ADVERTISEMENT

ಉಗ್ರಪ್ರತಾಪವೋ? ಮಾತೃಮಮತೆಯೋ?

ಎಸ್.ಸುರೇಶ್ ಕುಮಾರ್
Published 21 ಜನವರಿ 2020, 20:00 IST
Last Updated 21 ಜನವರಿ 2020, 20:00 IST
Sangatha 22-01-2020-NEW
Sangatha 22-01-2020-NEW   

ಈ ಐದು ತಿಂಗಳಲ್ಲಿ ರಾಜ್ಯದ 19 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಸುಮಾರು 150ಕ್ಕೂ ಹೆಚ್ಚು ಶಾಲೆಗಳನ್ನು ತಲುಪಿದ್ದೇನೆ. ಸಾವಿರಾರು ಮಕ್ಕಳೊಂದಿಗೆ ಸಂವಾದ ನಡೆಸಿದ್ದೇನೆ. ಶಿಕ್ಷಕರೊಂದಿಗೂ ಮಾತನಾಡಿದ್ದೇನೆ. ಕೆಲವೇ ತಿಂಗಳುಗಳಲ್ಲಿ ಪಡೆದ ಈ ಅಗಾಧ ಅನುಭವ ನಿಜಕ್ಕೂ ಸಮೃದ್ಧ, ಶ್ರೀಮಂತ ಹಾಗೂ ಚೇತೋಹಾರಿ.

ಅತ್ಯಂತ ದುರ್ಗಮ ಪ್ರದೇಶದಲ್ಲಿರುವ ಶಾಲೆಯಲ್ಲಿ ಬಹಳ ಆಸ್ಥೆಯಿಂದ ಪಾಠ ಕಲಿಸುತ್ತಿರುವ ಶಿಕ್ಷಕರು, ವರ್ಗಾವಣೆಯಾದಾಗ ಇಡೀ ಶಾಲೆಯ ಮಕ್ಕಳು ಕಣ್ಣೀರಿಟ್ಟು ‘ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ’ ಎನ್ನುವ ಪ್ರೀತಿಯ ಬಲೆಯಲ್ಲಿ ಸಿಕ್ಕಿ, ಹೋಗುವುದೋ ಬಿಡುವುದೋ ಎಂಬ ತುಮುಲಕ್ಕೊಳಗಾದ ಶಿಕ್ಷಕರು, ಸ್ವಂತ ಹಣದಿಂದ ಶಾಲೆಯ ಅಭಿವೃದ್ಧಿ ಮಾಡಿರುವ ಶಿಕ್ಷಕರು- ತಮ್ಮ ಇಡೀ ಜೀವನವನ್ನು ಶಿಕ್ಷಣಕ್ಕಾಗಿ, ವಿದ್ಯಾರ್ಥಿಗಳಿಗಾಗಿ ಮುಡಿಪಾಗಿಟ್ಟುಕೊಂಡಿರುವ ವಿಶಿಷ್ಟ ವ್ಯಕ್ತಿಗಳನ್ನು ಕಂಡಿದ್ದೇನೆ.

ಇಂತಹ ಉತ್ಕೃಷ್ಟ ನಿದರ್ಶನಗಳ ನಡುವೆ, ಇತ್ತೀಚಿನ ಒಂದೆರಡು ಪ್ರಸಂಗಗಳು ಇಂತಹ ಚೇತೋಹಾರಿ ವಾತಾವರಣವನ್ನು ಕದಡುವಂತೆ ಮಾಡಿವೆ. ಈ ಸಂಗತಿಗಳು, ಅಗಾಧ ಪ್ರಮಾಣದ ಹಾಲನ್ನು ಹಾಳು ಮಾಡಲು ಒಂದೆರಡು ತೊಟ್ಟು ಹುಳಿ ಹಿಂಡಿದರೆ ಸಾಕು ಎಂಬಂತೆ, ಸರ್ಕಾರಿ ಶಾಲಾ ವ್ಯವಸ್ಥೆಯನ್ನೇ ಬಹಳ ಕೆಟ್ಟದಾಗಿ ಬಿಂಬಿಸುವಂತೆ ಮಾಡಿವೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಗ್ರಾಮವೊಂದರ ‘ಪಕ್ಕೆಲುಬು’ ಪ್ರಕರಣದಿಂದ ಪ್ರಾರಂಭವಾಗಿ, ಜೋಯಿಡಾದಲ್ಲಿ ಶಾಲೆಗೆ ಬರಲಿಲ್ಲ ಎಂಬ ಕಾರಣಕ್ಕೆ 4ನೇ ತರಗತಿಯ ಮಗುವಿಗೆ ಅಮಾನುಷವಾಗಿ ಥಳಿಸಿದಂತಹ ಕೃತ್ಯಗಳು ನಡೆದಿವೆ. ವಿಶೇಷವೆಂದರೆ, ಈ ಎಲ್ಲಾ ಹೀರೊಯಿಸಂಗಳು ವಿಡಿಯೊ ರೆಕಾರ್ಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು.

ADVERTISEMENT

ಒಂದೇ ಪ್ರಯತ್ನಕ್ಕೆ ‘ಪುಳಿಯೋಗರೆ’ ಎಂಬ ಪದವನ್ನು ಕಲಿಸಬೇಕೆಂಬ ಹಟತೊಟ್ಟ ಶಿಕ್ಷಕ, ‘ನಪುಂಸಕ’ ಎಂಬ ಪದ ಉಚ್ಚರಿಸಲು ಬಾರದ ಮಗುವನ್ನು ಗೇಲಿ ಮಾಡುವ ಶಿಕ್ಷಕ- ಇಂತಹವರು, ಇಂತಹ ಪ್ರಸಂಗಗಳು ಮಕ್ಕಳ ಬೆಳವಣಿಗೆಗೆ ಪೂರಕವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಪಾಠ ಹೇಳಿಕೊಡುವ ತನ್ನ ಕ್ರಮವನ್ನು ತಾನೇ ವಿಡಿಯೊ ಮಾಡಿ ಜಗಕ್ಕೆಲ್ಲಾ ಹಂಚಿಕೊಂಡು, ಮುಗ್ಧ ಮಗುವನ್ನು ಮಾನಸಿಕ ಕ್ಷೋಭೆಗೆ ಗುರಿ ಮಾಡುವಂತಹುದು ವಿಕೃತ ಮನಃಸ್ಥಿತಿಯ ಪರಕಾಷ್ಠೆಯಲ್ಲದೇ ಇನ್ನೇನು?

ನಿಜ, ಇಂದಿನ ಶಿಕ್ಷಕರು ಹಿಂದೆಂದೂ ಇಲ್ಲದ ಬಹುಮುಖಿ ಶೈಕ್ಷಣಿಕ ಒತ್ತಡಗಳಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಆದರೆ, ಇವೆಲ್ಲದರ ನಡುವೆ ಶಿಕ್ಷಕರು ವಿದ್ಯಾರ್ಥಿಕೇಂದ್ರಿತವಾದ ವಾತಾವರಣವನ್ನು ಜತನದಿಂದ ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಮರೆಯುವ ಹಾಗಿಲ್ಲ. ತನ್ನಲ್ಲಿರಬೇಕಾದ ತಾಯಿ ಹೃದಯವನ್ನು ಕಳೆದುಕೊಳ್ಳುವ ಹಾಗಿಲ್ಲ. ಹಾಗಾಗಿ, ಮಕ್ಕಳೊಂದಿಗೆ ತನ್ನ ಮಾತೃಮಮತೆ ಮಾತ್ರವೇ ಸಂವಹನ ಸೃಷ್ಟಿಸಲು ಸಾಧ್ಯ ಎಂಬುದನ್ನು ಯಾವ ಶಿಕ್ಷಕರೂ ಮರೆಯಬಾರದು.

ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳನ್ನು ಬೆಚ್ಚಿಬೀಳಿಸುವಂತಹ ಶಿಕ್ಷಕ ಬೇಕೇ ಅಥವಾ ಮಕ್ಕಳೆಲ್ಲ ಓಡೋಡಿ ಹೋಗಿ ಸುತ್ತುವರಿದಾಗ, ಅಕ್ಕರೆಯಿಂದ ಮಕ್ಕಳನ್ನು ಅವುಚಿಕೊಂಡು ಪ್ರೀತಿಯ ಸಿಂಚನ ಹರಡುವ ಶಿಕ್ಷಕ ಬೇಕೇ? ಮಕ್ಕಳು ಭಯದಿಂದ ಕಲಿಯುತ್ತಾರೆಯೇ ಅಥವಾ ಪ್ರೀತಿಯಿಂದ ಕಲಿಯುತ್ತಾರೆಯೇ? ಇದು, ನಮ್ಮ ಎಲ್ಲಾ ಶಿಕ್ಷಕರು ಹಾಗೂ ಅವರನ್ನು ಪ್ರತಿನಿಧಿಸುವ ಸಂಘಟನೆಗಳು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ.

ಮೊನ್ನೆ ಶಿವಮೊಗ್ಗದಲ್ಲಿ ಶೈಕ್ಷಣಿಕ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲಿ ನನಗೆ ಖುಷಿಕೊಟ್ಟ ಸಂಗತಿ ಎಂದರೆ, ಭದ್ರಾವತಿಯಲ್ಲಿನ ಶಿಕ್ಷಕರು ಮತ್ತು ಪೋಷಕರು ಸೇರಿಕೊಂಡು ರಚಿಸಿಕೊಂಡಿರುವ ವಾಟ್ಸ್‌ಆ್ಯಪ್‌ ಗ್ರೂಪ್. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಮಾಹಿತಿಗಾಗಿಯೇ ಮೀಸಲಾಗಿರುವುದು ಅದರ ವಿಶೇಷ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಶಾಲೆಯ ಮಗುವೊಂದು ಪ್ರತಿ ಅಕ್ಷರಕ್ಕೂ ಒಂದೊಂದು ಗಾದೆ ಹೇಳುತ್ತಿದ್ದ ವಿಡಿಯೊ ಎಲ್ಲರ ಗಮನ ಸೆಳೆಯಿತು. ನನ್ನ ಗಮನಕ್ಕೆ ಬಂದ ಯಾವುದೇ ಅಹಿತಕರ ಘಟನೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಒಂದೊಮ್ಮೆ ನನಗೆ ಬಂದ ಮಾಹಿತಿ ಸತ್ಯಕ್ಕೆ ದೂರವಾಗಿದ್ದರೆ ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇನೆ.

ರಾಜ್ಯದ ಶಿಕ್ಷಕರಲ್ಲಿ ನಾನು ಮನವಿ ಮಾಡಿಕೊಳ್ಳುವುದೇನೆಂದರೆ, ನಿಮ್ಮ ಶಾಲೆಯ ಮಕ್ಕಳನ್ನು ಅವರ ತಂದೆ-ತಾಯಿ ನಿಮಗೆ ಒಪ್ಪಿಸಿದ್ದಾರೆ. ಶಾಲೆಯಲ್ಲಿ ನೀವು ಆ ಮಕ್ಕಳ ಮತ್ತೋರ್ವ ಪೋಷಕರು ಎಂಬುದು ನಿಮಗೆ ಗೊತ್ತಿರಲಿ. ಶಾಲೆಯ ಹೊರಗಿನ ಯಾವುದೋ ಘಟನೆ ನಿಮ್ಮ ಮನಃಸ್ಥಿತಿ ಕೆಡಿಸಿ, ಅದರ ಪರಿಣಾಮಕ್ಕೆ ಈ ಅಮಾಯಕ ಮಕ್ಕಳು ಬಲಿಯಾಗದಿರಲಿ. ನೀವೆಲ್ಲರೂ ಮಕ್ಕಳಿಗೆ ಅಕ್ಕರೆಯ ಮೇಷ್ಟ್ರು, ನೆಚ್ಚಿನ ಮೇಡಂ, ಪ್ರೀತಿಯ ಮಿಸ್ ಆಗಿ. ಬದಲಿಗೆ, ಕನಸಿನಲ್ಲಿಯೂ ಬಂದು ಹೆದರಿಸುವ ‘ಉಗ್ರಪ್ರತಾಪಿ’ಗಳಾಗದಿರಿ.‌

ಯಾವುದೋ ಒಂದು ಸಣ್ಣ ಪ್ರಸಂಗ ಇಡೀ ಸರ್ಕಾರಿ ಶಾಲೆಗಳ ಶಿಕ್ಷಕರ ಕುರಿತು ಜನಸಾಮಾನ್ಯರಲ್ಲಿ ತಿರಸ್ಕಾರ ಭಾವವನ್ನು ಉಂಟು ಮಾಡುವಂತಹ ಅನಾಹುತ ಘಟಿಸದಂತೆ ನೋಡಿಕೊಳ್ಳುತ್ತೇವೆ ಎಂದು ಶಿಕ್ಷಕರೆಲ್ಲರೂ ದೃಢ ನಿಶ್ಚಯ ಮಾಡಬೇಕಾದುದು ಇಂದಿನ ಅಗತ್ಯ.

-ಲೇಖಕ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.