ಭ್ರಷ್ಟಾಚಾರದ ಮೂಲಬೇರು ನಾವೇ!
ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ನಾವೇ ಕಾರಣ ಎಂಬುದು ಕಠಿಣ ಸತ್ಯ. ಮದ್ಯ, ಹಣ, ಜಾತಿ, ಧರ್ಮ ನೋಡಿಕೊಂಡು ಮತ ಹಾಕುವ ಜನರು ಲಂಚಮುಕ್ತ ಆಡಳಿತ ಕೇಳುವುದು ವ್ಯಂಗ್ಯವೇ ಸರಿ. ಚುನಾವಣೆಯಲ್ಲಿ ತಮ್ಮ ಮತ ಮಾರಿಕೊಂಡ ಬಳಿಕ ಅಧಿಕಾರಿಗಳಿಂದ ನೀತಿವಂತಿಕೆ ನಿರೀಕ್ಷಿಸುವುದು ಪಾಪಕಾರ್ಯದ ನಂತರ ಪ್ರಾರ್ಥನೆ ಮಾಡುವಂತಾಗಿದೆ. ಭ್ರಷ್ಟ ರಾಜಕಾರಣಿಗಳು ಜನರಿಂದಲೇ ಹುಟ್ಟುತ್ತಾರೆ. ಇಂಥವರಿಂದ ಒಳ್ಳೆಯ ಅಧಿಕಾರಿಗಳನ್ನು ನಿರೀಕ್ಷಿಸಲು ಸಾಧ್ಯವೆ? ಈ ದುಃಸ್ಥಿತಿಯನ್ನು ಬದಲಾಯಿಸಲು ಮೊದಲ ಹೆಜ್ಜೆ ನಮ್ಮಿಂದಲೇ ಆರಂಭವಾಗಬೇಕಿದೆ. ನೈತಿಕತೆ ಮತ್ತು ಜಾಗೃತ ನಾಗರಿಕತೆಯ ಅರಿವು ಮೂಡಿದಾಗ ಸಮಾಜವು ಭ್ರಷ್ಟಾಚಾರಮುಕ್ತವಾಗುತ್ತದೆ. ಈ ಬದಲಾವಣೆ ಜನರ ಮನಸ್ಸಿನಿಂದಲೇ ಆರಂಭವಾಗಬೇಕಿದೆ.
-ದರ್ಶನ್ ಎಂ.ಜಿ., ಕಡೂರು
**
ಸಾರ್ವಜನಿಕ ಪ್ರತಿಜ್ಞೆ: ದುರಭ್ಯಾಸ ಸಲ್ಲದು
ಎದುರಾಳಿಗಳ ವಿರುದ್ಧ ರಾಜಕಾರಣಿಗಳು ಏಕವಚನ ಪದ ಪ್ರಯೋಗಿಸುವುದು ಮಾಮೂಲಾಗಿದೆ. ಆ ಮೂಲಕ ಅವರ ಬೌದ್ಧಿಕಮಟ್ಟದ ಪರಿಚಯ ಮತದಾರರಿಗೂ ಆಗುತ್ತಿದೆ. ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಜೋಡಿ ಸುರಂಗ ರಸ್ತೆ ಯೋಜನೆ ನಿಲ್ಲಿಸಲು ದೇವರ ಹೊರತು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ. ಅಕಸ್ಮಾತ್ ರಾಹುಲ್ ಗಾಂಧಿ ಹೇಳಿದರೆ ಸ್ಥಗಿತಗೊಳ್ಳುವುದಿಲ್ಲವೆ ಎಂದು ಹೇಳುವ ಎದೆಗಾರಿಕೆ ಕಾಂಗ್ರೆಸ್‌ನಲ್ಲಿ ಯಾರಿಗಾದರೂ ಇದೆಯೇ? ಕಾಂತರಾಜ ಆಯೋಗದ ಜಾರಿಗೆ ರಾಹುಲ್ ಅವರು ತಡೆಯೊಡ್ಡಿ ಪುನಃ ಸರ್ವೆಗೆ ಸೂಚಿಸಿದರು. ಈಗ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಹಾಗಾಗಿ, ರಾಜಕಾರಣಿಗಳು ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡುವ ದುರಭ್ಯಾಸವನ್ನು ಬಿಡುವುದು ಒಳಿತಲ್ಲವೆ?
-ಕೃಷ್ಣ ಭಟ್ ಗೋಸಾಡ, ಬೆಂಗಳೂರು
**
ವಿದ್ಯಾರ್ಥಿನಿಯರಿಗೆ ‘ಶುಚಿತ್ವ’ ಸೌಲಭ್ಯ ನೀಡಿ
ವಿದ್ಯಾರ್ಥಿನಿಯರು ಸ್ಯಾನಿಟರಿ ಪ್ಯಾಡ್ ಕೊಳ್ಳಲು ಹಣವಿಲ್ಲದೆ ಅಥವಾ ಸೂಕ್ತ ತಿಳಿವಳಿಕೆ ಕೊರತೆಯಿಂದ ಮುಟ್ಟಿನ ಸಮಯದಲ್ಲಿ ಅಸುರಕ್ಷಿತ ಬಟ್ಟೆ ಬಳಸುವುದ ರಿಂದ ಸೋಂಕಿಗೆ ತುತ್ತಾಗುತ್ತಾರೆ. ಕೆಲವರು ಪ್ಯಾಡ್ ಉಪಯೋಗಿಸಿದರೂ, ಅವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲ. ಮುಟ್ಟಿನ ತ್ಯಾಜ್ಯವು ಶಾಲಾ, ಕಾಲೇಜಿನ ಶೌಚಾಲಯ, ಕಮೋಡ್‌ಗಳಲ್ಲಿ ತುಂಬಿ ಸಮಸ್ಯೆಯಾದ ಉದಾಹರಣೆಗಳಿವೆ. ಸರ್ಕಾರವು ಕೆಲವು ಶಾಲೆಗಳಲ್ಲಿ ಪ್ಯಾಡ್ ವಿಲೇವಾರಿ ಯಂತ್ರಗಳನ್ನು ಅಳವಡಿಸಿದೆ. ಸೂಕ್ತ ನಿರ್ವಹಣೆ ಕೊರತೆಯಿಂದ ಆ ಯಂತ್ರಗಳು ನಿಷ್ಕ್ರಿಯಗೊಂಡಿರುವ ದೂರುಗಳಿವೆ. ಎಲ್ಲಾ ಶಾಲಾ–ಕಾಲೇಜುಗಳಲ್ಲೂ ಪ್ಯಾಡ್ ವಿತರಣಾ ಯಂತ್ರ ಹಾಗೂ ಸುಡುವ ಯಂತ್ರ ಅಳವಡಿಸಿ, ನಿರ್ವಹಣೆಗೆ ಸೂಕ್ತ ಕ್ರಮಕೈಗೊಂಡರೆ ವಿದ್ಯಾರ್ಥಿನಿಯರ ವೈಯಕ್ತಿಕ ಸ್ವಚ್ಛತೆ ಹಾಗೂ ಶಾಲಾ–ಕಾಲೇಜುಗಳ ನೈರ್ಮಲ್ಯಕ್ಕೆ ಅನುಕೂಲವಾಗಲಿದೆ.
-ತಾನ್ಸಿಯಾ ಬಾನು, ಅಜ್ಜಂಪುರ
**
ಪ್ರಶಸ್ತಿ: ಹೊಸ ಪರಂಪರೆಗೆ ಮುನ್ನುಡಿ
2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯು ಎಲೆಮರೆಯ ಕಾಯಿಗಳ ಪ್ರತಿಭಾನ್ವೇಷಣೆಯ ವಿಧಾನಕ್ಕೆ ಮಾದರಿಯಾಗಿದೆ. ಈ ಬಾರಿ ಪ್ರಶಸ್ತಿಗೆ ಅರ್ಜಿ ಕರೆಯದೆ ಆಯ್ಕೆ ಸಮಿತಿಯು ಪ್ರಾಮಾಣಿಕವಾಗಿ ಅರ್ಹರನ್ನು ಆಯ್ಕೆ ಮಾಡಿದೆ. ಆಯ್ಕೆಯಾಗಿರುವ 70 ಸಾಧಕರಲ್ಲಿ ಹೊಸ ಮುಖಗಳು ಸಾಕಷ್ಟಿವೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ, ಲಿಂಗ ಸಮಾನತೆಯಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿಯು ಸಮಗ್ರ ಕರ್ನಾಟಕಕ್ಕೆ ನ್ಯಾಯ ಒದಗಿಸಿರುವುದು ಪ್ರಶಂಸನೀಯ.
-ಬೀರಪ್ಪ ಡಿ. ಡಂಬಳಿ, ಬೆಳಗಾವಿ
**
ರೀಲ್ಸ್ ಹಾವಳಿಗೆ ಹಾಕಬೇಕಿದೆ ಕಡಿವಾಣ
ಕೆಲವು ತಿಂಗಳ ಹಿಂದೆ ರಿಯಾಲಿಟಿ ಶೋವೊಂದರಲ್ಲಿ ನಿರೂಪಕಿಯೊಬ್ಬರು ಅಲ್ಲಿದ್ದ ಬಾಲಕನಿಗೆ ‘ದೊಡ್ಡವನಾದ ಮೇಲೆ ಏನಾಗುತ್ತೀಯ?’ ಎಂದು ಕೇಳಿದಳು. ‘ಯೂಟ್ಯೂಬರ್ ಆಗ್ತೀನಿ’ ಎಂದು ಬಾಲಕ ಉತ್ತರಿಸಿದ. ಈ ಉತ್ತರವೇ ಸಾಮಾಜಿಕ ಜಾಲತಾಣದ ಪ್ರಭಾವ ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಉದಾಹರಣೆಯಂತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಬಾಲಕ ಮತ್ತು ಬಾಲಕಿ ಶಾಲಾ ಸಮವಸ್ತ್ರ ಧರಿಸಿ ಶಾಲಾ ಆವರಣದಲ್ಲಿ ಕನ್ನಡದ ಸಿನಿಮಾವೊಂದರ ಯುಗಳಗೀತೆಗೆ ಹೆಜ್ಜೆ ಹಾಕಿರುವುದನ್ನು ನೋಡಿ ಮುಜುಗರವಾಯಿತು. ವಿದ್ಯೆ ಕಲಿಸುವ ವಿದ್ಯಾಲಯದಲ್ಲಿ ಈ ರೀತಿಯ ರೀಲ್ಸ್ ಮಾಡಲು ಅವಕಾಶ ನೀಡುವುದು ಸರಿಯಲ್ಲ. ಇದಕ್ಕೆ ಕಡಿವಾಣ ಹಾಕಬೇಕಿದೆ.
-ಟಿ.ಎಸ್. ಪ್ರತಿಭಾ, ಚಿತ್ರದುರ್ಗ
**
ಸುಳ್ಳಿನ ಮುಖವಾಡದ ಅನಾವರಣ
‘ಆರ್‌ಎಸ್‌ಎಸ್: ಸುಳ್ಳು ಸೃಷ್ಟಿಸುವ ಬ್ರಹ್ಮ’ ಲೇಖನವು (ಲೇ: ಕಾಶ್ಯಪ ಪರ್ಣಕುಟಿ, ಪ್ರ.ವಾ., ಅ. 31) ಸುಳ್ಳಿನ ಮುಖವಾಡ ತೊಟ್ಟವರ ನಿಜಬಣ್ಣವನ್ನು ಕಳಚಿಟ್ಟಿದೆ. ಸಭೆ, ಸಮಾರಂಭದಲ್ಲಿ ಸುಳ್ಳನ್ನು ಕರಾರುವಕ್ಕಾಗಿ ಸೃಷ್ಟಿಸಿ ಹೇಳಿದರೆ ಅದನ್ನು ಆಹ್ಲಾದಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಈ ಸತ್ಯ ಅರಿತಿರುವ ಉಪೇಂದ್ರ ಶೆಣೈರಂತಹ ಪರಿವಾರ ಘೋಷಿತ ಬ್ರಹ್ಮಸಂಭೂತರ ಮಾತುಗಳನ್ನು ಎಲ್ಲಿಯವರೆಗೆ ಕೇಳುಗರು ಆಹ್ಲಾದಿಸುತ್ತಾರೋ ಅಲ್ಲಿಯವರೆಗೂ ಬಾರ್ಹಸ್ಪತ್ಯದಂತಹ ಗ್ರಂಥಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈಗಲೂ ಕಾಣಬಹುದಾದ ದೇವದಾಸಿ ಪದ್ಧತಿ, ಅಸ್ಪೃಶ್ಯತೆ, ಸಿಡಿ ಉತ್ಸವದಂತಹ ಅನಿಷ್ಟ ಆಚರಣೆಯ ಸೃಷ್ಟಿಕರ್ತರು ಯಾರು? ಈ ಪದ್ಧತಿಗಳು ಸನಾತನ ಧರ್ಮದ ಭಾಗವೇ ಎಂದು ಪರ್ಣಕುಟಿಯವರಂತೆ ನಾವೂ ಸಮಾಧಾನದಿಂದಲೇ ಪ್ರಶ್ನಿಸಬೇಕಿದೆ. ಹಾಗೆಯೇ, ಬ್ರಹ್ಮ ಸಂಭೂತರು ಇದಕ್ಕೆ ಉತ್ತರಿಸಬೇಕಿದೆ.
-ಆರ್. ಕುಮಾರ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.