
ಬಹಳಷ್ಟು ಬಾರಿ ಕೇಳಿರುತ್ತೇವೆ– ‘ಅಯ್ಯೋ ಅವನನ್ನು ಬದಲಿಸಲು ಸಾಧ್ಯವೇ ಇಲ್ಲ, ಎಷ್ಟೆಲ್ಲ ಪ್ರಯತ್ನ ಮಾಡಿ ಆಯಿತು, ಎಷ್ಟು ಹೇಳಿದರೂ ಬುದ್ಧಿ ಬರೊಲ್ಲ ಬಿಡು, ಕರಿ ನಾಯಿನ ಬಿಳಿ ನಾಯಿ ಮಾಡೋದೂ ಒಂದೇ, ಅವನನ್ನು ಬದಲಿಸೋದೂ ಒಂದೇ...’ ಹೀಗೆ ಕೆಲವೊಮ್ಮೆ ಕಾಳಜಿಯಿಂದ, ಕೆಲವೊಮ್ಮೆ ಬೇಸರ, ಜುಗುಪ್ಸೆಗಳಿಂದ, ಬಹಳಷ್ಟು ಬಾರಿ ಹತಾಷೆಯಿಂದ ಒಂದಷ್ಟು ಮಂದಿ ಮಾತನಾಡುವುದನ್ನು ಕೇಳಿಯೇ ಇರುತ್ತೇವೆ. ಸತ್ಯ ಏನು ಗೊತ್ತಾ? ಯಾರನ್ನೂ ಯಾರೂ ಬದಲಾಯಿಸುತ್ತೇವೆ ಎಂಬುದು ವ್ಯರ್ಥ ಮಾತು. ಖುದ್ದು ಅವರೇ ಮನಸು ಮಾಡದ ಹೊರತೂ ಹಾಗೆ ಯಾರನ್ನೂ ಬದಲಾಯಿಸಲು ಸಾಧ್ಯವೇ ಇಲ್ಲ. ಆದರೆ, ಒಂದೊಮ್ಮೆ ಅವರೇ ತಾವು ಬದಲಾಗಬೇಕೆಂದು ಬಯಿಸಿದರೆ ಖಂಡಿತಾ ದಿನ ಬೆಳಗಾಗುವುದರೊಳಗೆ ಬದಲಾಗಿಬಿಡುತ್ತಾರೆ.
ಹೌದು, ಬದುಕು ಬದಲಾಯಿಸಿಕೊಳ್ಳಲು ಅಥವಾ ಬದಲಾಗಲು ಬಾರೀ ಸಮಯವೇನೂ ಬೇಕಾಗಿಲ್ಲ. ಎಲ್ಲರೂ ಹೇಳುವಂತೆ ಅಘಟಿತವೋ, ಅಪರೂಪದ ಸನ್ನಿವೇಶಕ್ಕಾಗಿಯೋ ಕಾಯಲೇಬೇಕೆಂದೇನೂ ಇಲ್ಲ. ಇಂಥವೆಲ್ಲಾ ನೆಪವನ್ನು ನಮ್ಮ ಮನಸ್ಸು ಹೂಡುತ್ತಲೇ ಇರುತ್ತದೆ. ಅಷ್ಟೇಕೆ ನಮಗೆ ನಾವೇ ಬದಲಾಗಲೇಬಾರದು ಎಂದು ಹಠಕ್ಕೆ ಬಿದ್ದುಕೊಂಡು ವಂಚಿಸಿಕೊಳ್ಳುತ್ತಿರುತ್ತೇವೆ. ಅದು ನಮಗೂ ಗೊತ್ತು ನಾವು ಮನಸ್ಸು ಮಾಡಿದರೆ ಯಾವುದೇ ಬದಲಾವಣೆಯಾಗಲಿ ಅಂಥದ್ದಕ್ಕೆ ತೆರೆದುಕೊಳ್ಳಲು ನಮಗೆ ಒಂದೇ ಒಂದು ಕ್ಷಣ ಸಾಕು. ಮೊದಲು ನಮ್ಮೊಳಗೆ ನಾವು ನಿರ್ಧರಿಸಿಕೊಳ್ಳಬೇಕು. ಅಂಥ ನಿರ್ಧಾರರಕ್ಕೆ ನಾವು ತೆಗೆದುಕೊಳ್ಳುವುದು ಹೆಚ್ಚೆಂದರೆ ಒಮ್ಮೆ ಧಿಗ್ಗನೆದ್ದು ನಿಲ್ಲಲು ಬೇಕಿರುವಷ್ಟೇ ಸಮಯ.
ಬಹುಳಷ್ಟು ಸಂದರ್ಭದಲ್ಲಿ ನಿರ್ಧಾರವನ್ನು ಯಾವ್ಯಾವುದೋ ನೆಪವನ್ನು, ಕಾರಣಗಳನ್ನು ಒಡ್ಡಿಕೊಳ್ಳುತ್ತಾ ಮುಂದೂಡುತ್ತಲೇ ಬಂದಿರುತ್ತೇವೆ. ‘ಇವತ್ತೊಂದು ದಿನ ಬಿಟ್ಟುಬಿಡೋಣ, ನಾಳೆಯಿಂದ ಮಾಡಿದರಾಯಿತು. ನಾಳೆ ಬಹುಶಃ ಆಗಲಿಕ್ಕಿಲ್ಲ ನಾಡಿದ್ದಾಗುವಷ್ಟರಲ್ಲಿ ಆಗುವುದೇನಿದೆ. ಇಷ್ಟೇ ದಿನವೇ ಕಳೆದಿದೆಯಂತೆ ಒಂದು ದಿನದಲ್ಲಿ ತಲೆ ಹೋಗುವುದೇನಿದೆ...’ ಹೀಗೆಯೇ ನಿರ್ಧಾರವನ್ನು ಮುಂದಕ್ಕೆ ಹಾಕುತ್ತಲೇ ಬಂದಿರುತ್ತೇವೆ.
ಇಂಥ ಮನಃಸ್ಥಿತಿ ಯಾವತ್ತಿಗೂ ಅಪಾಯಕಾರಿಯೇ. ಹೀಗೆ ಮುಂದೂಡುವ ಮನೋಭಾವದವರು ಯವತ್ತಿಗೂ ಜೀವನದಲ್ಲಿ ಬದಲಾವಣೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುವುದೇ ಇಲ್ಲ. ‘ನಾನು ಹೀಗೆಯೇ ಇರುವವನು. ನಾನ್ಯಾವತ್ತೂ ಬದಲಾಗುವುದೇ ಇಲ್ಲ’ ಎಂದು ಹಠ ಮಾಡುವ ಮನಸ್ಸನ್ನು ಬೇಕಿದ್ದರೆ ಬದಲಿಸಿಬಿಡಬಹುದು. ಕಲ್ಲನ್ನು ಕಡೆದು ಒಂದು ಆಕಾರಕ್ಕೆ ತರುವುದು ಹೆಚ್ಚಿನ ಸಾಹಸವೇನಲ್ಲ. ಆದರೆ ರಬ್ಬರ್ ಅನ್ನು ನಮಗೆ ಬೇಕಾದ ಆಕಾರಕ್ಕೆ ತಂದು ನಿಲ್ಲಿಸುವುದು ಕಷ್ಟದ ಕೆಲಸ. ನಾವು ತಿರುಚಿದಂತೆ ಅದು ಸುಲಭದಲ್ಲಿ ತಿರುಗುತ್ತದೆ ಎಂಬುದು ಸತ್ಯ. ಆದರೆ ರಬ್ಬರಿನ ಮೇಲೆ ನಾವು ಒತ್ತಡ ಹೇರಿಟ್ಟುಕೊಂಡಷ್ಟೇ ಸಮಯ ಅದು ನಮಗೆ ಬೇಕಾದಂಥ ಆಕಾರದಲ್ಲಿ ಅದಿರುವುದು. ನಾವು ಬಲವನ್ನು ಸಡಿಲಿಸಿದಾಕ್ಷಣವೇ ಅದು ಮತ್ತೆ ತನ್ನ ಮೊದಲಿನ ಆಕಾರಕ್ಕೇ ಬರುತ್ತದೆ. ಕಲ್ಲು ನಾವು ಕಡಿದಿಟ್ಟಂತೆಯೇ ಉಳಿಯುತ್ತದೆ. ಕಲ್ಲನ್ನು ಕದಲಿಸಲಷ್ಟೇ ನಮ್ಮ ಪ್ರಯತ್ನ ಅಗತ್ಯ.
ಅಂಥ ಕ್ಷಣಕ್ಕೆ ಹಿಂದೆ ಮುಂದೆ ಮಾಡಬೇಡಿ. ನಿಮ್ಮನ್ನು ನೀವು ಸುಂದರ ಮೂರ್ತಿಯನ್ನಾಗಿಸಿಕೊಳ್ಳಲು ನಿಮ್ಮ ಬಂಡೆ ಮನಸ್ಸನ್ನು ತಕ್ಷಣ ಕದಲಿಸಿಕೊಳ್ಳಿ. ಮನಸ್ಸನ್ನು ರಬ್ಬರಿನಂತೆ ಜಗ್ಗಾಡುತ್ತಿರಬೇಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.