ADVERTISEMENT

ವಾಚಕರವಾಣಿ | ಟಿಪ್ಪು ಜಯಂತಿ ವಿವಾದ: ಇತಿಹಾಸದ ವಸ್ತುನಿಷ್ಠ ಅಧ್ಯಯನ ಅಗತ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ನವೆಂಬರ್ 2019, 2:06 IST
Last Updated 7 ನವೆಂಬರ್ 2019, 2:06 IST
   

ಟಿಪ್ಪು ಸುಲ್ತಾನ್‌ ಕುರಿತ ವಾದಿರಾಜ ಅವರ ಲೇಖನ ‘ಶಾರದಮ್ಮಂಗೆ ಬೆಣ್ಣೆ, ಉಚ್ಚಂಗಮ್ಮಂಗೆ ಸುಣ್ಣ’(ಸಂಗತ, ನ. 6) ಪೂರ್ವಗ್ರಹಗಳಿಂದ ಕೂಡಿದೆ. ಲೇಖಕರು ಮುಖ್ಯವಾಗಿ ಕೊಡವರು, ಮಂಗಳೂರಿನ ಕ್ರೈಸ್ತರು, ಚಿತ್ರದುರ್ಗದ ಮದಕರಿ ನಾಯಕನ ಮೇಲಿನ ಟಿಪ್ಪುವಿನ ದಾಳಿಗಳು ಹಾಗೂ ಟಿಪ್ಪುವಿನ ಖಡ್ಗದ ಮೇಲೆ ಇದೆ ಎನ್ನಲಾದ ಬರಹವನ್ನು ಆಧರಿಸಿ, ಟಿಪ್ಪು ಒಬ್ಬ ಕ್ರೂರಿ ಹಾಗೂ ಮತಾಂಧ ರಾಜನಾಗಿದ್ದ ಎಂಬ ಸರಳ ತೀರ್ಮಾನಕ್ಕೆ ಬಂದಂತಿದೆ.

ಆದರೆ ಟಿಪ್ಪು ಸಹ ಆಗ ಇದ್ದ ಇತರೆಲ್ಲ ರಾಜರಂತೆ ನಿರಂಕುಶ ರಾಜನಾಗಿದ್ದ. ದೊಡ್ಡ ರಾಜ್ಯಗಳು ಚಿಕ್ಕ ಚಿಕ್ಕ ಸಂಸ್ಥಾನಗಳು ಹಾಗೂ ರಾಜ್ಯಗಳ ಅರಸರನ್ನು ಅಂಕೆಯಲ್ಲಿ ಇರಿಸಿಕೊಂಡು, ಅವರನ್ನು ಸಾಮಂತ ರಾಜರನ್ನಾಗಿ ಮಾಡಿಕೊಳ್ಳುತ್ತಿದ್ದುದು ಆಗಿನ ರಾಜಕೀಯದ ಅವಿಭಾಜ್ಯ ಅಂಗವಾಗಿತ್ತು. ಅಂತೆಯೇ ಟಿಪ್ಪು ಕೂಡ ಕೊಡವರು, ಮಂಗಳೂರಿನ ಕ್ರೈಸ್ತರು ಹಾಗೂ ಚಿತ್ರದುರ್ಗದ ಮದಕರಿ ನಾಯಕನನ್ನು ಒಳಗೊಂಡಂತೆ ಅನೇಕ ಸಂಸ್ಥಾನಿಕರ ಮೇಲೆ, ರಾಜರ ಮೇಲೆ ಯುದ್ಧ ಮಾಡಿದ್ದಾನೆ.

ಯುದ್ಧಗಳು ಸ್ವಧರ್ಮೀಯರ ನಡುವೆ ನಡೆದರೂ, ಅನ್ಯ ಧರ್ಮೀಯರ ನಡುವೆ ನಡೆದರೂ ಆಗುವ ಅನಾಹುತ, ಅತ್ಯಾಚಾರ, ಅನಾಚಾರಗಳು ಒಂದೇ ತೆರನಾಗಿರುತ್ತವೆ. ಇದನ್ನು ಇಂದಿಗೂ ನಾವು ನೋಡಬಹುದು. ಆದ್ದರಿಂದ ಟಿಪ್ಪು ಸಾರಿದ ಯುದ್ಧಗಳು ಕೇವಲ ಧರ್ಮಾಧಾರಿತ ಯುದ್ಧಗಳಾಗಿದ್ದವೆಂದು ಸಾಮಾನ್ಯೀಕರಿಸಲು ಸಾಧ್ಯವಿಲ್ಲ.

ಇನ್ನು ಟಿಪ್ಪುವಿನ ಖಡ್ಗದ ಮೇಲೆ ಇದೆ ಎನ್ನಲಾದ ಬರಹ ನೋಡಿ ಆತ ಮತಾಂಧನಾಗಿದ್ದ ಎಂದು ತೀರ್ಮಾನಿಸುವ ಮೊದಲು, ಆತ ಅದೇ ಖಡ್ಗದಿಂದ, ಮಸ್ಲಿಮರೇ ಆಗಿದ್ದ ಮಾಪಿಳ್ಳೆಗಳ ತಲೆಗಳನ್ನೂ ತರಿದಿದ್ದ ಹಾಗೂ ಸವಣೂರಿನ ಮುಸ್ಲಿಂ ನವಾಬರೊಂದಿಗೆ ಸೆಣಸಿದ್ದ ಎಂಬುದನ್ನು ಮರೆಯ ಬಾರದು!

ಇತಿಹಾಸವನ್ನು ಓದುವಾಗ ಯಾವುದೇ ಸಿದ್ಧಾಂತಕ್ಕೆ ಜೋತುಬೀಳದೆ, ಪೂರ್ವಗ್ರಹ ಪೀಡಿತರಾಗದೆ ವಸ್ತುನಿಷ್ಠವಾಗಿ ಓದುವುದು ಅಗತ್ಯ. ಜೊತೆಗೆ ಐತಿಹಾಸಿಕ ಘಟನೆಗಳನ್ನು 21ನೇ ಶತಮಾನದ ರೀತಿರಿವಾಜುಗಳು, ಇಷ್ಟಾನಿಷ್ಟಗಳು ಹಾಗೂ ಸಿದ್ಧಾಂತಗಳನ್ನು ಆರೋಪಿಸಿ ನೋಡುವುದು ಸಾಧುವಲ್ಲ. ಅದು ಇತಿಹಾಸಕ್ಕೆ ನಾವು ಬಗೆವ ಅಪಚಾರವಾಗುತ್ತದೆ.

–ಎಚ್‌.ಎಸ್‌. ನಂದಕುಮಾರ್, ಮಂಗಳೂರು

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.