
ಪಕ್ಷದ ನೂತನ ಸಾರಥಿಗಾಗಿ ವರ್ಷದಿಂದ ಹುಡುಕಾಟ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ–ಅಮಿತ್ ಶಾ ಜೋಡಿ ಅವರು ಹೆಕ್ಕಿ ತಂದಿದ್ದು ಬಿಹಾರದ ನವೀನ್ ಅವರನ್ನು. 45 ಹರೆಯದ ಅವರು ಈಗ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷದ ಅತೀ ಕಿರಿಯ ಅಧ್ಯಕ್ಷ. 1980ರಲ್ಲಿ ಜನ್ಮ ತಳೆದ ಬಿಜೆಪಿಗಿಂತ ನವೀನ್ ಅವರು ಒಂದು ವರ್ಷ ಕಿರಿಯರು ಅಷ್ಟೇ. ‘2047ರ ವಿಕಸಿತ ಭಾರತ’ದ ಸಂಕಲ್ಪ ತೊಟ್ಟಿರುವ ಮೋದಿ ಹಾಗೂ ಬಿಜೆಪಿಗೆ ಅವರು ಈಗ ‘ಬಾಸ್’
ಛತ್ತೀಸಗಢ ವಿಧಾನಸಭೆಗೆ 2018ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಕೇವಲ 15 ಸ್ಥಾನಗಳನ್ನು ಗಳಿಸಿ ಹೀನಾಯವಾಗಿ ಸೋತಿತ್ತು. ಈ ಸೋಲಿನಿಂದ ಪಕ್ಷದ ನಾಯಕರ ಜಂಘಾಬಲ ಉಡುಗಿಹೋಗಿತ್ತು. ರಾಜ್ಯ ಘಟಕದಲ್ಲಿ ಬಣ ಕಿತ್ತಾಟ ತೀವ್ರವಾಗಿತ್ತು. 2019ರಲ್ಲಿ ಬಿಹಾರದ ಶಾಸಕ ನಿತಿನ್ ನವೀನ್ ಅವರನ್ನು ಛತ್ತೀಸಗಢ ರಾಜ್ಯ ಸಹಉಸ್ತುವಾರಿಯಾಗಿ ವರಿಷ್ಠರು ನೇಮಿಸಿದ್ದರು. ಹೊಣೆ ಹೊತ್ತುಕೊಂಡ ಬಳಿಕ ನವೀನ್ ಅವರು ರಾಜ್ಯ ನಾಯಕರನ್ನು ಭೇಟಿ ಮಾಡುತ್ತಾ ಕಾಲಹರಣ ಮಾಡಲಿಲ್ಲ. ಖುದ್ದಾಗಿ ತಳಮಟ್ಟದ ನಾಯಕರನ್ನು ಭೇಟಿ ಮಾಡಿ ಸಂಘಟನೆ ಚುರುಕುಗೊಳಿಸಿದರು. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ನವೀನ್ 2021ರಲ್ಲೇ ‘ಭವಿಷ್ಯ’ ನುಡಿದಿದ್ದರು. ಅವರ ಮಾತನ್ನು ಕೇಳಿ ನಕ್ಕವರೇ ಜಾಸ್ತಿ. ಆಗ ಭೂಪೇಶ್ ಬಘೆಲ್ ಅವರ ಜನಪ್ರಿಯ ನಾಯಕತ್ವ ಹಾಗೂ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಕಾಂಗ್ರೆಸ್ ಸುಲಲಿತವಾಗಿ ಮರಳಿ ಗೆಲ್ಲಲಿದೆ ಎಂಬ ವಾತಾವರಣ ಇತ್ತು.
ನವೀನ್ ಅವರು ಗ್ರಾಮ ಗ್ರಾಮಗಳಿಗೆ ಸುತ್ತಾಡಿ ಕಾರ್ಯಕರ್ತರೊಂದಿಗೆ ಬೆರೆತು ಸಂಘಟನಾ ಚಟುವಟಿಕೆಗೆ ಹೊಸ ರೂಪ ನೀಡಿದರು. ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳದೆ ತೆರೆಯ ಹಿಂದೆ ಇದ್ದು ತಡರಾತ್ರಿಯವರೆಗೂ ಕಾರ್ಯತಂತ್ರ ರೂಪಿಸಿದರು. ಗೆಲುವಿನ ವಿಶ್ವಾಸವನ್ನೇ ಕಳೆದುಕೊಂಡಿದ್ದ ಕಾರ್ಯಕರ್ತರು ಹಾಗೂ ನಾಯಕರಿಗೆ ಹುರುಪು ತುಂಬಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಾಳಯ 54 ಸ್ಥಾನಗಳನ್ನು ಗಳಿಸಿ ಅಚ್ಚರಿಯ ಜಯ ಗಳಿಸಿತು. 2024ರ ಲೋಕಸಭಾ ಚುನಾವಣೆಯಲ್ಲೂ ರಾಜ್ಯದಲ್ಲಿ ಪಕ್ಷವು 11ರಲ್ಲಿ 10 ಸ್ಥಾನಗಳನ್ನು ಗೆಲ್ಲುವಲ್ಲಿ ನವೀನ್ ಕಾರ್ಯತಂತ್ರ ಫಲ ನೀಡಿತು. ಆಗ ನಿತಿನ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅತ್ಯಾಪ್ತ ಬಳಗದಲ್ಲಿ ಸ್ಥಾನ ಸಿಕ್ಕಿತು. ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ನಿತಿನ್ ಅವರು ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಪಕ್ಷದ ನೂತನ ಸಾರಥಿಗಾಗಿ ವರ್ಷದಿಂದ ಹುಡುಕಾಟ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ–ಅಮಿತ್ ಶಾ ಜೋಡಿ ಅವರು ಹೆಕ್ಕಿ ತಂದಿದ್ದು ಬಿಹಾರದ ನವೀನ್ ಅವರನ್ನು. 45 ಹರೆಯದ ಅವರು ಈಗ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷದ ಅತೀ ಕಿರಿಯ ಅಧ್ಯಕ್ಷ. 1980ರಲ್ಲಿ ಜನ್ಮ ತಳೆದ ಬಿಜೆಪಿಗಿಂತ ನವೀನ್ ಅವರು ಒಂದು ವರ್ಷ ಕಿರಿಯರು ಅಷ್ಟೇ. ‘2047ರ ವಿಕಸಿತ ಭಾರತ’ದ ಸಂಕಲ್ಪ ತೊಟ್ಟಿರುವ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಅವರು ಈಗ ‘ಬಾಸ್’.
ರಾಷ್ಟ್ರ ರಾಜಕಾರಣದಲ್ಲಿ ಹಿಡಿತವನ್ನು ಮತ್ತಷ್ಟು ಭದ್ರಗೊಳಿಸಲು ಹಾಗೂ ಯುವ ಮತಗಳು ಆಚೀಚೆ ಕದಲದಂತೆ ನೋಡಿಕೊಳ್ಳಲು ಕಮಲ ಪಾಳಯವು ನಿತಿನ್‌ಗೆ ಪಕ್ಷದ ನಾಯಕತ್ವದ ಹೊಣೆ ವಹಿಸಿದೆ. ಕಠಿಣ ಪರಿಶ್ರಮಿ ನವೀನ್ ಅವರ ನೇಮಕವು ಈ ವರ್ಷ ಮತ್ತು ಮುಂದಿನ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಪ್ರಮುಖ ರಾಜ್ಯಗಳ ಚುನಾವಣೆಗಳು ಮತ್ತು 2029ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯು ಸಂಘಟನಾತ್ಮಕ ಶಕ್ತಿ ಮತ್ತು ಪೀಳಿಗೆಯ ಪರಿವರ್ತನೆಗೆ ಹೊಸ ಒತ್ತು ನೀಡುವ ಸಂಕೇತವಾಗಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಅವರನ್ನು ಪ್ರತಿಷ್ಠಾಪಿಸಿರುವುದು ಮುಂದಿನ ಪೀಳಿಗೆಗೆ ನಾಯಕತ್ವ ಬದಲಾವಣೆಯ ಸೂಚಕ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಹಿರಿ ತಲೆಗಳನ್ನು ಬದಿಗಿಟ್ಟು ‘ನವ ನಾಯಕ’ರನ್ನು ಮುಖ್ಯಮಂತ್ರಿ ಗದ್ದುಗೆಗೆ ಏರಿಸುವ ಮೂಲಕ ಬಿಜೆಪಿಯು ಹೊಸ ತಲೆಮಾರಿಗೆ ನಾಯಕತ್ವ ವರ್ಗಾಯಿಸುವ ಸೂಚನೆ ನೀಡಿತ್ತು. ಇದೀಗ, ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಸರ್ಕಾರ ಹಾಗೂ ಪಕ್ಷದಲ್ಲಿ ಆಯಕಟ್ಟಿನ ಜಾಗದಲ್ಲಿರುವ ಹಿರಿಯರು ಕಿರಿಯರಿಗೆ ಹಂತ ಹಂತವಾಗಿ ಜಾಗ ಬಿಟ್ಟು ಕೊಡಬೇಕು ಎಂಬ ಸಂದೇಶವನ್ನೂ ರವಾನಿಸಿದೆ.
26ನೇ ವಯಸ್ಸಿನಲ್ಲೇ ಚುನಾವಣೆ ಗೆದ್ದು ನಗರಾಭಿವೃದ್ಧಿ ಹಾಗೂ ಲೋಕೋಪಯೋಗಿಯಂತಹ ಮಹತ್ವದ ಖಾತೆಗಳನ್ನು ನಿಭಾಯಿಸಿರುವ ನವೀನ್ ಅವರು ಎರಡು ದಶಕಗಳ ಸಂಘಟನಾ ಅನುಭವ ಹೊಂದಿದ್ದಾರೆ. ಅವರು ಕಾಯಸ್ಥ ಜಾತಿಗೆ ಸೇರಿದವರು. ಬಿಹಾರದ ಜನಸಂಖ್ಯೆಯಲ್ಲಿ ಈ ಜಾತಿಯ ಪಾಲು ಶೇ 0.60ರಷ್ಟು. ಜಾತಿ ಲೆಕ್ಕಾಚಾರ ಬದಿಗಿಟ್ಟು ಸಂಘಟನಾ ಚಾತುರ್ಯಕ್ಕೆ ಬಿಜೆಪಿ ಉನ್ನತ ನಾಯಕರು ಮಣೆ ಹಾಕಿರುವುದು ಸ್ಪಷ್ಟ.
ನಿತಿನ್ ಅವರ ತಂದೆ ನವೀನ್ ಕಿಶೋರ್ ಸಿನ್ಹಾ ಅವರು ಆರ್‌ಎಸ್‌ಎಸ್ ಜತೆಗೆ ನಿಕಟ ಸಂಬಂಧ ಹೊಂದಿದ್ದರು. ತಂದೆ ನಿಧನರಾದ ಬಳಿಕ 2006ರಲ್ಲಿ ಪಟ್ನಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಅವರು ರಾಜಕೀಯ ಪ್ರವೇಶಿಸಿದರು. ಆಗ ಅವರು ಮೊದಲ ಬಾರಿಗೆ ಶಾಸಕರಾದರು.
ಅವರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂಲಕ ರಾಜಕೀಯ ಪಯಣ ಆರಂಭಿಸಿದರು. ಆ ಬಳಿಕ ಬಿಜೆಪಿ ಯುವ ಮೋರ್ಚಾದಲ್ಲಿ ಪ್ರವರ್ಧಮಾನಕ್ಕೆ ಬಂದರು. 2016–19ರಲ್ಲಿ ಪಕ್ಷದ ರಾಜ್ಯ ಯುವ ಮೋರ್ಚಾ ಹಾಗೂ ರಾಷ್ಟ್ರೀಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ನಿತಿನ್ ಅವರು ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕಗೊಳ್ಳುವ ಮುನ್ನ ಬಿಹಾರದ ಆಚೆಗೆ ಅವರ ಹೆಸರು ಕೇಳಿದವರು ಅಪರೂಪ. ಅದಕ್ಕೆ ಅವರನ್ನು ಮೋದಿ ಅವರು ‘ತಳಮಟ್ಟದ ಕಾರ್ಯಕರ್ತ’ ಎಂದು ಹೊಗಳಿದ್ದು.
ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವ ಬಿಹಾರದ ಐದು ಬಾರಿಯ ಶಾಸಕ ನಿತಿನ್ ನವೀನ್ ಅವರ ಮುಂದೆ ಬೆಟ್ಟದಷ್ಟು ಸವಾಲುಗಳು ಇವೆ. ಕೇಸರಿ ಪಾಳಯದಲ್ಲಿ 2014ರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ತೆಗೆದುಕೊಳ್ಳುವ ತೀರ್ಮಾನಗಳೇ ಅಂತಿಮ. ಕಳೆದ ಐದು ವರ್ಷ ಅಧ್ಯಕ್ಷರಾಗಿದ್ದ ಜೆ.ಪಿ.ನಡ್ಡಾ ಉತ್ಸವ ಮೂರ್ತಿಯಂತೆ ಇದ್ದರು. ರಿಮೋಟ್ ಕಂಟ್ರೋಲ್ ಶಾ ಅವರ ಕೈಯಲ್ಲೇ ಇತ್ತು. ಐದು ವರ್ಷಗಳಲ್ಲಿ ಪಕ್ಷ 30 ಚುನಾವಣೆಗಳಲ್ಲಿ ಗೆಲ್ಲಲು ಮೋದಿ ನಾಮಬಲ ಹಾಗೂ ಶಾ ಹೊಸೆದ ರಣನೀತಿಗಳೇ ಪ್ರಮುಖ ಕಾರಣ. ಈಗ ನವೀನ್ ಅವರು ಮೋದಿ–ಅಮಿತ್ ಶಾ ನೆರಳಿನಿಂದ ಹೊರ ಬಂದು ಸ್ವತಂತ್ರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆಯೇ ಎಂಬುದು ಸದ್ಯದ ಕುತೂಹಲ.
ಪೂರ್ವ ಹಾಗೂ ದಕ್ಷಿಣ ಬಿಜೆಪಿ ಪಾಲಿಗೆ ಕಡು ಕಠಿಣ ಹಾದಿ. ಏಪ್ರಿಲ್‌ನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕಿದೆ. ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡಿನಲ್ಲಿ ಪಕ್ಷ ಈವರೆಗೆ ಅಧಿಕಾರದ ಸನಿಹಕ್ಕೇ ಬಂದಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ ತಮ್ಮ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಬೇಕಿದೆ. ಘಟಾನುಘಟಿ ಹಿರಿಯ ನೇತಾರರನ್ನು ನಿಭಾಯಿಸಿಕೊಂಡೇ ಪಕ್ಷದ ಉನ್ನತ ಹುದ್ದೆಗಳಿಗೆ ಹೊಸಬರನ್ನು ನೇಮಿಸಿಕೊಂಡು ನವೀನ ರೀತಿಯಲ್ಲಿ ಕಮಲ ರಥವನ್ನು ಮುನ್ನಡೆಸುವ ಸವಾಲು ಅವರ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.