ADVERTISEMENT

ಪಿವಿ ವೈಬ್ಸ್‌: ಆರಾಮಿರಬೇಕಾ? ಇಂಥವರಿಂದ ದೂರ ಇದ್ದುಬಿಡಿ!

ಸಹನೆ
Published 27 ಜನವರಿ 2026, 0:30 IST
Last Updated 27 ಜನವರಿ 2026, 0:30 IST
   

ನಮ್ಮದಲ್ಲ ವಿಚಾರಗಳ ಬಗ್ಗೆ ಮಾತನಾಡದೇ ಇರುವುದು ಯಾವತ್ತಿಗೂ ಯೋಗ್ಯ.

ನೋಡಿ ಬೇಕಿದ್ದರೆ, ಬಹಳಷ್ಟು ಸಲ ಜಗಳಗಳು ಶುರುವುದೇ ಇದರಿಂದ. ‘ನೀನ್ಯಾರು ಇದರ ಬಗ್ಗೆ ಮಾತನಾಡೋಕ್ಕೆ. ನಿನಗೂ ಇದಕ್ಕೂ ಏನು ಸಂಬಂಧ? ನಾವು ಏನಾದ್ರೂ ಮಾಡ್ಕೋತಿವಿ. ನೀನು ಮಧ್ಯ ಬರಬೇಡ...’ ಎಂಬಂಥ ಮಾತುಗಳನ್ನು ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಸಿಕೊಂಡಿರುತ್ತೇವೆ.. ಅಥವಾ ‘ಗೊತ್ತಿಲ್ಲದೇ ಏನೇನೋ ಮಾತಾಡಬೇಡ. ನಿನಗೆ ಇದರ ಬಗ್ಗೆ ಗೊತ್ತಾ? ಏನು ಗೊತ್ತು ಹೇಳು ನೋಡೋಣ...ಏನೋ ದೊಡ್ಡ....ಇವನ ಥರಾ ಬಂದ್‌ಬಿಟ್ಟ ಮಾತಾಡಕ್ಕೆ’ ಎಂಬಂಥ ಮೂದಲಿಕೆಯನ್ನೂ ಕೆಲವು ಸಾರೆ ಕೇಳಿರುವ ಸಂದರ್ಭಗಳುಂಟು.

ಇಲ್ಲಿ ಎರಡು ಪ್ರಮುಖ ಸಂಗತಿಗಳು. ನಮ್ಮದಲ್ಲದ ಮಾತೆಂದರೆ, ನಮಗೆ ಸಂಬಂಧಿಸಿಲ್ಲದ ವಿಚಾರಗಳು ಮತ್ತು ಇನ್ನೊಂದೆಂದರೆ ನಮಗೆ ಅರಿವಿಲ್ಲದ ಸಂಗತಿಗಳು. ಈ ಎರಡ ಬಗ್ಗೆಯೂ ಮಾತನಾಡದೇ ಇರುವುದೊಳಿತು. ಏಕೆಂದರೆ ಎರಡೂ ಅಪಾಯಕಾರಿಯೇ.

ADVERTISEMENT

ಮಾತೆಂಬುದು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶವೆಂಬುದನ್ನು ಎಲ್ಲರೂ ಹೇಳಿಕೊಂಡೇ ಬಂದಿದ್ದಾರೆ. ನೂರಕ್ಕೆ ನೂರು ಇದು ಸತ್ಯ. ನಾವು ಯಾರೊಂದಿಗೆ ಹೇಗೆ ಮಾತನಾಡುತ್ತೇವೆ ಎಂಬುದರ ಮೇಲೆ ನಾವು ಎಂಥವರು ಎಂಬುದು ನಿರ್ಧಾರವಾಗುತ್ತದೆ. ಸನ್ನಿವೇಶದ ಔಚಿತ್ಯವನ್ನು ಅರಿಯದೇ ಬಾಯಿಗೆ ಬಂದಂತೆ ಮಾತನಾಡುವುದರಿಂದ ನಮ್ಮನ್ನು ಸುತ್ತಲಿನವರು ದೂರ ಇಡುವ ಸಾಧ್ಯತೆಗಳಿರುತ್ತವೆ. ಬಾಲಿಷವಾಗಿ ಎಲ್ಲೆಂದರಲ್ಲಿ ಮಾತನಾಡಿದರೆ ನಮಗೆ ವಿವಚನೆಯೇ ಇಲ್ಲವೆಂಬ ನಿರ್ಧಾರಕ್ಕೆ ಸಮಾಜ ಬಂದುಬಿಡುತ್ತದೆ. ಕೆಲವರಿಗೆ ಮಕ್ಕಳು, ಪ್ರೌಢರು, ವಯಸ್ಕರು, ವಿದ್ವಾಂಸರು, ಗೆಳೆಯರೆಂಬ ಭೇದವೇ ಇರುವುದಿಲ್ಲ. ಎಲ್ಲರೆದುರೂ ಒಂದೇ ರೀತಿಯಲ್ಲಿ ಮಾತನಾಡುತ್ತಿರುತ್ತಾರೆ. ಮಕ್ಕಳ ಬಳಿ ದೊಡ್ಡವರಂತೆ ಮಾತನಾಡಿದರೆ ಅವಕ್ಕೆ ಅರ್ಥವೇ ಆಗದೇ, ಬೋರೆನಿಸಿ ದೂರ ಹೋಗಬಿಡಬಹುದು. ಈಗಷ್ಟೇ ಪರಿಚಯವಾದವರನ್ನು ತೀರಾ ಸಲುಗೆಯಿಂದ ಮಾತನಾಡಿಸಿಬಿಟ್ಟರೆ, ವಯಸ್ಸಿನಲ್ಲಿ ತೀರಾ ಹಿರಿಯರನ್ನೂ ಪರಿಗಣಿಸದೇ ಚೆಲ್ಲು ಚೆಲ್ಲಾಗಿ ವರ್ತಿಸುವುದರಿಂದ ತಿರಸ್ಕಾರಕ್ಕೆ ಒಳಗಾಗುವ ಸಂದರ್ಭ ಇರುತ್ತದೆ. ಇನ್ನು ಮಾತನಾಡಲೇ ಬೇಕಾದ ಸಂದರ್ಭದಲ್ಲಿ ಮಾತಾಡದೇ ಇರುವುದೂ ಸಲ್ಲ. ಅಗತ್ಯವಿಲ್ಲದೆಡೆ ಅತಿಯಾಗಿ ಹರಟುವುದೂ ವಾಚಾಳಿತನ ಎನಿಸಿಕೊಳ್ಳುತ್ತದೆ.

ಇವೆಲ್ಲವೂ ಮಾತಿನ ಔಚಿತ್ಯದ ಬಗ್ಗೆಯಾಯಿತು. ವಿಷಯ ಅದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೆಲವರಿಗೆ ತಮಗೆ ಸಂಬಂಧವೇ ಇಲ್ಲದ ಸಂಗತಿ, ವ್ಯಕ್ತಿಗಳ ಖಾಸಗೀ ವಿಚಾರಗಳ ಬಗ್ಗೆ ಮಾತನಾಡುವುದೇ ಚಟವಾಗಿಬಿಟ್ಟಿರುತ್ತದೆ. ಬೇರೆಯವರ ಕುಟುಂಬದ ಬಗೆಗೆ, ಅವರ ವರ್ತನೆಗಳ ಕುರಿತು, ಇಲ್ಲವೇ ಯಾರದ್ದೋ ಸಂಬಂಧ, ಕಚೇರಿ ವ್ಯವಹಾರ ಹೀಗೆ ಒಟ್ಟಾರೆ ಒಂದಲ್ಲಾ ಒಂದು ಗುಲ್ಲೆಬ್ಬಿಸುತ್ತಲೇ ಇರುತ್ತಾರೆ ಅಂಥವರು. ಸ್ವಲ್ಪವೇ ಗೊತ್ತಿದ್ದರೂ ಅವರ ಬಗ್ಗೆ ಏನೆಲ್ಲ ಮಾಹಿತಿಗಳು ತನಗೆ ಗೊತ್ತಿವೆ, ಅವು ತನಗೆ ಮಾತ್ರ ಗೊತ್ತಿರುವಂಥ ವಿಚಾರಗಳು ಎಂಬ ರೀತಿಯಲ್ಲಿ ಪಿಸುಗುಡುತ್ತಲೇ ಇರುತ್ತಾರೆ. ಗಾಸಿಪ್‌ಗಳನ್ನು ಹರಡುವುದರಲ್ಲೇ ಅವರಿಗೊಂಥರಾ ತೃಪ್ತಿ. ಯಾರಾದರೊಬ್ಬರ ಬಗ್ಗೆ ಹೇಳುತ್ತಾ ಇಲ್ಲದಿದ್ದರೆ, ವ್ಯಂಗ್ಯವೋ, ಟೀಕೆಯೋ, ಕುಹಕವೋ ಮಾಡದಿದ್ದರೆ ಅವರಿಗೆ ತೃಪ್ತಿಯೇ ಇರುವುದಿಲ್ಲ. ಇದು ಮುಗ್ಧ, ಅಶಿಕ್ಷಿತ ವರ್ಗದವರಲ್ಲಿ ಮಾತ್ರ ಕಾಣಿಸಿಕೊಳ್ಳವ ರೋಗವೆಂದುಕೊಳ್ಳಬೇಡಿ. ಹಾಗೆ ನೋಡಿದರೆ ಸಿಎ, ಎಂಬಿಎ, ಎಂಸಿಎ, ಎಂಜಿನಿಯರಿಂಗ್, ವೈದ್ಯ ಹೀಗೆ ಉನ್ನತ ಪದವಿ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳಲ್ಲಿ ಇರುವವರಿಗೂ ಈ ರೋಗ ಬಡಿದಿರುತ್ತದೆ.

ಇನ್ನು ಕೆಲವರು ಇರುತ್ತಾರೆ ಜಗತ್ತಿನ ಎಲ್ಲ ವಿಚಾರಗಳೂ ತಮಗೆ ಗೊತ್ತು ಎಂಬಂಥ ೆಸುಕೊಡುವವರು. ಯಾವುದೇ ವಿಚಾರಗಳ ಬಗ್ಗೆ ಅವರನ್ನು ಕೇಳಿ ನೋಡಿ, ಅದರಲ್ಲಿ ತಾವೇ ತಜ್ಞರು ಎಂಬಂತೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಾರೆ. ಮಾತಿನ ಔಚಿತ್ಯವನ್ನು ಅರಿಯದವರಿಂದ ಅಪಾಯಗಳಿಲ್ಲ. ಆದರೆ ಈ ಮಾತಿನ ರೋಗ ಅಂಟಿಸಿಕೊಂಡ ವ್ಯಕ್ತಿಗಳಿಂದ ಯಾವತ್ತಿದ್ದರೂ ಅಪಾಯ ಕಟ್ಟಿಟ್ಟದ್ದೇ. ಹೀಗಾಗಿ ಬದುಕಿನಲ್ಲಿ ಇಂಥವರನ್ನು ದೂರ ಇಡುವುದು ಬುದ್ಧಿವಂತಿಕೆಯಷ್ಟೇ ಅಲ್ಲ, ಕ್ಷೇಮವೂ ಸಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.