
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುತ್ತೂರು ಜಾತ್ರೆಯ ಕಾರ್ಯಕ್ರಮದಿಂದ ಹಿಂದಿರುಗುವಾಗ ಉಂಟಾದ ಸಂಚಾರ ದಟ್ಟಣೆಯ ನಿಯಂತ್ರಣದಲ್ಲಿ ನಿರತರಾಗಿದ್ದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡೆ ಅವರ ಅನುಚಿತ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಉನ್ನತ ಹುದ್ದೆಯಲ್ಲಿರುವ ಐಪಿಎಸ್ ದರ್ಜೆಯ ಈ ಅಧಿಕಾರಿ ಸಾಮಾನ್ಯ ಬೈಕ್ ಸವಾರನಿಗೆ ಆವೇಶದಿಂದ ಬೂಟುಕಾಲು ಮೇಲೆತ್ತಿ ಒದೆಯಲು ಮುಂದಾಗುವ ವಿಡಿಯೊ ತುಣುಕು ವೈರಲ್ ಆಗಿದೆ. ಈ ದೃಶ್ಯವು ಕೇವಲ ಒಬ್ಬ ಅಧಿಕಾರಿಯ ಸಾಂದರ್ಭಿಕ ಲೋಪವನ್ನಷ್ಟೇ ಸಂಕೇತಿಸದೆ, ಒಟ್ಟಾರೆ ಪೊಲೀಸ್ ಇಲಾಖೆಯ ಮಾನಸಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕಿದೆ.
ಪೊಲೀಸರ ಈ ರೀತಿಯ ನಡವಳಿಕೆಗಳನ್ನು ಟೀಕೆಗೆ, ದೂಷಣೆಗೆ, ಸಾಮಾಜಿಕ ಮಾಧ್ಯಮ ವಿಚಾರಣೆಗೆ ಒಳಪಡಿಸಿದರಷ್ಟೇ ಸಾಲದು; ಅವರ ವರ್ತನೆಯನ್ನು ಹಲವು ವಸ್ತುನಿಷ್ಠ ಆಯಾಮಗಳಲ್ಲಿ ವಿಮರ್ಶಿಸುವ ಅಗತ್ಯವಿದೆ.
ಇತ್ತೀಚೆಗೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಇಲಾಖೆಯ ವೈಫಲ್ಯವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿ ದ್ದಾರೆ. ರಾಜ್ಯದಲ್ಲಿನ ಮಾದಕವಸ್ತು ತಯಾರಿಕೆ ಘಟಕಗಳ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಬೇಕಾಗಿ ಬಂದ ಪ್ರಸಂಗ ಹಾಗೂ 88 ಪ್ರಕರಣಗಳಲ್ಲಿ ಪೊಲೀಸರೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಅತೀವ ಬೇಸರ ಹೊರಹಾಕಿದ್ದಾರೆ. ಅವರ ಅಸಮಾಧಾನವು ವೃತ್ತಿಪರತೆಯ ಕೊರತೆಯಿಂದ ನರಳುತ್ತಿರುವ ಪೊಲೀಸ್ ಇಲಾಖೆ ಕುರಿತ ಅಧಿಕೃತ ಪ್ರಕಟಣೆ ಎಂದು ಭಾವಿಸಬಹುದು.
ವರ್ಗಶ್ರೇಣಿಗೆ ಅನುಗುಣವಾಗಿ ಹೇರಲಾಗುವ ‘ಮೇಲಿನವರ’ ಒತ್ತಡಗಳು ಎಲ್ಲಾ ಹಂತಗಳ ಪೊಲೀಸರನ್ನು ಹೈರಾಣಾಗಿಸಿರುವುದು ರಹಸ್ಯ ಸಂಗತಿಯೇನಲ್ಲ. ಇಲಾಖೆಯ ಕೆಳಗಿನವರು ಎದುರಿಸುತ್ತಿರುವ ಸಂಕಷ್ಟಗಳು ಒಂದು ಬಗೆಯವಾದರೆ, ಎತ್ತರದವರ ಪೀಕಲಾಟ ಮತ್ತೊಂದು ರೀತಿಯದ್ದು. ಇದಕ್ಕೆ ಪೂರಕ ನಿದರ್ಶನಗಳಿಗೆ ಕೊರತೆಯಿಲ್ಲ.
ಕಳೆದ ಏಪ್ರಿಲ್ ತಿಂಗಳು ಬೆಳಗಾವಿಯ ಸಮಾರಂಭವೊಂದರಲ್ಲಿ, ‘ಹೇ ಪೊಲೀಸ್ ಬಾರಯ್ಯ ಇಲ್ಲಿ, ಯಾವನು ಅವನು ಎಸ್‌ಪಿ. ಏನು ಮಾಡ್ತಾ ಇದ್ದೀರಾ ಇಲ್ಲಿ?’ ಎಂದು ಗದರಿದ ಸಿದ್ದರಾಮಯ್ಯ, ಎ.ಎಸ್.ಪಿ. ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಲು ಮುಂದಾಗಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ರಾಜಕಾರಣಿಗಳ ರಕ್ಷಣೆಗಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ
ಬಿ. ದಯಾನಂದ ಅವರನ್ನೊಳಗೊಂಡಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಬಳ್ಳಾರಿಯಲ್ಲಿ ನಡೆದ ಹಿಂಸಾಚಾರ ಘಟನೆ ಸಂಬಂಧ ಅಧಿಕಾರ ವಹಿಸಿಕೊಂಡ ದಿನವೇ ಐಪಿಎಸ್ ಅಧಿಕಾರಿ ಪವನ್ ನಜ್ಜೂರ್ ಸಸ್ಪೆಂಡ್ ಆಗಿದ್ದು ಇನ್ನೂ ಹಸಿರಾಗಿದೆ.
ನಗರಗಳಲ್ಲಿ, ಹೆದ್ದಾರಿಗಳಲ್ಲಿ ವಿವಿಐಪಿ ಸಂಚಾರ ಸಂಸ್ಕೃತಿ ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ. ಮುಖ್ಯವಾಗಿ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಗೃಹಸಚಿವರ ಸಂಚಾರವೆಂದರೆ, ಅದನ್ನು ನಿರ್ವಹಿಸುವ ಪೊಲೀಸರು ಮತ್ತು ಅನುಭವಿಸುವ ಸಾರ್ವಜನಿಕರಿಗೆ ಸಮಾನ ಶಿಕ್ಷೆ. ಇತ್ತೀಚೆಗೆ ಗೃಹ ಸಚಿವ ಜಿ. ಪರಮೇಶ್ವರ ಅವರ ಸಂಚಾರದ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ಬಿಡುಬೀಸಾದ ವರ್ತನೆ ಬಹುಚರ್ಚಿತವಾಗಿದೆ. ಅಧಿಕಾರಿಗಳ ಇಂಥ ವರ್ತನೆಗಳಿಗೆ ಮಡುಗಟ್ಟಿರುವ ಹತಾಶೆ, ಅತಂತ್ರ ಸ್ಥಿತಿ ಮತ್ತು ಆತಂಕ ಕಾರಣವಾಗಿರಲಾರದು ಎಂದು ಭಾವಿಸಲು ಸಾಧ್ಯವಿಲ್ಲ. ಈ ಎಲ್ಲಾ ಬಿಡಿ ಪ್ರಕರಣಗಳ ಹಿನ್ನೆಲೆಯಲ್ಲಿ ಇಡೀ ಆಡಳಿತ ವ್ಯವಸ್ಥೆ ಅಳವಡಿಸಿಕೊಂಡಿರುವ ‘ಸಾಹೇಬ ಸಂಸ್ಕೃತಿ’ ಕೆಲಸ ಮಾಡುತ್ತಿದೆ.
ರಾಜಶಾಹಿ ಮತ್ತು ವಸಾಹತುಶಾಹಿ ಪ್ರಭುತ್ವಗಳ ಕುರುಹು ಎನ್ನಿಸಿಕೊಳ್ಳುವ ‘ಸಾಹೇಬ ಸಂಸ್ಕೃತಿ’ಯು ಪ್ರಜೆಗಳ ಪ್ರಭುತ್ವ ದಲ್ಲಿಯೂ ವಿವಿಧ ರೂಪಗಳಲ್ಲಿ ಅಸ್ತಿತ್ವ ಉಳಿಸಿಕೊಂಡಿದೆ. ಗಣ್ಯವ್ಯಕ್ತಿ ಸಂಚಾರ ಸಂದರ್ಭದಲ್ಲಿ ಅಳವಡಿಸಿಕೊಂಡಿರುವ ಶಿಷ್ಟಾಚಾರ ಹೆಸರಿನ ಅಸಾಂವಿಧಾನಿಕ ನಡೆಯಲ್ಲಿ ಇಂಥ ಸಂಸ್ಕೃತಿಯನ್ನು ಢಾಳಾಗಿ ಕಾಣಬಹುದು. ಗಣ್ಯವ್ಯಕ್ತಿಗಳ ಶಿಷ್ಟಾಚಾರ ಪಾಲನೆಯಲ್ಲಿ ಮೂಲತಃ ಎರಡು ಅಂಶಗಳು ಅಡಗಿರುತ್ತವೆ: ಒಂದು, ಗಣ್ಯರ ಸುರಕ್ಷತೆ. ಇನ್ನೊಂದು, ಸ್ಥಾನಗೌರವ. ಚಾಲ್ತಿಯಲ್ಲಿರುವ ಶಿಷ್ಟಾಚಾರಗಳು ಇವೆರಡೇ ಉದ್ದೇಶಗಳ ಪರಿಪಾಲನೆಗೆ ಸೀಮಿತವಾಗಿಲ್ಲ.
ಬಹುಪಾಲು ರಾಜಕಾರಣಿಗಳು ಆಡಳಿತ ನಡೆಸುವು ದಕ್ಕಿಂತ ದರ್ಬಾರು ಮಾಡುವುದಕ್ಕಾಗಿಯೇ ಅಧಿಕಾರಕ್ಕೆ ಬರುತ್ತಾರೆ. ರಾಜಕಾರಣ ಸೇವೆ ಎನ್ನುವುದನ್ನು ಮರೆತಿರುವ ಅವರ ಪಾಲಿಗೆ ಶಿಷ್ಟಾಚಾರಗಳು ಸಹ ದರ್ಪ–ದೌಲತ್ತು ತೋರ್ಪಡಿಕೆಯ ಅವಕಾಶಗಳು. ಹಾಗಾಗಿ, ಗಣ್ಯವ್ಯಕ್ತಿಗಳ ಶಿಷ್ಟಾಚಾರ ನಿಯಮಗಳ ಪ್ರಾಥಮಿಕ ಉದ್ದೇಶವಾದ ಭದ್ರತೆ ಮತ್ತು ಸ್ಥಾನಗೌರವಗಳ ಆಮೂಲಾಗ್ರ ಪುನರ್ ವ್ಯಾಖ್ಯಾನ ಆಗಬೇಕಿದೆ. ಗಣ್ಯರ ಭದ್ರತೆಯ ಜೊತೆಗೆ ನಾಗರಿಕರ ಮುಕ್ತ ಸಂಚಾರ ಮತ್ತು ಸಮಾನತೆಯ ಸಂವಿಧಾನದತ್ತ ಹಕ್ಕಿನ ರಕ್ಷಣೆಯೂ ಆಗಬೇಕು.
ಅತಿ ಶಿಷ್ಟಾಚಾರ ನಿಯಮಗಳಿಗೆ ತಿದ್ದುಪಡಿ ಮಾಡಿ ಕನಿಷ್ಠ ಒಂದು ಮಿತಿಗಾದರೂ ಒಳಪಡಿಸುವ ಅಗತ್ಯವಿದೆ. ಈ ಕುರಿತು ಮುಖ್ಯಮಂತ್ರಿ ಹುದ್ದೆಯಲ್ಲಿರುವ ‘ಸಮಾಜವಾದಿ ಸಾಹೇಬ’ರೇ ಒಂದು ದೃಢ ನಿರ್ಧಾರ ತೆಗೆದುಕೊಂಡರೆ ಮಾತ್ರ ಇದು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.