
ಆ ಪದವೇ ಮನದಲ್ಲಿ ಕೊರೆಯುತ್ತಿರುತ್ತದೆ. ಅಥವಾ ಆ ಸನ್ನಿವೇಶ, ಘಟನೆಯೂ ಆಗಿರಬಹುದು. ಎಷ್ಟು ಮರೆಯಬೇಕೆಂದುಕೊಂಡರೂ ಆಗುವುದೇ ಇಲ್ಲ. ಅಷ್ಟಕ್ಕೂ ಅದೇನೂ ಕೇಳಬಾರದ ಮಾತುಗಳಲ್ಲ. ಆಗಬಾರದ ಘಟನೆಯೂ ಆಘಿರುವದಿಲ್ಲ. ಯಾವುದೋ ಸಂದರ್ಭದಲ್ಲಿ ಯಾರೋ ಅಕಸ್ಮಾತ್ತಾಗಿ ಹೇಳಿದ ಮಾತುಗಳು, ಸೃಷ್ಟಿಯಾದ ಸನ್ನಿವೇಶಗಳು ನಮ್ಮ ಪರಿಸ್ಥಿತಿಗೆ ಹೊಂದಿಕೆಯಾಗಿ, ಅದೇ ಮನದ ರಾಡಿಗೆ ಕಾರಣವಾಗಿರುತ್ತದೆ ಅಷ್ಟೇ. ಹಾಗೆಂದು ಅವರು ಬೇಕೆಂದೇ ಆ ಮಾತನ್ನು ಹೇಳಿರುವುದಿಲ್ಲ ಅಥವಾ ನಮ್ಮನ್ನೇ ಉದ್ದೇಶಿಸಿಯೇ ಹಾಗೆ ಹೇಳಿದ್ದೂ ಆಗಿರುವದಿಲ್ಲ. ಸತ್ಯ ಗೊತ್ತಿದ್ದರೂ ಆ ಇರಿಟೇಷನ್‌ನಿಂದ ವಾಪಸು ಬರುವುದು ಸಾಧ್ಯವೇ ಆಗುವುದಿಲ್ಲ.
‘ಅವರೇಕೆ ಹಾಗೆಂದರು?, ನನ್ನನ್ನೇ ಉದ್ದೇಶಿಸಿ ಹೇಳಿರಬೇಕಲ್ವಾ’, ‘ಆತ ಬೇಕೆಂದೇ ಹಾಗೆ ವರ್ತಿಸಿರಬೇಕು, ನನ್ನನ್ನು ನಿರ್ಲಕ್ಷಿಸಲಿಕ್ಕಾಗಿಯೇ, ಇರಿಯಲೆಂದೇ ಹಾಗೆ ಮಾಡಿರಬೇಕು’ ಎಂಬ ಯೋಚನೆ ಬಿಟ್ಟೂ ಬಿಡದೇ ಕಾಡುತ್ತದೆ. ಅದು ಬರೀ ಅನುಮಾನವಲ್ಲ. ಕೊನೆ ಕೊನೆಗೆ ಅದನ್ನೇ ದೃಢವಾಗಿ ನಂಬಿ ಬಿಡುತ್ತೇವೆ. ‘ಹೀಗಾಯಿತಲ್ಲ’ ಎಂದು ದುಃಖಿಸುತ್ತೇವೆ.
ನಮ್ಮ ಮನಸ್ಸು ಎಷ್ಟು ವಿಚಿತ್ರ ನೋಡಿ, ಸುಖಾಸುಮ್ಮನೆ ಇಲ್ಲ–ಸಲ್ಲದ್ದನ್ನು ಕಲ್ಪಿಸಿಕೊಳ್ಳುತ್ತ ಒಂದು ರೀತಿಯ ದುಃಖದಲ್ಲಿ ಇರುವುದೆಂದರೆ ಕೆಲವೊಮ್ಮೆ ಅದಕ್ಕೆ ಬಹಳ ಪ್ರೀತಿ. ಅದ್ಯಾಕೆ ಅಂತೀರಾ? ಅದಕ್ಕೆ ಸಹಾನುಭೂತಿ ಬೇಕು. ಹೀಗಾಗಿ ದುಃಖಿಸುವ ಪರಿಪಾಠ ಅದಕ್ಕೆ. ಆ ಮೂಲಕವಾದರೂ ಒಂದಿಬ್ಬರ ಗಮನ ಸೆಳೆದು ‘ಅಯ್ಯೋ, ಪಾಪ ಹೀಗಾಯ್ತಾ’ ಎಂದು ಕೇಳಿಸಿಕೊಳ್ಳುವ ಚಪಲ. ಬೇಕಿದ್ದರೆ ನೋಡಿ, ನಮಗೆ ಕಹಿ ಎನಿಸುವ ಮಾತುಗಳನ್ನು ಕೇಳಿದಾಗ, ನಮ್ಮ ಮನಸಿಗೆ ಇಷ್ಟವಾಗದ ಬೆಳವಣಿಗೆಗಳು ನಡೆದಾಗ ನಾವು ಸುಮ್ಮನೇ ಕೂರುವದೇ ಇಲ್ಲ. ಏನೋ ಆಗಬಾರದ್ದು ಆಗಿ ಹೋಯಿತೇನೋ ಎನ್ನುವಂತೆ ಮುಖ ಬಾಡಿಸಿಕೊಂಡು, ತಲೆ ಮೇಲೇನೋ ಪರ್ವತವೇ ಬಿದ್ದಿದೆ ಎಂಬಂತೆ ನೆಲ ನೋಡುತ್ತಾ, ಅನ್ಯಮನಸ್ಕರಾಗಿದ್ದಂತೆ ತೋರಿಸಿಕೊಳ್ಳುತ್ತ ಓಡಾಡುತ್ತಿರುತ್ತೇವೆ. ಅದರ ಉದ್ದೇಶವೇ ಯಾರಾದರೂ ನಮ್ಮನ್ನು ‘ಹೀಗೇಕೆ ಇದ್ದೀಯಾ’ ಎಂದು ಕೇಳಲಿ ಎಂಬುದು. ಕೇಳಿದರಂತೂ ಆಯಿತು, ಕೇಳದಿದ್ದರೂ, ಮಾತಿನ ಮಧ್ಯೆ ಏನೋ ಪ್ರಸ್ತಾಪ ತಂದುಕೊಂಡಾದರೂ ‘ಇವತ್ತು ನನಗೆ ಹೀಗಾಗಿಬಿಟ್ಟಿತು‘ ಎಂದು ಕಡ್ಡಿಯನ್ನು ಗುಡ್ಡ ಮಾಡಿ, ಬಣ್ಣಿಸಿ ಹೇಳುತ್ತೇವೆ. ಅದರ ಉದ್ದೇಶವೇ, ನಮ್ಮೊಳಗಿನ ಕೊರಗನ್ನು ಜೀವಂತವಾಗಿಡುವ ಜತೆಗೆ ನಮ್ಮ ಯೋಚನೆಗಳಿಗೆ ಅವರ ಸಮರ್ಥನೆಯನ್ನೂ ಗಿಟ್ಟಿಸಿಕೊಳ್ಳುವುದು.
ಆದರೆ, ಹಾಗೆ ವರ್ತಿಸುತ್ತ ನಾವು ತೀರ ಅಸುಖಿಗಳಾಗುತ್ತ ಸಾಗುತ್ತೇವೆ ಎನ್ನುವುದು ಆ ಸಮಯದಲ್ಲಿ ಗೊತ್ತಾಗುವುದೇ ಇಲ್ಲ. ಮನಸ್ಸಿಗೆ ಎಲ್ಲ ಸಮಯದಲ್ಲೂ ಸಹಾನುಭೂತಿ ತೋರುವವರು ಯಾರು? ಅಷ್ಟಕ್ಕೂ ನಾವು ಸಂತಸದಿಂದ ಇರಬೇಕಾದರೆ, ಬೇರೆಯವರ ಮಾತುಗಳ ಮೇಲೆ ಅವಲಂಬಿತರಾಗಿರಬೇಕಾ? ಅದು ಮನದಿಂದ ಪುಟಿಯಲು ಸಾಧ್ಯವಿಲ್ಲವೇ? ಮನುಷ್ಯ ಅಂದ ಮೇಲೆ ನೋವು, ದುಃಖ ಇರುವುದು ಸಹಜ. ಆದರೆ, ಬೇಕೆಂತಲೇ ದುಃಖ ಸೃಷ್ಟಿಸಿಕೊಳ್ಳುವ ಮನಸ್ಥಿತಿಗೆ ಏನನ್ನೋಣ? ಅಂತಹ ಮನೋಭಾವ ನಮ್ಮದಾಗಬೇಕಾ? ನಾವೂ ಸಂತಸಪಡದೇ, ನಮ್ಮ ಸುತ್ತಲಿನವರನ್ನೂ ಖುಷಿಪಡಿಸದೇ ಇದ್ದುಬಿಟ್ಟರೆ ಏನು ಚೆಂದ? ಅನಗತ್ಯ ಏನನ್ನಾದರೂ ಚಿಂತಿಸದೇ ಇದ್ದರೆ ಕಾರಣಗಳಿಲ್ಲದೆಯೂ ಖುಷಿಯಾಗಿರಲು ಸಾಧ್ಯ. ಅಷ್ಟಕ್ಕೂ ದುಃಖಕ್ಕಾದರೆ ಏನಾದರೂ ಕಾರಣ ಬೇಕು. ಖುಷಿಯಾಗಿರಲು ಕಾರಣ ಬೇಕೆಂದಿಲ್ಲವಲ್ಲ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.