ADVERTISEMENT

Para Archery Champion | ಶೀತಲ್‌ ದೇವಿ: ಯುವಭಾರತದ ರಾಯಭಾರಿ

ಚ.ಹ.ರಘುನಾಥ
Published 3 ಅಕ್ಟೋಬರ್ 2025, 23:30 IST
Last Updated 3 ಅಕ್ಟೋಬರ್ 2025, 23:30 IST
ಶೀತಲ್‌ ದೇವಿ
ಶೀತಲ್‌ ದೇವಿ   

ಹೆಬ್ಬೆರಳು ಕಳೆದುಕೊಂಡ ಕಾರಣಕ್ಕಾಗಿ ಅಗ್ರಮಾನ್ಯ ಬಿಲ್ಲಾಳುವಾಗುವ ಅರ್ಹತೆ ಕಳೆದುಕೊಂಡ ಏಕಲವ್ಯನದು ಮಹಾಭಾರತದ ದುರಂತ ಕಥೆ. ಆಧುನಿಕ ಭಾರತದ ಶೀತಲ್ ದೇವಿ ಅವರಿಗೆ ಹೆಬ್ಬೆರಳಿರಲಿ, ಕೈಗಳೇ ಇಲ್ಲ! ಕಾಲುಗಳೇ ಆಕೆಯ ಪಾಲಿಗೆ ಕೈಗಳು. ಈಗ ಬಿಲ್ಲುಗಾರಿಕೆ ಜಗತ್ತಿನಲ್ಲಿ ಆಕೆಯ ಯಶೋಗಾಥೆ ರೂಪುಗೊಂಡಿದೆ.

ದಕ್ಷಿಣ ಕೊರಿಯಾದ ಗ್ವಾಂಗ್‌ಜುನಲ್ಲಿ ನಡೆದ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನ ಕಾಂಪೌಂಡ್ ವೈಯಕ್ತಿಕ ವಿಭಾಗದ ಅಂತಿಮ ಪೈಪೋಟಿಯಲ್ಲಿ ಶೀತಲ್‌ ಅವರಿಗೆ ಎದುರಾಳಿ ಆಗಿದ್ದುದು ಟರ್ಕಿಯ ಒಝ್ನೂರ್ ಕ್ಯುರ್ ಗಿರ್ದಿ. ಆಕೆ ಆರ್ಚರಿ ಇತಿಹಾಸ ಕಂಡ ಅಸಾಮಾನ್ಯ ಬಿಲ್ಲುಗಾರ್ತಿಯರಲ್ಲಿ ಒಬ್ಬರು; ವಿಶ್ವದ ನಂಬರ್‌ 1 ಆರ್ಚರಿಪಟು. ರಸ್ತೆ ಅಪಘಾತದಲ್ಲಿ ಕಾಲಿನ ಚಲನೆ ಕಳೆದುಕೊಂಡರೂ, ಸಾಧನೆಯ ಹಾದಿಯಲ್ಲಿ ನಿರಂತರ ಚಲನಶೀಲತೆ ಉಳಿಸಿಕೊಂಡ ಜೀವನ್ಮುಖಿ. ಅಂತಿಮ ಗುರಿಯಲ್ಲಿ ಪೂರ್ಣ ಅಂಕಗಳು ದೊರೆತು ಗೆಲುವು ಖಚಿತವಾದಾಗ, ಮೊಗ್ಗಿನ ಪಕಳೆಗಳು ಬಿಚ್ಚಿಕೊಂಡು ಹೂವಾದಂತೆ ಶೀತಲ್‌ರ ಮೊಗದಲ್ಲಿ ಅವ್ಯಾಜ ನಗೆಮುಗುಳು. ಅಗ್ರ ಕ್ರಮಾಂಕದ ಕ್ಯುರ್ ಗಿರ್ದಿ ಅವರನ್ನು 146-143 ಅಂಕಗಳಿಂದ ಹಿಂದಿಕ್ಕಿದ ಚಾರಿತ್ರಿಕ ಸಾಧನೆಯ ಜೊತೆಗೆ, ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಕೈಗಳ ಸಹಾಯವಿಲ್ಲದೆ ಚಿನ್ನ ಗೆದ್ದ ಮೊದಲ ಮಹಿಳಾಸ್ಪರ್ಧಿ ಎನ್ನುವ ಅಗ್ಗಳಿಕೆ ಅವರದಾಯಿತು. ಶೀತಲ್‌ ಅವರ ಸಾಧನೆಗೆ ಕೋಚ್‌ ಬೆನ್ನುತಟ್ಟಿದರು; ಎದುರಾಳಿ ಗಿರ್ದಿ ಅವರೂ ತಲೆದೂಗಿದರು.

ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಶೀತಲ್‌ ಇತಿಹಾಸ ಸೃಷ್ಟಿಸಿದ್ದು ಸೆ. 27ರಂದು. ಅದರ ಮರುದಿನ, ಸೆ. 28ರಂದು ನಡೆದ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತದ ಕ್ರಿಕೆಟಿಗರು ಚಾಂಪಿಯನ್ನರಾದರು. ಪಾಕಿಸ್ತಾನದ ವಿರುದ್ಧ ಜಯಸಾಧಿಸಿದ ಕ್ರಿಕೆಟಿಗರು ಕುಣಿದು ಕುಪ್ಪಳಿಸಿದರು; ಕ್ರೀಡಾಸ್ಫೂರ್ತಿ ಮಣ್ಣುಗೂಡಿಸಿದರು. ಒಂದೇ ದಿನದ ಅಂತರದಲ್ಲಿ ಕ್ರೀಡಾ ಸ್ಫೂರ್ತಿಯನ್ನು ಎತ್ತಿಹಿಡಿದ ಹಾಗೂ ಗಾಸಿಗೊಳಿಸಿದ ಘಟನೆಗಳಿಗೆ ಭಾರತದ ಆಟಗಾರರು ಸಾಕ್ಷಿಯಾದರು. ಕ್ರಿಕೆಟಿಗರಂತೆ ಶೀತಲ್‌ ಎದುರಾಳಿಯನ್ನು ಹೀನಾಯವಾಗಿ ಕಂಡಿರಲಿಲ್ಲ. ಗಿರ್ದಿ ಅವರ ಬಳಿ ಹೋಗಿ ಬೆಳುದಿಂಗಳಿನಂತಹ ಸ್ನೇಹದ ನಗು ಹಂಚಿಕೊಂಡಿದ್ದರು. ಕ್ರೀಡಾಸ್ಫೂರ್ತಿಯ ಹೊಳಪು ಹೆಚ್ಚಿಸಿದ್ದರು. ಸಾಧನೆಯಲ್ಲಷ್ಟೇ ಅಲ್ಲ; ನಡವಳಿಕೆಯಲ್ಲೂ ಶೀತಲ್‌ ಚಾಂಪಿಯನ್‌!

ADVERTISEMENT

ಆಟದ ಅಂಗಳದಲ್ಲಿ ದ್ವೇಷ ಸಾಧನೆಗೆ ಶೀತಲ್‌ ಅವರಿಗೂ ನೆಪಗಳಿದ್ದವು. ಶೀತಲ್‌, ಭಾರತೀಯ ಸೇನೆ ಪೋಷಿಸಿರುವ ಪ್ರತಿಭೆ. ಇದರ ಜೊತೆಗೆ, ಗಿರ್ದಿ ಅವರ ಟರ್ಕಿಗೂ ಪಾಕಿಸ್ತಾನಕ್ಕೂ ಇನ್ನಿಲ್ಲದ ನಂಟು. ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಭಾರತದ ಮೇಲಿನ ದಾಳಿಯಲ್ಲಿ ಪಾಕಿಸ್ತಾನ ಬಳಸಿತ್ತು. ದ್ವೇಷ ಸಾಧನೆಗೆ ಇಷ್ಟು ನೆಪ ಸಾಕು. ಆದರೆ, ಆಟದ ಅಂಗಳಕ್ಕೂ ಕ್ರೀಡಾಂಗಣಕ್ಕೂ ಇರುವ ವ್ಯತ್ಯಾಸ ಶೀತಲ್ ಅವರಿಗೆ ತಿಳಿದಂತಿದೆ. ಹೆಸರಿನಲ್ಲಿನ ಶೀತಲತೆ ಅವರ ವ್ಯಕ್ತಿತ್ವ ದಲ್ಲೂ ಇರುವಂತಿದೆ. ‘ಪದಕಗಳನ್ನು ಗೆಲ್ಲುವುದಷ್ಟೇ ಯಶಸ್ಸಲ್ಲ; ಆಟದಿಂದ ದೊರೆಯುವ ಅನುಭವವೂ ಅಮೂಲ್ಯ’ ಎನ್ನುವ ಅವರ ನುಡಿಗೂ ನಡೆಗೂ ಸದ್ಯಕ್ಕಂತೂ ಹೆಚ್ಚಿನ ವ್ಯತ್ಯಾಸ ಇರುವಂತೆ ಕಾಣುತ್ತಿಲ್ಲ.

ಪ್ಯಾರಾ ಆರ್ಚರಿ ಕ್ಷೇತ್ರದ ಶೃಂಗದಲ್ಲಿ ನಿಂತಿರುವ ಶೀತಲ್‌ ಹುಟ್ಟಿದ್ದು, ಬೆಳೆದದ್ದು ಬಡ ಕುಟುಂಬದಲ್ಲಿ. ಅಮ್ಮ–ಅಪ್ಪ ರೈತ ಕಾರ್ಮಿಕರು. ಬಡತನದ ಜೊತೆಗೆ, ಹುಟ್ಟಿನಿಂದಲೇ ದೈಹಿಕ ಅಸಾಮರ್ಥ್ಯವನ್ನೂ ಶೀತಲ್‌ ಬಳವಳಿಯಾಗಿ ಪಡೆಯಬೇಕಾಯಿತು. ಫೊಕೊಮೆಲಿಯಾ ಎಂಬ ವಿಚಿತ್ರ ಸಮಸ್ಯೆಯಿಂದ ಎರಡೂ ಕೈಗಳು ಅವರಿಗಿಲ್ಲ. ಬಡತನ, ಜನ್ಮದತ್ತ ಅಂಗವೈಕಲ್ಯ, ಮೇಲಾಗಿ ಹೆಣ್ಣು – ಬದುಕೊಂದು ಮುರುಟಲು ಇಷ್ಟು ಕಾರಣಗಳು ಸಾಲದೆ? ಆದರೆ, ಶೀತಲ್‌ ಗಟ್ಟಿಗಿತ್ತಿ. ಬೆಳೆಯುತ್ತಾ ಹೋದಂತೆ ಕಾಲುಗಳನ್ನೇ ಕೈಗಳನ್ನಾಗಿಸಿಕೊಂಡರು. ಕಾಲುಗಳನ್ನು ಬಳಸಿ ಮರಗಳನ್ನು ಏರುವುದು ಅವರಿಗೆ ಆಟದಂತಾಯಿತು. ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ದೃಢವಾಯಿತು. ಆ ಕನಸುಗಳ ಹಾದಿಯಲ್ಲಿ ಅವರಿಗೆ ಆರ್ಚರಿ ಎನ್ನುವ ಆಟವೊಂದಿದೆ ಎನ್ನುವ ವಿಷಯ ಸಹೋದರಿಯ ಮೂಲಕ ತಿಳಿಯಿತು.

ಶೀತಲ್‌ರ ಎದೆಗೆ ಬಿದ್ದ ಕನಸಿಗೆ ನೀರೆರೆದದ್ದು, ಅವರ ಬದುಕಿನ ದಿಕ್ಕಿಗೆ ಸ್ಪಷ್ಟ ತಿರುವು ನೀಡಿದ್ದು ಭಾರತೀಯ ಸೇನೆ. ಜಿಲ್ಲಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೇನಾ ಅಧಿಕಾರಿಗಳ ಕಣ್ಣಿಗೆ ಬಿದ್ದುದು ಶೀತಲ್‌ರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಜಮ್ಮುವಿನ ಲೋಯಿಧರ್‌ (Loidhar) ಗ್ರಾಮ ಶೀತಲ್‌ ಅವರ ತವರು. ಅಲ್ಲಿಂದ ಇನ್ನೂರು ಕಿ.ಮೀ. ದೂರದಲ್ಲಿ ಸೇನೆ ನಡೆಸುತ್ತಿದ್ದ ಅಕಾಡೆಮಿಗೆ ಸೇರಿಕೊಂಡು, ಆರ್ಚರಿಯ ಸೂಕ್ಷ್ಮಗಳನ್ನು ಕಲಿತುಕೊಂಡರು. ವೈಷ್ಣೋದೇವಿ ಮಂದಿರದ ಕ್ರೀಡಾ ಸಮುಚ್ಚಯದಲ್ಲಿ ಕಿರಿಯ ಸೋದರಿಯೊಂದಿಗೆ ನೆಲಸಿ, ಅಭ್ಯಾಸ ನಡೆಸಿದರು. ಅಭಿಷೇಕ್ ಚೌಧರಿ ಮತ್ತು ಕುಲದೀಪ್ ವಧ್ವಾನ್ ಅವರ ಗರಡಿಯಲ್ಲಿ ಆರ್ಚರಿಪಟುವಾಗಿ ಶೀತಲ್‌ ಪ್ರತಿಭೆ ಅರಳಿತು.

ದಿನಕ್ಕೆ ಆರೇಳು ತಾಸಿನ ದುಡಿಮೆ. ಕಾಯಿಲೆಯಿಂದ ಬಳಲಿದ ದಿನಗಳನ್ನು ಹೊರತುಪಡಿಸಿದರೆ, ಅಭ್ಯಾಸಕ್ಕೆ ರಜೆಯೆಂಬುದೇ ಇಲ್ಲ. ಕಾಲಿನಿಂದ ಬಿಲ್ಲು ಹಿಡಿದು, ಭುಜ ಹಾಗೂ ಗಲ್ಲ ಬಳಸಿಕೊಂಡು ಬಾಣ ಪ್ರಯೋಗಿಸುವ ಪಟ್ಟುಗಳನ್ನು ಶೀತಲ್‌ ಮೈಗೂಡಿಸಿಕೊಂಡರು. 2021ರಲ್ಲಿ ತರಬೇತಿ ಆರಂಭಗೊಂಡಿತು. ಹನ್ನೊಂದೇ ತಿಂಗಳಲ್ಲಿ ಶೀತಲ್‌ ರಾಷ್ಟ್ರೀಯ, ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸ ತೊಡಗಿದರು. ಏಷ್ಯನ್ ಪ್ಯಾರಾಲಿಂಪಿಕ್ ಸಮಿತಿಯಿಂದ 2023ರ ಅತ್ಯುತ್ತಮ ಯುವ ಅಥ್ಲೀಟ್, ‘ಬಿಬಿಸಿ’ಯಿಂದ ‘ಉದಯೋನ್ಮುಖ ಅಥ್ಲೀಟ್–2025’ ಎನ್ನುವ ಗುರುತಿಸುವಿಕೆ ಶೀತಲ್‌ರ ಏರುಗತಿಯ ಬೆಳವಣಿಗೆಯನ್ನು ಸೂಚಿಸು ವಂತಿದ್ದವು. 2023ರಲ್ಲಿ ‘ಅರ್ಜುನ ಪ್ರಶಸ್ತಿ’ಯೂ ಅವರ ಬತ್ತಳಿಕೆಗೆ ಸಂದಿತು.

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಿಶ್ರ ಡಬಲ್ಸ್ ಮತ್ತು ಮಹಿಳಾ ಇಂಡಿವಿಜುಯಲ್ ಕಾಂಪೌಂಡ್‌ನಲ್ಲಿ ಚಿನ್ನ, ಮಹಿಳಾ ಡಬಲ್ಸ್‌ನಲ್ಲಿ ಬೆಳ್ಳಿ; ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಶ್ರ ಟೀಮ್ ಕಾಂಪೌಂಡ್‌ನಲ್ಲಿ ರಾಕೇಶ್ ಕುಮಾರ್ ಜೊತೆ ಕಂಚಿನ ಪದಕ–ಹೀಗೆ ಒಂದಾದ ನಂತರ ಮತ್ತೊಂದು ಪದಕ ಕೊರಳು ಸೇರುತ್ತಿದ್ದರೂ, ವಿಶ್ವ ಆರ್ಚರಿ ಪ್ಯಾರಾ ಚಾಂಪಿಯನ್‌ ಷಿಪ್‌ನಲ್ಲಿನ ಚಿನ್ನದ ಕನವರಿಕೆ ಶೀತಲ್‌ ಅವರನ್ನು ಕಾಡುತ್ತಲೇ ಇತ್ತು. ಆ ವಿಶ್ವದಾಖಲೆಯ ಚಿನ್ನವೂ ಎಟುಕಿತು. ಚಿನ್ನದ ಸಾಧನೆಗೆ ಮೊದಲು, ತೊಮನ್ ಕುಮಾರ್ ಜೊತೆಗೂಡಿ ಕಾಂಪೌಂಡ್ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು.

ಶೀತಲ್‌ ಈಗ ಹದಿನೆಂಟರ ಬಾಲೆ (ಜನನ: ಜ. 10, 2007). ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಕೈಗಳಿಲ್ಲದ ಏಕೈಕ ಸ್ಪರ್ಧಿ ಅವರು. ಈ ಮೊದಲು, ಪುರುಷರ ವಿಭಾಗದಲ್ಲಿ ಅಮೆರಿಕದ ಮ್ಯಾಟ್ ಸ್ಟುಟ್ಜ್‌ಮನ್ ಅವರು ಇಂಥದ್ದೇ ಸಾಧನೆ ಮಾಡಿದ್ದರು. ಶೀತಲ್‌ರಂತೆ ಸ್ಟುಟ್ಜ್‌ಮನ್‌ ಅವರೂ ಫೊಕೊಮೆಲಿಯಾ ಬಾಧೆಯಿಂದಾಗಿ ಕೈಗಳನ್ನು ಹೊಂದಿಲ್ಲ. ‘ದಿ ಆರ್ಮ್‌ಲೆಸ್ ಆರ್ಚರ್‌’ ಎಂದು ಪ್ರಸಿದ್ಧರಾದ ಸ್ಟುಟ್ಜ್‌ಮನ್‌ ಅವರ ವಿಶ್ವದಾಖಲೆಗಳೇ ಶೀತಲ್‌ ಅವರ ಸಾಧನೆಗೆ ಪ್ರೇರಣೆ.

‘ನಾನು ಆರ್ಚರಿಯನ್ನು ಆಯ್ಕೆ ಮಾಡಿಕೊಂಡೆ’ ಎಂದು ಶೀತಲ್ ಹೇಳುವುದಿಲ್ಲ. ‘ಆರ್ಚರಿಯೇ ತನ್ನನ್ನು ಆಯ್ಕೆ ಮಾಡಿಕೊಂಡಿತು’ ಎನ್ನುವುದರಲ್ಲಿ ಅವರಿಗೆ ಖುಷಿ. ಹಿಂದೊಮ್ಮೆ, ಶಿಕ್ಷಕಿ ಆಗಬೇಕೆಂದು ಅವರು ಕನಸು ಕಂಡಿದ್ದರು. ಆದುದು ಬಿಲ್ಲುಗಾರ್ತಿ, ಕ್ರೀಡಾಪಟು. ಸಾಧನೆಯ ಉತ್ತುಂಗದಲ್ಲಿ ಇರುವ ಅವರೀಗ ಯುವಸಮುದಾಯಕ್ಕೆ ಪ್ರೇರಣೆ ನೀಡುವ ಶಿಕ್ಷಕಿ! ‘ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಬೇಡಿ’ ಎನ್ನುವುದು ಈ ಶಿಕ್ಷಕಿ ಬಾಲಕಿಯರಿಗೆ ಹೇಳುವ ಕಿವಿಮಾತು. ಗೆಲುವಿನ ಸಂದರ್ಭದಲ್ಲಿ ಇರಬೇಕಾದುದು ವಿನಯವೇ ಹೊರತು, ಉನ್ಮಾದವಲ್ಲ ಎನ್ನುವುದು ಅವರ ನಡವಳಿಕೆಯಿಂದ ಯುವಜನ ಕಲಿಯಬೇಕಾದ ಪಾಠ.

ಅಂಗವೈಕಲ್ಯವನ್ನು ಬದುಕಿನ ಮಿತಿಯೆಂದು ತಿಳಿದವರೇ ಹೆಚ್ಚು. ಆದರೆ, ಸಾಧನೆಯ ಮೂಲಕ ಬದುಕಿನ ಮಿತಿಗಳನ್ನು ಯಾವ ರೀತಿಯಲ್ಲಿ ದಾಟಬಹುದು ಎನ್ನುವುದಕ್ಕೆ ಶೀತಲ್‌ ಅವರ ಬದುಕು–ಸಾಧನೆ ನಿದರ್ಶನದಂತಿದೆ. ಅಂಗವಿಕಲರಿಗೆ ಅಥವಾ ಬಾಲಕಿಯರಿಗಷ್ಟೇ ಅವರು ಪ್ರೇರಣೆಯಲ್ಲ; ಯುವಜನರ ಕನಸುಗಳಿಗೆ ಕಣ್ಣು ಕೊಡಬಲ್ಲ ಶಕ್ತಿ ಅವರ ಸಾಧನೆಗಿದೆ. ಶೀತಲ್‌, ಯುವಭಾರತದ ಸಮರ್ಥ ರಾಯಭಾರಿ.

ಅಭ್ಯಾಸ ನಿರತ ಶೀತಲ್‌ ದೇವಿ
ಗುರಿ ಎಡೆಗೆ ಬಿಲ್ಲು ನೆಟ್ಟ ಶೀತಲ್ ದೇವಿ

ಪ್ರೇರಣಾದಾಯಿ ಶಿಕ್ಷಕಿ!

ಶೀತಲ್‌ ಈಗ ಹದಿನೆಂಟರ ಬಾಲೆ (ಜನನ: ಜ. 10 2007). ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಕೈಗಳಿಲ್ಲದ ಏಕೈಕ ಸ್ಪರ್ಧಿ ಅವರು. ಈ ಮೊದಲು ಪುರುಷರ ವಿಭಾಗದಲ್ಲಿ ಅಮೆರಿಕದ ಮ್ಯಾಟ್ ಸ್ಟುಟ್ಜ್‌ಮನ್ ಅವರು ಇಂಥದ್ದೇ ಸಾಧನೆ ಮಾಡಿದ್ದರು. ಶೀತಲ್‌ರಂತೆ ಸ್ಟುಟ್ಜ್‌ಮನ್‌ ಅವರೂ ಫೊಕೊಮೆಲಿಯಾ ಬಾಧೆಯಿಂದಾಗಿ ಕೈಗಳನ್ನು ಹೊಂದಿಲ್ಲ. ‘ದಿ ಆರ್ಮ್‌ಲೆಸ್ ಆರ್ಚರ್‌’ ಎಂದು ಪ್ರಸಿದ್ಧರಾದ ಸ್ಟುಟ್ಜ್‌ಮನ್‌ ಅವರ ವಿಶ್ವದಾಖಲೆಗಳೇ ಶೀತಲ್‌ ಅವರ ಸಾಧನೆಗೆ ಪ್ರೇರಣೆ. ‘ನಾನು ಆರ್ಚರಿಯನ್ನು ಆಯ್ಕೆ ಮಾಡಿಕೊಂಡೆ’ ಎಂದು ಶೀತಲ್ ಹೇಳುವುದಿಲ್ಲ. ‘ಆರ್ಚರಿಯೇ ತನ್ನನ್ನು ಆಯ್ಕೆ ಮಾಡಿಕೊಂಡಿತು’ ಎನ್ನುವುದರಲ್ಲಿ ಅವರಿಗೆ ಖುಷಿ. ಹಿಂದೊಮ್ಮೆ ಶಿಕ್ಷಕಿ ಆಗಬೇಕೆಂದು ಅವರು ಕನಸು ಕಂಡಿದ್ದರು. ಆದುದು ಬಿಲ್ಲುಗಾರ್ತಿ ಕ್ರೀಡಾಪಟು. ಸಾಧನೆಯ ಉತ್ತುಂಗದಲ್ಲಿ ಇರುವ ಅವರೀಗ ಯುವಸಮುದಾಯಕ್ಕೆ ಪ್ರೇರಣೆ ನೀಡುವ ಶಿಕ್ಷಕಿ! ‘ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಬೇಡಿ’ ಎನ್ನುವುದು ಈ ಶಿಕ್ಷಕಿ ಬಾಲಕಿಯರಿಗೆ ಹೇಳುವ ಕಿವಿಮಾತು. ಗೆಲುವಿನ ಸಂದರ್ಭದಲ್ಲಿ ಇರಬೇಕಾದುದು ವಿನಯವೇ ಹೊರತು ಉನ್ಮಾದವಲ್ಲ ಎನ್ನುವುದು ಅವರ ನಡವಳಿಕೆಯಿಂದ ಯುವಜನ ಕಲಿಯಬೇಕಾದ ಪಾಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.