ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು 23 ಜನವರಿ 2026

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ನಗಿಸುವುದು ಪರಧರ್ಮ; ನಿಂದನೆ ಅಧರ್ಮ

ಮನರಂಜನೆ ಹೆಸರಿನಲ್ಲಿ ಜನರು ಟಿ.ವಿ ಮತ್ತು ಡಿಜಿಟಲ್ ವೇದಿಕೆಗಳಿಗೆ ಜೋತು ಬಿದ್ದಿರುವುದು ಹೊಸ ವಿಷಯವಲ್ಲ. ಆದರೆ, ಕೆಲವು ಕಾಮಿಡಿ ಶೋಗಳಲ್ಲಿ ಕಲಾವಿದರು ಬಳಸುವ ಮಾತು ಹಾಗೂ ಅಪಮಾನಕರ ಸಂಭಾಷಣೆಯು ಸಾಮಾಜಿಕ ಮೌಲ್ಯಗಳಿಗೆ ಗಾಸಿಯುಂಟು ಮಾಡುತ್ತದೆ. ನಗಿಸುವ ಉದ್ದೇಶ ತಪ್ಪಲ್ಲ.
ಆದರೆ, ಅದಕ್ಕಾಗಿ ಭಾಷೆಯ ಸದಭಿರುಚಿ, ಸಂಸ್ಕೃತಿ, ಗೌರವ ಮತ್ತು ಸಂವೇದನಾ ಶೀಲತೆ ಮರೆತರೆ ಅದು ಮನರಂಜನೆಯಾಗುವುದಿಲ್ಲ; ಮೌಲ್ಯಗಳಿಗೆ ಹಾನಿ ಆಗುತ್ತದೆ. ಇಂತಹ ಕಾರ್ಯಕ್ರಮಗಳ ಪ್ರಭಾವ ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳ ಮೇಲೆ ಬೀರುತ್ತದೆ. ಚಿಣ್ಣರ ಮನಸ್ಸು ಸುಲಭವಾಗಿ ಪ್ರಭಾವಿತವಾಗುವ ಕಾರಣ, ಆಯೋಜಕರು ತಮ್ಮ ಕಾರ್ಯಕ್ರಮಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. 

ADVERTISEMENT

-ಸತೀಶ್, ಮಾನವಿ

**

ಹೊಸ ನಾಯಕತ್ವಕ್ಕೆ ಯುವ ಸ್ಪರ್ಶ ಬೇಕು

ಯುವಜನರಿಗೆ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಹಂಬಲ ಸಹಜ. ಜನಸೇವೆಯ ಕನಸು ಹೊತ್ತಿರುವ ಯುವಜನರು ರಾಜಕೀಯಕ್ಕೆ ಧುಮುಕಲು ಮತ್ತು ಉದಯೋನ್ಮುಖ ನಾಯಕರಾಗಿ ಬೆಳೆಯಲು ಸ್ಥಳೀಯ ಮಟ್ಟದ ಚುನಾವಣೆಗಳೇ ಪ್ರಮುಖ ವೇದಿಕೆಗಳಾಗಿವೆ. ಈಗಾಗಲೇ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಅಧಿಕಾರಾವಧಿ ಮುಗಿದು, ಬಹುತೇಕ ಒಂದು ಅವಧಿಯಷ್ಟು ಸಮಯ ಕಳೆದಿದೆ. ಆದರೂ, ಸರ್ಕಾರಕ್ಕೆ ಚುನಾವಣೆ ನಡೆಸುವ ಮನಸ್ಸಿಲ್ಲ. ಅವಧಿ ಮುಗಿಯಲಿರುವ ಗ್ರಾಮ ಪಂಚಾಯಿತಿಗಳಿಗೂ ಆಡಳಿತಾಧಿಕಾರಿಗಳನ್ನು ನೇಮಿಸಿ ಚುನಾವಣೆ ಮುಂದೂಡುವ ತರಾತುರಿಯಲ್ಲಿದೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಯು ಹೊಸ ನಾಯಕತ್ವದ ಬೆಳವಣಿಗೆಗೂ ಅಡ್ಡಿಯಾಗುತ್ತದೆ.

-ಸಂತೋಷ್ ಸಿ. ಬಡಿಗೇರ, ಇಂಡಿ

**

ಬಿಗ್‌ಬಾಸ್‌ಗೆ ಪ್ರೀತಿ; ಮತದಾನಕ್ಕೆ ಅಸಡ್ಡೆ

ಈ ಬಾರಿಯ ‘ಬಿಗ್‌ಬಾಸ್’ ರಿಯಾಲಿಟಿ ಶೋ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿತು. ಹಿಂದಿನ ಸೀಸನ್‌ಗಳಿಗಿಂತ ಹೆಚ್ಚು ಜನರು ವೀಕ್ಷಿಸಿ, ಮತ ಹಾಕಿ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಿದರು. ಇದರಲ್ಲಿ ಬಹುಪಾಲು ಯುವಸಮೂಹವೇ ಭಾಗಿಯಾಗಿತ್ತು. ಕಳೆದ ವಿಧಾನಸಭೆ ಚುನಾವಣೆಗೆ ಶೇ 73ರಷ್ಟು ಹಾಗೂ ಲೋಕಸಭೆ ಚುನಾವಣೆಗೆ ಶೇ 64ರಷ್ಟು ಮತದಾನ ನಡೆದಿತ್ತು. ಬಿಗ್‌ಬಾಸ್ ಸ್ಪರ್ಧಿಗಳಿಗೆ ಬೆಂಬಲ ಹಾಗೂ ವಿರೋಧಕ್ಕೆ ದಿನಪೂರ್ತಿ ಜಾಲತಾಣದಲ್ಲಿ ಕಾಲ ಕಳೆಯುವ ಯುವಜನರಿಗೆ ಅಭಿವೃದ್ಧಿಗೆ ಪೂರಕವಾದ ಚುನಾವಣೆಗಳ ಬಗ್ಗೆ ನಿರಾಸಕ್ತಿ ಏಕೆ? ಕೆಲವೇ ದಿನಗಳಲ್ಲಿ ಐಪಿಎಲ್ ಟೂರ್ನಿಯೂ ಪ್ರಾರಂಭವಾಗಲಿದೆ. ಯುವಸಮೂಹ ಅದರಲ್ಲಿ ಮುಳುಗುತ್ತದೆ. ಇದೆಲ್ಲವನ್ನು ಗಮನಿಸಿದರೆ ‘ಜನರಿಗೆ ಬ್ರೆಡ್ ಮತ್ತು ಸರ್ಕಸ್ ಕೊಡು, ಆಗ ಅವರ ಗಮನವನ್ನು ಬೇರೆಡೆ ಸೆಳೆಯಬಹುದು’ ಎಂಬ ರೋಮನ್ ಗಾದೆ ನೆನಪಾಗುತ್ತದೆ. 

-ಚಂದ್ರಶೇಖರ್ ಬಿ.ಎನ್., ಮೈಸೂರು

**

ಹೆಸರು ಬದಲಿಸುವುದೇ ಸರ್ಕಾರದ ಕೆಲಸ

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿದ್ದಾರೆ. ಈ ಮೂರು ಅವಧಿಯಲ್ಲಿಯೂ ಸರ್ಕಾರಿ ಯೋಜನೆ, ಕಟ್ಟಡ, ಸೇತುವೆ ಇತ್ಯಾದಿ ಹೆಸರು ಬದಲಾವಣೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇಂದಿರಾ ಆವಾಸ್ ಯೋಜನೆಯನ್ನು ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯೆಂದು ಬದಲಾಯಿಸಲಾಯಿತು. ಆದರೆ, ಬಡವರಿಗೆ ಸೂರು ಕಲ್ಪಿಸುವುದು ಕನಸಾಗಿಯೇ ಉಳಿದಿದೆ. ಪ್ರಸ್ತುತ ‘ಮನರೇಗಾ’ ಯೋಜನೆಯನ್ನು ‘ವಿಬಿ–ಜಿ ರಾಮ್ ಜಿ’ ಎಂದು ಬದಲಿಸಲಾಗಿದೆ. ಉದ್ಯೋಗ ನೀಡುವುದು ಸರ್ಕಾರದ ಆದ್ಯತೆಯಾಗಬೇಕು. ಯೋಜನೆಯ ಹೆಸರು ಬದಲಿಸುವುದನ್ನೇ ಉದ್ಯೋಗ ಮಾಡಿಕೊಳ್ಳಬಾರದು.

-ಕುರುಬರ ಸಚಿನ್, ವಿಜಯನಗರ

**

ಅಧಿಕಾರಿಗಳ ನಡತೆ ಎತ್ತರಕ್ಕೇರುತ್ತಿಲ್ಲ ಏಕೆ?

ಡಿಜಿಪಿ ಕೆ. ರಾಮಚಂದ್ರರಾವ್ ಅವರ ಆಕ್ಷೇಪಾರ್ಹ ವಿಡಿಯೊ ಕೇವಲ ಒಂದು ಘಟನೆಯಲ್ಲ; ಅದು ಆಡಳಿತ ವ್ಯವಸ್ಥೆಯ ನೈತಿಕ ಕುಸಿತದ ಸಂಕೇತ. ನಾಗರಿಕರ ಹಕ್ಕುಗಳನ್ನು ರಕ್ಷಿಸಲು ನೇಮಕಗೊಂಡಿದ್ದ ಈ ಅಧಿಕಾರಿಯೇ ಮಹಿಳೆಯರ ಗೌರವಕ್ಕೆ ಚ್ಯುತಿ ತಂದಿರುವುದು ಅಕ್ಷಮ್ಯ. ಸಾಮಾನ್ಯ ನೌಕರ ಹಾದಿತಪ್ಪಿದರೆ ಅದು ವೈಯಕ್ತಿಕ ದೋಷ; ಆದರೆ, ಉನ್ನತ ಹುದ್ದೆಯಲ್ಲಿದ್ದವರು ನೈತಿಕತೆಯ ಮಿತಿ ಮೀರಿದರೆ ಅದು ವ್ಯಕ್ತಿಯ ತಪ್ಪಲ್ಲ, ವ್ಯವಸ್ಥೆಯ ದೋಷ ಎಂದು ಹೇಳುವುದು ಸಾಧ್ಯವಿಲ್ಲ. ಹುದ್ದೆಗಳ ಎತ್ತರ ಏರುತ್ತಿದೆಯಾದರೂ, ನಡತೆಯ ಎತ್ತರ ಏರುತ್ತಿದೆಯೇ ಎಂಬ ಪ್ರಶ್ನೆಯನ್ನು ಈ ಪ್ರಕರಣ ಜನರ ಮುಂದಿಟ್ಟಿದೆ. ಅಧಿಕಾರಿಗಳ ನಡತೆಯೇ ಪಾತಕಮಯವಾಗಿದ್ದರೆ, ಸಮಾಜಕ್ಕೆ ದಾರಿ ತೋರಿಸುವ ಬೆಳಕು ಎಲ್ಲಿಂದ ಬರುತ್ತದೆ? ಅಧಿಕಾರಿಗಳ ನೈತಿಕತೆ ಶುದ್ಧವಾಗಿರಬೇಕು. ಇಲ್ಲದಿದ್ದರೆ, ಹುದ್ದೆಗಳು ಬೆಳಕನ್ನು ನೀಡುವುದಿಲ್ಲ; ಕತ್ತಲೆಯನ್ನೇ ಗಾಢಗೊಳಿಸುತ್ತವೆ.

-ಪ್ರಶಾಂತ ಕುಲಕರ್ಣಿ, ಸಿಂದಗಿ

**

ನೇಮಕಾತಿ ವಿಳಂಬ: ಕನಸಿಗೆ ಕೊಳ್ಳಿ

ಕಳೆದ ಎರಡು ಮೂರು ವರ್ಷಗಳಿಂದ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ನಡೆದಿಲ್ಲ. ದಲಿತರು ಮತ್ತು ಬಲಹೀನರಿಗೆ ರಕ್ಷಣೆಯಾಗಬೇಕಿದ್ದ ಮೀಸಲಾತಿಯು ರಾಜಕೀಯ ಲಾಭದ ಸಾಧನವಾಗಿ ಬದಲಾಗಿರುವುದು ದುರದೃಷ್ಟಕರ. ಉದ್ಯೋಗಾಕಾಂಕ್ಷಿಗಳ ಸಾಲಿನಲ್ಲಿ ರಾಜಕೀಯ ನಾಯಕರ ಮಕ್ಕಳಿದ್ದಿದ್ದರೆ, ಸರ್ಕಾರಕ್ಕೂ ನಿರುದ್ಯೋಗಿಗಳ ಕಷ್ಟ ಅರ್ಥವಾಗುತ್ತಿತ್ತು. ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆಯೆಂದು ಯುವಜನರು ನಿರೀಕ್ಷೆಯಿಂದ ಕಾಯುವುದೇ ಶಿಕ್ಷೆಯಾಗಿದೆ. ಒಂದೇ ಬಾರಿಗೆ ಅನ್ವಯವಾಗುವಂತೆ ವಯೋಮಿತಿ ಸಡಿಲಿಕೆ ಘೋಷಿಸುವುದು ದೊಡ್ಡ ಅನ್ಯಾಯ ಅಲ್ಲವೇ? ಒಂದೇ ಅವಕಾಶ ನೀಡಿ ‘ನ್ಯಾಯ ಕೊಟ್ಟೆವು’ ಎಂದು ಹೇಳುವುದು ಸರ್ಕಾರದ ಅಸೂಕ್ಷ್ಮ ನಡೆಯ ಸಂಕೇತ.

 -ದರ್ಶನ್ ಎಂ.ಜಿ., ಕಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.