ADVERTISEMENT

ಓಶೋ ಹೇಳಿದ ಕಥೆಗಳು: ಅಲ್ಲಿದೆ ಇಲ್ಲಿದೆ ಸರಿ! ನಿನ್ನ ತಲೆಯಲ್ಲೇನಿದೆ?

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಫೆಬ್ರುವರಿ 2026, 12:21 IST
Last Updated 5 ಫೆಬ್ರುವರಿ 2026, 12:21 IST
<div class="paragraphs"><p>ಓಶೋ</p></div>

ಓಶೋ

   

ಓಶೋ ಅವರು ಯೋಗಸೂತ್ರಗಳ ಬಗ್ಗೆ ಉಪನ್ಯಾಸವನ್ನು ನೀಡುತ್ತಿದ್ದರು. ಉಪನ್ಯಾಸ ಮುಗಿಯಿತು. ಅದನ್ನು ಕೇಳುತ್ತಿದ್ದವರಲ್ಲೊಬ್ಬ ಅವರಲ್ಲಿಗೆ ಬಂದ. ‘ನೀವು ಇಂದು ಹೇಳಿದ ವಿಷಯಗಳೆಲ್ಲವೂ ಪುಸ್ತಕದಲ್ಲಿದೆ’ ಎಂದು ಉದ್ಗರಿಸಿದ.

ಇಂಥ ಮಾತನ್ನು ಕೇಳಿದರೆ ಎಂಥವರಿಗೂ ಸಿಟ್ಟು ಬಂದೇ ಬರುತ್ತದೆ. ಓಶೋಗೂ ಸಿಟ್ಟು ಬಂದೇ ಬಂದಿರುತ್ತದೆ. ಈ ಸಂದರ್ಭದ ಬಗ್ಗೆ ಅವರು ಆಡಿರುವ ಮಾತುಗಳು ಸ್ವಾರಸ್ಯಕರವಾಗಿವೆ. 

ADVERTISEMENT

‘ಈಗಾಗಲೇ ಆ ವ್ಯಕ್ತಿಗೆ ಯೋಗಸೂತ್ರಗಳು ಅರ್ಥವಾಗಿದಿದ್ದರೆ ಇಂದು ಅವನು ನನ್ನ ಉಪನ್ಯಾಸಕ್ಕೆ ಬರುತ್ತಲೇ ಇರಲಿಲ್ಲ’ ಎನ್ನುತ್ತಾರೆ, ಓಶೋ. ಅವನು ಯೋಗಸೂತ್ರಗಳನ್ನು ಚೆನ್ನಾಗಿಯೇ ಓದಿರಬಹುದು; ಅದಕ್ಕೆ ಗೌರವವನ್ನೂ ಕೊಡುತ್ತಿರಬಹುದು. ಆದರೆ ಅದರಿಂದ ಆದ ಪ್ರಯೋಜನವೇನು? ಇದು ಓಶೋ ಪ್ರಶ್ನೆ. ಯೋಗಸೂತ್ರಗಳು ಅವನು ನಿಜವಾಗಿಯೂ ಅರ್ಥವಾಗಿದಿದ್ದರೆ, ಅದರ ಬಗ್ಗೆ ದಿಟವಾಗಿಯೂ ಅವನಿಗೆ ಗೌರವ ಇದಿದ್ದರೆ ಆಗ ಅವನು ಅದರ ವಿಷಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದ. ಅವನು ಯೋಗಸೂತ್ರವನ್ನು ತಿಳಿದುಕೊಳ್ಳಲು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಇನ್ನೂ ಅಲೆಯುತ್ತಿರುವ ಎಂದರೆ ಅವನಿಗೆ ಅದರ ಮರ್ಮ ಅರಿವಿಗೆ ಬಂದಿಲ್ಲ ಎಂದೇ ಅರ್ಥ. ಒಂದೋ ಅವನು ಮೂರ್ಖ, ಇಲ್ಲವೆ ಅಹಂಕಾರಿ, ಅಷ್ಟೆ!  

‘ನಿಮಗೆ ವಿಷಯ ಗೊತ್ತಿದೆ ಎಂದಮಾತ್ರಕ್ಕೆ ಆ ವಿಷಯ ಸರಿಯೇ ಆಗಿರುತ್ತದೆ ಎಂದೇನಿಲ್ಲ; ಅದು ನಿಮ್ಮಲ್ಲಿ ಕಾರ್ಯರೂಪಕ್ಕೆ ಬರಬೇಕು; ಅದರಿಂದ ನೀವು ಫಲವನ್ನು ಪಡೆದಿರಬೇಕು. ಆಗ ಮಾತ್ರವೇ ಅದು ಸರಿಯಾದ ಸಂಗತಿ ಎನಿಸಿಕೊಳ್ಳಲು ಅರ್ಹ’ ಎಂಬುದು ಓಶೋ ಅವರ ಮಾತಿನ ತಾತ್ಪರ್ಯ. 

ನಮ್ಮಲ್ಲಿ ಕೆಲವರು ಇರುತ್ತಾರೆ; ನಾವು ಹೇಳುವುದನ್ನೆಲ್ಲ ಕಿವಿಗೊಟ್ಟು ಕೇಳುತ್ತಾರೆ; ಕೊನೆಯಲ್ಲಿ ‘ಇದೆಲ್ಲ ನನಗೆ ಗೊತ್ತಿತ್ತು’ ಎಂದು ಉದ್ಗರಿಸುತ್ತಾರೆ! ಇದೊಂದು ವಿಧದ ರೋಗವೇ ಹೌದು. ಅವರಿಗೆ ಮೊದಲೇ ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಿದಿದ್ದರೆ ನಮ್ಮನ್ನು ಯಾಕಾದರೂ ಕೇಳಬೇಕಿತ್ತು!? ಇಂಥವರಿಗೆ ತಮ್ಮನ್ನು ತಾವು ಬುದ್ಧಿವಂತರೆಂದು ತೋರಿಸಿಕೊಳ್ಳುವ ಚಟ. ಆದರೆ ಜೀವನ ಇಂಥ ಪ್ರದರ್ಶನಗಳಿಂದ ಸುಂದರವಾಗದು, ಸಂತಸವಾಗಲಾರದು.

ನಮ್ಮ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಸಂಗತಿಗಳನ್ನು ಕೇವಲ ಪುಸ್ತಕದಲ್ಲಿ ಓದಿದರಷ್ಟೆ ಸಾಲದು, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೂ ಪ್ರಯತ್ನಿಸಬೇಕು. ಆಗಷ್ಟೆ ಅದು ವಿದ್ಯೆ ಎನಿಸಿಕೊಳ್ಳುತ್ತದೆ. 

ಪ್ರಪಂಚದಲ್ಲಿ ಪ್ರತಿ ಕ್ಷಣವೂ ಹೊಸ ಹೊಸ ವಿಷಯಗಳನ್ನೇ ಕಂಡುಹಿಡಿದು ಅವುಗಳ ಬಗ್ಗೆಯಷ್ಟೆ ಮಾತನಾಡಲು ಸಾಧ್ಯವಿಲ್ಲ. ಜೀವನದ ನೆಮ್ಮದಿಗೆ ಬೇಕಾಗುವ ಮೂಲಭೂತ ಸಂಗತಿಗಳು ಕೆಲವು ಮಾತ್ರವೇ. ಅವುಗಳನ್ನು ಜ್ಞಾನಿಗಳು ನಮಗಾಗಿ ಸೂತ್ರಗಳ ರೂಪದಲ್ಲಿ ಒದಗಿಸಿರುತ್ತಾರೆ. ನಾವು ಅವುಗಳನ್ನು ಚೆನ್ನಾಗಿ ಗ್ರಹಿಸಿ, ತಲೆಯಲ್ಲಿ ತುಂಬಿಸಿಕೊಳ್ಳಬೇಕು. ಬಳಿಕ ನಮ್ಮ ತಲೆಯಿಂದ ಅವನ್ನು ಹೃದಯಕ್ಕೆ ಬರಮಾಡಿಕೊಳ್ಳಬೇಕು; ಬದುಕಿನಲ್ಲಿ ಅನ್ವಯಿಸಿಕೊಳ್ಳಬೇಕು. ಆಗ ನಮ್ಮ ಬಾಳು ಸರಳವಾಗುತ್ತದೆ; ಸುಂದರವಾಗುತ್ತದೆ. ಹೀಗಲ್ಲದೆ ಕೇವಲ ಕುತೂಹಲದಿಂದ ‘ಆ ಪುಸ್ತಕದಲ್ಲಿ ಹೀಗೆ ಹೇಳಿದೆ, ಈ ಪುಸ್ತಕದಲ್ಲಿ ಹೀಗೆ ಹೇಳಿದೆ’ ಎಂದು ವಾದಗಳನ್ನು ಮಾಡುತ್ತ ಕುಳಿತರೆ ಜೀವನದ ಸಾರ್ಥಕತೆಗೆ ಅದರಿಂದ ಹೆಚ್ಚಿನ ಪ್ರಯೋಜನವಿರದು. ಓಶೋ ಆಗಲಿ, ಯಾರೋ ಇನ್ನೊಬ್ಬ ಚಿಂತಕನಿರಲಿ, ಜೀವನದ ಬಗ್ಗೆ ಅವರು ಹೇಳುವುದು ಅಥವಾ ಹೇಳುತ್ತಿರುವುದು ಈಗಾಗಲೇ ನಮಗೆ ಗೊತ್ತಿರುವ ಅಥವಾ ನಾವು ಓದಿರುವ ಸಂಗತಿಯೇ ಇರಬಹುದು. ಆದರೆ ಆ ವಿಷಯ ‘ನಮ್ಮ’ದಾಗುವುದು ಅದನ್ನು ನಾವು ನಮ್ಮ ಜೀವನದಲ್ಲಿ ಅವಳವಡಿಸಿಕೊಂಡಾಗ ಮಾತ್ರ. ಅಧ್ಯಾತ್ಮ ಎನ್ನುವುದು ವಾದಕ್ಕೆ ಇರುವ ವಸ್ತುವಲ್ಲ, ಅದು ಅನುಸಂಧಾನದ ಮಾರ್ಗ. ಇದನ್ನೇ ಡಿವಿಜಿಯವರು ಕೂಡ ಹೇಳುತ್ತಾರೆ:

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ।
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ॥
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ।
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ॥
 

ಓಶೋ ಕಥೆಗಳ ಅರಿವು–ನಲಿವುಗಳ ಮೂಲಕ ನಮ್ಮ ಜೀವನದ ದಾರಿಯನ್ನು ಸುಗಮಗೊಳಿಸಿಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.