ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಅದು ಅಸಹಾಯಕತೆಯೋ, ಬೇಸರವೋ, ನಿರಾಸೆಯೋ, ಜಿಗುಪ್ಸೆಯೋ, ವೈಯಕ್ತಿಕ ಮಿತಿಯೋ, ಸನ್ನಿವೇಶದ ಒತ್ತಡವೋ... ಯಾವುದೂ ಅಂತಲೇ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ‘ಎಷ್ಟು ಮಾಡಿದರೂ ಅಷ್ಟೇ. ಅದರ ಬದಲು ನಮ್ಮದೇನಿದೆಯೋ ಅದನ್ನಷ್ಟೇ ನೋಡಿಕೊಂಡು ಇದ್ದುಬಿಡುವುದು ಒಳ್ಳೆಯದು. ಯಾರ ಗೊಡವೆ ನಮಗೇಕೆ?’ಎಂದೆನಿಸಿಬಿಡುತ್ತದೆ. ಹಾಗಂತ ಅದು ಭಾವತೀವ್ರತೆಯ ಸೆಳಕಲ್ಲ, ಒಂದು ರೀತಿಯ ನಿರ್ಲಿಪ್ತತೆ. ಅದಕ್ಕೆ ಕಾರಣಗಳೇ ಬೇಕಿಲ್ಲ.
ಜವಾಬ್ದಾರಿಯನ್ನು, ಕರ್ತವ್ಯವನ್ನು ಪೂರೈಸುವ ಜೀವನದ ಓಟದಲ್ಲಿ ಒಮ್ಮೊಮ್ಮೆ ಕವಿಯುವ ಕಾರ್ಮೋಡ. ‘ಯಾರನ್ನು ಎಷ್ಟು ಕಾಳಜಿಯಿಂದ ನೋಡಿಕೊಂಡು ಏನಾಗಬೇಕಿದೆ? ಏನು ಮಾಡಿದರೂ ಜಗತ್ತಿನ ಆಗುಹೋಗುಗಳನ್ನು ತಪ್ಪಿಸಲು ನಮ್ಮಿಂದ ಸಾಧ್ಯವೇ? ಅವರವರ ಬದುಕು ಅವರದ್ದೇ. ನಾವೇ ಮೂರ್ಖರು, ಎಲ್ಲರನ್ನೂ ನಮ್ಮವರು ಎಂದುಕೊಂಡು ಏನೋ ಮಾಡಲು ಮುಂದಾಗುತ್ತೇವೆ. ಆದರೆ ಅವರಿಗೆ ಇದು ಅರ್ಥವಾಗುವದೇ ಇಲ್ಲ’ ಎಂಬಿತ್ಯಾದಿ ಆಲೋಚನೆಗಳಿಗೆ ಕೊನೆಯೇ ಇರುವುದಿಲ್ಲ. ಹೊರಗಿನವರು, ಬಂಧೂಗಳು, ಸ್ನೇಹಿತರು ಇಂಥವರನ್ನೆಲ್ಲ ಬಿಡಿ. ಒಮ್ಮೊಮ್ಮೆ ಸ್ವತಃ ಅಣ್ಣ ತಮ್ಮಂದಿರು, ಅಕ್ಕತಂಗಿಯರು, ಮಕ್ಕಳು, ಕೊನೆಗೆ ಸಂಗಾತಿಯ ಬಗೆಗೂ ಇಂಥದ್ದೊಂದು ಬೇಸರ ಮನದಲ್ಲಿ ಮೂಡಿಬಿಡುತ್ತದೆ. ಒಂದರ್ಥದಲ್ಲಿ ಅವೆಲ್ಲ ನಿಜವೆಂದು ಕಂಡರೂ, ಹಾಗೆಯೇ ಬದುಕಿದರೆ ಅದಕ್ಕೆ ಅರ್ಥವೇನು ಹೇಳಿ? ಆಯಿತು, ಒಮ್ಮೆ ಅಂತಹ ಕಹಿ ಭಾವನೆಗಳು ಮನದಲ್ಲಿ ಮೂಡಿದ ಬಳಿಕ ಹಾಗೆಯೇ ನಡೆದುಕೊಳ್ಳಲು ಯತ್ನಿಸಿ ನೋಡಿ. ಅದು ಸಾಧ್ಯವಾ?
ಹುಟ್ಟಿದಾಗಿನಿಂದ ಅಷ್ಟು ದಿನಗಳ ಕಾಲ ಸುತ್ತಲ ಪ್ರಪಂಚದ ಕಷ್ಟಸುಖಗಳಿಗೆ ಸ್ಪಂದಿಸುತ್ತ ಬೆಳೆದವರಿಗೆ ಏಕಾಏಕಿ ಹಾಗೆ ಅವುಗಳಿಂದ ದೂರವಾಗಲು ಸಾಧ್ಯವಿಲ್ಲ. ಅಥವಾ ಬಹುಕಾಲದಿಂದ ಒಟ್ಟಿಗೆ ಬಾಳಿದ, ಒಡನಾಡಿದ, ಪೊರೆದ, ಜತೆಗೇ ಬೆಳೆದವರನ್ನು ಯಾವುದೋ ಸನ್ನಿವೇಶದ ಒಂದು ಕಹಿಯಿಂದ ದೂರಮಾಡುವುದು ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಅಂತಹ ನಿರ್ಧಾರ ಹೆಚ್ಚು ಕಾಲ ಬಾಳುವುದೂ ಇಲ್ಲ. ಅದನ್ನು ಕೈ ಬಿಡುವುದೇ ಒಳಿತು. ಹೌದು, ಎಂತಹ ತಾಳ್ಮೆಯುಳ್ಳವರಿಗೂ ಮನಕೆಡಿಸುವ ವಿಚಾರಗಳು ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಮನಸ್ಸನ್ನು ಹಾಳುಮಾಡಿಕೊಂಡು ಎಲ್ಲರಿಂದ ದೂರವಾಗಿ ಬಿಡುತ್ತೇನೆ ಎಂದು ನಿರ್ಧರಿಸಿಬಿಟ್ಟರೆ ಎಲ್ಲ ಸರಿ ಹೋಗುತ್ತದೆಯಾ?
ಹೀಗಾಗಿ ಅವೆಷ್ಟೇ ಸಂದರ್ಭಗಳು ಎದುರಾಗಲಿ, ನಮ್ಮ ಮನಃಸ್ಥಿತಿಯನ್ನು ಬದಲಿಸಿಕೊಳ್ಳದೇ, ನಮ್ಮ ಹತ್ತಿರದವರ ಮೇಲೆ ಯುದ್ಧ ಸಾರದೇ ಬದುಕಿಬಿಡೋಣ. ಇಂತಹ ಮನಸ್ಥಿತಿಯಿಂದ ನಮ್ಮ ಎಲ್ಲ ಸಮಸ್ಯೆಗಳು ದೂರವಾಗಿ ಬಿಡುತ್ತವೆ ಎಂದಲ್ಲ, ಬದಲಿಗೆ ಅವು ನಮ್ಮಂಥದ್ದೇ ಅನೇಕ ಮನಸ್ಸುಗಳನ್ನು ಹತ್ತಿರ ಮಾಡುತ್ತದೆ. ಇನ್ನೇನು ಬೇಕು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.