಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ, ತೆರೆದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ‘ಗೇಟಿನ ಮುಂದೆ ವಾಹನ ನಿಲ್ಲಿಸಬೇಡಿ’ ಎಂದು ಕೆಲವು ಮನೆಗಳ ಮುಂದೆ ಸೂಚನಾ ಫಲಕಅಳವಡಿಸಿರುವುದನ್ನು ಕಾಣಬಹುದು. ವಾಹನ ಸವಾರರಲ್ಲಿ ಒಂದು ಮಟ್ಟಿಗಿನ ನಾಗರಿಕ ಪ್ರಜ್ಞೆ ಇದ್ದರೆ ಇಂತಹ ಫಲಕ ಅಳವಡಿಸುವ ಅಗತ್ಯವೇ ಇರದು. ಸಿಕ್ಕಸಿಕ್ಕಲ್ಲಿ ಕಾರು ನಿಲ್ಲಿಸುವುದಲ್ಲದೆ, ಅದನ್ನು ಎಲ್ಲೆಂದರಲ್ಲಿ ತೊಳೆಯುವವರೂ ಉಂಟು. ಇದರಿಂದ ಇತರರಿಗಾಗುವ ತೊಂದರೆ ಎಷ್ಟೆನ್ನುವುದನ್ನು ಮನಸ್ಸಿಗೆ ತಂದುಕೊಳ್ಳಬೇಕು.
ಮಹಾನಗರಗಳಲ್ಲಿ ಉಲ್ಬಣಿಸಿರುವ ಪಾರ್ಕಿಂಗ್ ಸಮಸ್ಯೆಯನ್ನು ತಕ್ಕಮಟ್ಟಿಗಾದರೂ ತಗ್ಗಿಸಲು ಪರ್ಯಾಯ ಸಂಚಾರ ವಿಧಾನಗಳನ್ನು ಅನುಸರಿಸಬೇಕಿದೆ. ಸ್ವಂತ ವಾಹನ ಬಳಸುವುದರಿಂದ ಪ್ರತಿಷ್ಠೆ ಹೆಚ್ಚುತ್ತದೆ ಮತ್ತು ಸಮಯದ ಉಳಿತಾಯ ಆಗುತ್ತದೆ ಎನ್ನುವುದು ಬರೀ ಭ್ರಮೆ. ‘ಕಾರ್ ಪೂಲಿಂಗ್’ ಎನ್ನುವುದು ಒಂದು ಅದ್ಭುತ ಪರಿಕಲ್ಪನೆ. ಒಂದೇ ದಿಕ್ಕಿನಲ್ಲಿರುವ ಕಚೇರಿಗಳನ್ನು ತಲುಪಬೇಕಾದವರು ಒಂದೇ ವಾಹನದಲ್ಲಿ ಪ್ರಯಾಣಿಸುವ ‘ಕಾರ್ ಪೂಲಿಂಗ್’ನಿಂದ ಸಂಚಾರ ದಟ್ಟಣೆ ತಗ್ಗಿಸಬಹುದು; ಪಾರ್ಕಿಂಗ್ ಸಮಸ್ಯೆಯ ತೀವ್ರತೆಯನ್ನೂ ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು.
ರಸ್ತೆಗಳಲ್ಲಿನ ವಾಹನಗಳ ಸಂಖ್ಯೆ ‘ಕಾರ್ ಪೂಲಿಂಗ್’ನಿಂದ ಗಣನೀಯವಾಗಿ ಇಳಿಮುಖವಾಗುವುದು. ಹೆಚ್ಚಿನ ವಾಹನ ದಟ್ಟಣೆಯಿಲ್ಲದೆ ಜನ ತಮ್ಮ ಕರ್ತವ್ಯಕ್ಕೆ ಹಾಜರಾಗಬಹುದು. ಮೇಲಾಗಿ ಪ್ರಯಾಣವನ್ನು ಹಂಚಿಕೊಳ್ಳುವ ಒಂದು ಜನವರ್ಗ ರೂಪುಗೊಳ್ಳುವುದು. ಅವರಲ್ಲಿ ಸೌಹಾರ್ದ, ಸ್ನೇಹಭಾವ ವೃದ್ಧಿಸುವುದು. ಇಂಧನ ಉಳಿತಾಯ ಹಾಗೂ ಸಂಚಾರ ನಿಬಿಡತೆ ಕಡಿಮೆಯಾಗಿ ವೈಯಕ್ತಿಕ ಖರ್ಚಿಗೂ ಕಡಿವಾಣ ಬೀಳುವುದು. ಚಾಲಕರ ಮೇಲಿನ ಒತ್ತಡವೂ ಕಡಿಮೆಯಾಗಿ ಅವರ ದಕ್ಷತೆ ಹೆಚ್ಚುವುದು. ಕಾರ್ ಪೂಲಿಂಗ್‌ನಲ್ಲಿ ಭಾಗಿಯಾಗುವ ಪ್ರತಿಯೊಬ್ಬರೂ ರಸ್ತೆಯಿಂದ ಒಂದೊಂದು ಕಾರು ಕಡಿಮೆಯಾಗಲು ಕಾರಣರಾಗಿರುತ್ತಾರೆ!
ವಿಶಾಲ ಬಯಲನ್ನು ವಾಹನಗಳ ನಿಲುಗಡೆಗೆ ಬಳಸಿಕೊಳ್ಳಬಹುದಾದ ಸಾಧ್ಯತೆಯಿದೆ. ಆದರೆ, ಬೇಕೆಂದಾಗ ವಾಹನಗಳನ್ನು ಹೊರತೆಗೆಯಲು ತೊಂದರೆಯಾಗುವಂತೆ ಇದ್ದರೆ ಬಯಲಿನಲ್ಲಿ ವಾಹನಗಳ ನಿಲುಗಡೆಯೂ ಸಮಸ್ಯೆಯೇ. ಪಾರ್ಕಿಂಗ್ ವ್ಯವಸ್ಥೆ ಸುಸ್ಥಿರವಾಗಿರದಿದ್ದರೆ ಸುಗಮ ಸಂಚಾರ, ಸಂಪರ್ಕ ಹೇಗೆ ತಾನೆ ಸಾಧ್ಯ? ಹಾಗಾಗಿ, ‘ನಿಲುಗಡೆ’ ಎಂಬ ದೈನಿಕ ತಾಕಲಾಟವನ್ನು ಪರಿಹರಿಸಿಕೊಳ್ಳಬೇಕಿದೆ. ವಾಹನಗಳು ಸಾಗದೆ ದಟ್ಟಣೆ ಉಂಟಾದರೆ, ಅವು ಹೊಗೆ ಕಾರುತ್ತಿದ್ದರೆ ಗುಣಮಟ್ಟದ ಗಾಳಿಗೂ ಸಂಚಕಾರ. ಜೊತೆಗೆ ಆರ್ಥಿಕ ಹಿನ್ನಡೆಯೂ ಆದೀತು.
ಮೇಲ್ನೋಟಕ್ಕೆ ಕಾರು ಐಷಾರಾಮಿ ಎನ್ನುವಂತೆ ಕಾಣಿಸಿದರೂ ಅದು ನಮ್ಮ ಬದುಕಿನ ಗುಣಮಟ್ಟವನ್ನು
ಸೊರಗಿಸುತ್ತದೆ. ಕಾರು ಇಲ್ಲದಿರುವುದೇ ನೆಮ್ಮದಿ ಎನ್ನುವುದು ಕೆಲವರ ಅನುಭವಕ್ಕಾದರೂ ಬಂದೇ ಇರುತ್ತದೆ. ಬೈಕ್, ಲಾರಿ, ಕಾರು, ಬಸ್ ಮುಂತಾದವುಗಳ ಉತ್ಪಾದನಾ ವೆಚ್ಚ ಹಾಗೂ ರಸ್ತೆಗಳ ತಾಳಿಕೆ ಬಾಳಿಕೆ ಬಗ್ಗೆಯೂ ನಾವು ಯೋಚಿಸಬೇಕು. ಕರಿಬೇವು, ಸಾಸಿವೆ ತರಲಿಕ್ಕೂ ಕಾರು ಎನ್ನುವುದು ಸರಿಯಲ್ಲ. ಸಾರ್ವಜನಿಕ ಸಾರಿಗೆ ಬಳಕೆಯು ಪಾರ್ಕಿಂಗ್ ಸಮಸ್ಯೆಗೆ ಉತ್ತಮ ಪರಿಹಾರ. ನಡಿಗೆ, ಬೈಸಿಕಲ್ ಬಳಕೆಯ ಹಿಂದಿರುವ ಪರಿಸರ ಕಾಳಜಿಯ ಬದ್ಧತೆ ಸಾಮಾನ್ಯವಾದುದಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.