ಬೇಕಿದ್ದರೆ ನೋಡಿ, ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗುವುದು ನಮ್ಮ ವೃಥಾ ಆತಂಕದಿಂದಲೇ; ಅವು ಉಲ್ಭಗೊಳ್ಳುವುದೂ ನಮ್ಮಿಂದಲೇ. ಅಸಲಿಗೆ ಅವು ಸಮಸ್ಯೆಯೇ ಆಗಿರುವುದಿಲ್ಲ.
ಏನಾಗಿಬಿಡುತ್ತದೋ ಏನೋ, ನಾವಂದುಕೊಂಡದ್ದು ಆಗುತ್ತದೋ ಇಲ್ಲವೋ, ಇಷ್ಟು ದೊಡ್ಡ ಜವಾಬ್ದಾರಿಯನ್ನು ನಾನು ಹೇಗೆ ನಿರ್ವಹಿಸುವುದು, ಒಂದೊಮ್ಮೆ ಆಗದೇ ಹೋದರೆ, ಇಲ್ಲ ಎಲ್ಲವೂ ಮುಗಿದು ಹೋಯಿತು, ಇನ್ನು ಮುಳುಗುವುದೊಂದೇ ದಾರಿ... ಇಂಥ ಮನೋಭಾವ ನಮ್ಮೆಲ್ಲರನ್ನೂ ಜೀವನದಲ್ಲಿ ಒಮ್ಮೆಯಾದರೂ, ಕೆಲವರ ಜೀವನದಲ್ಲಿ ಆಗಾಗ ಕಾಡುತ್ತಲೇ ಇರುತ್ತವೆ.
ನೆನಪಿಡಿ, ಇದು ಒಂದು ರೀತಿಯಲ್ಲಿ ನಮ್ಮೊಳಗಿನ ಹಿಂಜರಿಕೆಯೂ ಇರಬಹುದು. ಯಾವುದೇ ಕೆಲಸಕ್ಕೆ ಮುನ್ನ ಅದರ ಯಶಸ್ಸಿನ ಬಗ್ಗೆ ಅನುಮಾನಗಳು ಕಾಡುವುದು ದೌರ್ಬಲ್ಯದ ಸಂಕೇತ. ಹಾಗೆಂದು ಅತಿಯಾದ ವಿಶ್ವಾಸವನ್ನಾಗಲೀ, ಅಹಮಿಕೆಯನ್ನಾಗಲೀ ಬೆಳೆಸಿಕೊಳ್ಳಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಸೂಕ್ತ ಸಿದ್ಧತೆಗಳಿಲ್ಲದಿದ್ದಾಗ, ನಮ್ಮ ಮನಃಸ್ಥಿತಿಯನ್ನು ನಮ್ಮ ಮುಂದಿನ ಸವಾಲಿಗೆ ಸಜ್ಜುಗೊಳಿಸಿಕೊಳ್ಳದಿದ್ದಾಗ ಹೀಗಾಗುತ್ತದೆ. ಹಾಗೆಂದು ಹಿಂದೆ ಮುಂದೆ ಯೋಚಿಸದೇ ನುಗ್ಗಿಬಿಡಬೇಕೆಂದೂ ಅಲ್ಲ. ಹೇಗಾದರೆ, ಹೇಗಾದೀತು ಎಂಬ ಕುರಿತು ಸಾಕಷ್ಟು ಬಾರಿ ಚಿಂತಿಸುವುದು ಒಳ್ಳೆಯದೇ. ಆದರೆ ಒಂದೊಮ್ಮೆ ಹಾಗಾದರೆ ನಾನು ಏನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು.
ಯಾವುದರಲ್ಲೇ ಆಗಲಿ, ಸೋಲು ಗೆಲವುಗಳೆರಡೂ ಇದ್ದೇ ಇರುತ್ತದೆ. ಮಾತ್ರವಲ್ಲ ಯಾವುದನ್ನೂ ‘ಇದೇನು ಮಹಾ ಘನಕಾರ್ಯ‘ ಎಂಬ ಅತಿವಿಶ್ವಾಸವೂ ಸಲ್ಲ. ಒಂದು ಹಂತದಲ್ಲಿ ತಣ್ಣಗೆ ಕುಳಿತು ನಾವೇನು ಮಾಡಬೇಕಿದೆ, ಅದರ ಸಾಧಕಬಾಧಕಗಳೇನು, ಈ ಬಗ್ಗೆ ನಮ್ಮೊಳಗಿರುವ ಅನುಭವ ಎಷ್ಟು, ಇದಕ್ಕೆ ಮತ್ತಿನ್ಯಾರದ್ದಾದರೂ ಸಹಾಯದ ಅಗತ್ಯವಿದೆಯೆ... ಎಂಬಿತ್ಯಾದಿಗಳ ಕುರಿತು ಸುದೀರ್ಘ ಚಿಂತನೆ, ಚರ್ಚೆ ನಡೆಸಬೇಕು. ಈ ಹಂತದಲ್ಲಿ ಬರುವ ಎಲ್ಲ ಸಲಹೆಗಳನ್ನೂ ತೆಗೆದುಕೊಳ್ಳುತ್ತಾ ಹೊರಟರೆ ಗೊಂದಲಗಳಾಗುತ್ತವೆ. ಎಲ್ಲವನ್ನೂ ಕೇಳಿಸಿಕೊಂಡು ಸೂಕ್ತ ಎಂದೆನಿಸುವ ಒಂದು ದಾರಿಯಲ್ಲಿ ಮುನ್ನಡೆಯಬೇಕು.
ನಾವು ಹೊರಟ ಹಾದಿಯಲ್ಲಿ ಹಿಂದೆ ಮೂರ್ನಾಲ್ಕುಜನ ಮುಗ್ಗರಿಸಿರಲೂ ಬಹುದು. ಅಂದ ಮಾತ್ರಕ್ಕೆ ನಾವೂ ಹಾಗೆಯೇ ಆಗಿಬಿಡುತ್ತೇವೆ ಎಂದೇನೂ ಅಲ್ಲ. ಅವರ ಸೋಲಿಗೆ ಕಾರಣಗಳು ಬೇರೆಯದೇ ಆಗಿರಬಹುದು. ಅಥವಾ ಅವರ ಅಸಾಮರ್ಥ್ಯವೂ ಇರಬಹುದು. ಒಂದೊಮ್ಮೆ ಹಾಗೆ ಮುಗ್ಗರಿಸಿದವರಿದ್ದರೆ, ಅವರ ಸೋಲಿಗೆ ಕಾರಣಗಳೇನು, ಅವರು ಮಾಡಿದ ತಪ್ಪುಗಳೇನು ಎಂಬುದನ್ನು ಗ್ರಹಿಸಿ, ನಮ್ಮ ವಿಚಾರದಲ್ಲಿ ಹಾಗಾಗದಂತೆ ಮುನ್ನಚ್ಚರಿಕೆ ವಹಿಸುವುದು ಒಳಿತು. ಕೆಲವರು ಎಡವಿದ ಹಾದಿಯೇ ನಮಗೆ ರಾಜಮಾರ್ಗ. ಏಕೆಂದರೆ ಅಂಥ ಹಾದಿಯನ್ನು ಆಯ್ಕೆ ಮಾಡಿಕೊಳ್ಳವವರ ಸಂಖ್ಯೆ ಕಡಿಮೆ ಇರುತ್ತದೆ. ಮೊದಲ ಹಂತದ ಸ್ಪರ್ಧೆ ತನ್ನಿಂದ ತಾನೇ ಇಲ್ಲವಾಗಿರುತ್ತದೆ. ಯಾವುದೂ ಶಾಶ್ವತ ಸೋಲಿನ ಹಾದಿ ಎಂಬುದು ಇರುವುದೇ ಇಲ್ಲ. ಅದು ಗೆಲ್ಲಲು ಗೊತ್ತಿಲ್ಲದವರು ಮಾಡಿಟ್ಟ ಭ್ರಮೆಯಷ್ಟೇ. ಅಷ್ಟಕ್ಕೂ ನಾವು ಆ ಹಾದಿಯಲ್ಲಿ ನಡೆಯುವ ಗೋಜಿಗೇ ಹೋಗದೇ ಕಲ್ಪನೆಯಲ್ಲೇ ಸೋತುಬಿಡಬಹುದೇನೋ ಎಂದು ಆತಂಕ ಪಡುವುದು ನಿಜಕ್ಕೂ ಮೂರ್ಖತನ. ಒಂದೊಮ್ಮೆ ನಮ್ಮಿಂದ ಯಾವುದೇ ಜವಾಬ್ದಾರಿ ನಿರ್ವಹಿಸಲೇ ಅಗಲಿಲ್ಲ ಎಂದುಕೊಳ್ಳೋಣ, ಬೇಡ ಬಿಡಿ. ಅನುಭವವೊಂದು ಜತೆಗೂಡುತ್ತದೆಯೇ ವಿನಾ ಕಳಕೊಳ್ಳುವುದು ಏನೂ ಇಲ್ಲ. ಯಾವುದೇ ಪ್ರಯತ್ನವನ್ನಾಗಲಿ ಅದನ್ನು ಇನ್ವೆಸ್ಟ್‌ಮೆಂಟ್ ಎಂದು ಭಾವಿಸಿದರೆ ವ್ಯರ್ಥ ಎಂದೆನಿಸುವುದೇ ಇಲ್ಲ. ಒಂದು ಸೋಲಿನ ಅನುಭವವನ್ನು ಮತ್ತೊಂದು ಕಡೆ ಹೂಡಿಕೆ ಮಾಡಲು ಯೋಚಿಸೋಣ. ಗೆಲವು ತನ್ನಿಂದ ತಾನೇ ದಕ್ಕುತ್ತದೆ. ಸಕ್ಸಸ್ ಸ್ಟೋರಿಗಳು ಪ್ರೇರಣೆಯನ್ನಷ್ಟೇ ನೀಡುತ್ತದೆ. ಆದರೆ ಸೋತವರ ಕಥೆಗಳು ಯಶಸ್ಸಿನ ಸಿದ್ಧ ಸೋಪಾನಗಳೆಂಬುದನ್ನು ಮರೆಯದಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.