ಹುಲಿ ದಾಳಿ: ಸಂತ್ರಸ್ತರ ಅರಣ್ಯರೋದನ
ಹುಲಿಯನ್ನು ಕೊಂದ ಮನುಷ್ಯರ ಹೆಡೆಮುರಿ ಕಟ್ಟಿ ಜೈಲಿಗಟ್ಟಲಾಗುತ್ತದೆ. ಹುಲಿಯು ಮನುಷ್ಯರನ್ನು ಕೊಂದಾಗ ಯಾರನ್ನು ಜೈಲಿಗಟ್ಟುವುದು? ವನ್ಯಜೀವಿ ಗಳನ್ನು ಮನುಷ್ಯರಿಂದ ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಿದೆ. ವನ್ಯಜೀವಿ ಸಂರಕ್ಷಕರು, ಅರಣ್ಯಾಧಿಕಾರಿಗಳು, ಅರಣ್ಯ ಸಚಿವರಿದ್ದಾರೆ. ನ್ಯಾಯಾಲಯವೂ ಇದೆ! ವಿಪರ್ಯಾಸವೆಂದರೆ, ವನ್ಯಜೀವಿಗಳಿಂದ ಮನುಷ್ಯರನ್ನು ರಕ್ಷಿಸಲು ಯಾವುದೇ ಕಾಯ್ದೆಯಿಲ್ಲ! ಯಾವುದೇ ಅಧಿಕಾರಿಯಿಲ್ಲ, ಸಚಿವರಿಲ್ಲ, ನ್ಯಾಯಾಲಯವೂ ಇಲ್ಲ. ಹುಲಿ ದಾಳಿಗೆ ಬಲಿಯಾದ ನಿರಪರಾಧಿಯ ಕುಟುಂಬದವರದು ಬರೀ ಅರಣ್ಯರೋದನ ಅಷ್ಟೇ.
-ಪಿ.ಜೆ. ರಾಘವೇಂದ್ರ, ಮೈಸೂರು
**
ಕೀಳುಮಟ್ಟದ ಟೀಕೆ–ಟಿಪ್ಪಣಿ ಅಸಹ್ಯಕರ
ರಾಜಕಾರಣದಲ್ಲಿ ರಾಜಕೀಯ ವಿರೋಧಿಗಳು ಪರಸ್ಪರ ಟೀಕೆ–ಟಿಪ್ಪಣಿ ಮಾಡುವುದು ಸಹಜ. ಇಷ್ಟಕ್ಕೆ ಸೀಮಿತವಾಗದೆ ಕುಟುಂಬದ ಸದಸ್ಯರ ವೈಯಕ್ತಿಕ ವಿಷಯಗಳೂ ಈ ಟೀಕೆಗಳಲ್ಲಿ ನುಸುಳುತ್ತಿರುವುದು ದುರದೃಷ್ಟಕರ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಸ್ಥಾನಮಾನ ಮರೆತು ಪರಸ್ಪರ ಏಕವಚನ ದಲ್ಲಿ ನಿಂದಿಸಿಕೊಳ್ಳುವುದು, ಮತದಾರರಿಗೆ ಮಾಡಿದ ಅಗೌರವ. ಇನ್ನೂ ಕೆಲವು ನಾಯಕರು, ಶಾಸಕರು, ಮಾಜಿ ಸಂಸದರು, ತಮ್ಮ ಮನೆಯ ಹೆಣ್ಣುಮಕ್ಕಳು ಮತ್ತು ತಂದೆ–ತಾಯಿಯ ಹೆಸರನ್ನು ಟೀಕೆಯ ಮಧ್ಯೆ ತರುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದು.
-ಚಂದ್ರಕುಮಾರ್ ಡಿ., ಬೆಂಗಳೂರು
**
ಮಾತಿನ ಸದಾಶಯ ಕೃತಿಯಲ್ಲಿ ಕಣ್ಮರೆ
‘ಕಡುಬಿನ ರುಚಿಗೆ ತಿಂದದ್ದೇ ಆಧಾರ ಅಲ್ಲವೇ?’ ಲೇಖನದಲ್ಲಿ (ಲೇ: ಕೋಟ ಶ್ರೀನಿವಾಸ ಪೂಜಾರಿ, ಪ್ರ.ವಾ., ಅ. 28) ‘ಸಂಘದ ಜಾತಿ ಒಂದೇ: ಅದು ಹಿಂದೂ, ಹಿಂದೂ, ಹಿಂದೂ’ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಆರ್‌ಎಸ್‌ಎಸ್‌ನ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಇದನ್ನು ಹೇಳುತ್ತಾರೆ. ಬಹಿರಂಗದಲ್ಲಿ ಅಂತರ್ಜಾತೀಯ ವಿವಾಹ ಆಗಬೇಕೆನ್ನುತ್ತಾರೆ. ಆದರೆ, ಜಾತಿವಿನಾಶಕ್ಕೆ ಆರ್‌ಎಸ್‌ಎಸ್ ಎಷ್ಟು ಅಂತರ್ಜಾತೀಯ ವಿವಾಹ ಕಾರ್ಯಕ್ರಮಗಳನ್ನು ನಡೆಸಿದೆ? ದಲಿತರ ದೇವಾಲಯ ಪ್ರವೇಶಕ್ಕೆ, ದೇವಾಲಯ ಗಳಲ್ಲಿ ಸಹಪಂಕ್ತಿ ಭೋಜನಕ್ಕೆ ಏನೆಲ್ಲಾ ಪ್ರಯತ್ನಗಳನ್ನು ಮಾಡಿದೆ? ಈ ಬಗ್ಗೆ ಪೂಜಾರಿ ಅವರು ತಿಳಿಸುವರೇ? ಬಹಿರಂಗದಲ್ಲಿ ಅಂತರ್ಜಾತೀಯ ವಿವಾಹ ಆಗಬೇಕೆನ್ನುವವರು, ‘ಅಂತರಂಗದಲ್ಲಿ ಮದುವೆ ವ್ಯಕ್ತಿಗತ ವಿಷಯ; ಅದರಲ್ಲಿ ಆರ್‌ಎಸ್‌ಎಸ್ ತಲೆ ಹಾಕುವುದಿಲ್ಲ’ ಎನ್ನುತ್ತಾರೆ. ಅಂತೆಯೇ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಸಂದರ್ಭಗಳಲ್ಲಿ ಆರ್‌ಎಸ್‌ಎಸ್ ಸಕ್ರಿಯವಾಗಿ ದಲಿತರ ಪರ ನಿಂತು ದೇಗುಲದೊಳಗೆ ಪ್ರವೇಶ ಕೊಡಿಸಿದ ನಿದರ್ಶನ ಉಂಟೇ? ಸಂಘದ ಈ ನಡವಳಿಕೆಯು ‘ಹಿಂದೂ ಒಂದು’ ಎಂದು ಘೋಷಿಸುವ ಅವರ ಮಾತಿಗೂ, ಕೃತಿಗೂ ಇರುವ ಅಜಗಜಾಂತರ ವ್ಯತ್ಯಾಸಕ್ಕೆ ಕನ್ನಡಿ ಹಿಡಿಯುತ್ತದೆ.
-ಎಚ್.ಎಸ್. ನಂದಕುಮಾರ್, ಮಂಗಳೂರು
**
ಬೀದಿನಾಯಿ ನಿಯಂತ್ರಣ ಆದ್ಯತೆಯಾಗಲಿ
ಬೀದಿನಾಯಿಗಳ ಹಾವಳಿ ತಡೆಗಟ್ಟಲು ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಇದುವರೆಗೂ ಪ್ರಮಾಣಪತ್ರ ಸಲ್ಲಿಸದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ಸರಿಯಾಗಿದೆ. ದೇಶದ ಬಹುತೇಕ ಕಡೆ ಬೀದಿನಾಯಿಗಳಿಂದ ಮಕ್ಕಳು ಮತ್ತು ವೃದ್ಧರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಬೀದಿನಾಯಿಗಳ ಹಾವಳಿ ತಡೆಗಟ್ಟುವುದು ಸರ್ಕಾರದ ಜವಾಬ್ದಾರಿಯಾಗಿದೆ.
-ಯಲ್ಲಪ್ಪ ಟಿ. ಗಲಗ್ಕರ್, ದೇವದುರ್ಗ
**
ಮಸೂದೆ: ವಿಸ್ತೃತವಾಗಿ ಚರ್ಚೆ ನಡೆಸಲಿ
ಮನೆ ಕೆಲಸದವರ ಕಲ್ಯಾಣ ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಇದು ಕಾಯ್ದೆಯಾದ ಮೇಲೆ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎನ್ನುವುದು ಯಕ್ಷಪ್ರಶ್ನೆ. ಕಟ್ಟಡ ಕಾರ್ಮಿಕರ ಕಲ್ಯಾಣ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕಟ್ಟಡ ನಿರ್ಮಾಣ ವೆಚ್ಚದಡಿ ಸಂಗ್ರಹಿಸುವ ಶೇ 1ರಷ್ಟು ಸೆಸ್ ಅನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಹೀಗಿರುವಾಗ ಅಸಂಘಟಿತ ವಲಯದಲ್ಲಿ ಇರುವ ಮನೆ ಕೆಲಸದವರ ಕಲ್ಯಾಣಕ್ಕೆ ಸರ್ಕಾರ ಯಾವ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಎಂಬ ಬಗ್ಗೆ ಕಾದುನೋಡಬೇಕಿದೆ. ಮಸೂದೆ ಮಂಡನೆಗೂ ಮೊದಲು ಇದರ ಸಾಧಕ–ಬಾಧಕದ ಬಗ್ಗೆ ಚರ್ಚೆ ಅಗತ್ಯ.
-ಕಡೂರು ಫಣಿಶಂಕರ್, ಬೆಂಗಳೂರು
**
ತಲೆಗಿಂತ ಮುಂಡಾಸು ಭಾರ ಆದಂತಿದೆ!
ಬೆಂಗಳೂರು ಹೊರವಲಯದ ವರ್ತುಲ ರೈಲು ಮಾರ್ಗ ನಿರ್ಮಾಣದ ಅಂದಾಜು ವೆಚ್ಚ ₹20 ಸಾವಿರ ಕೋಟಿ. ಭೂಸ್ವಾಧೀನಕ್ಕೆ ₹60 ಸಾವಿರ ಕೋಟಿ ಬೇಕಿದೆ. ಇದು ತಲೆಗಿಂತ ಪೇಟ ಭಾರ ಆದಂತಿದೆ. ರೈತರ ಭೂಮಿಗೆ ಬಂಗಾರದ ಬೆಲೆ ಬಂದಾಗಿದೆ. ಇನ್ನು ಯಾವ ಯೋಜನೆಗೂ ರೈತರು ಭೂಮಿ ನೀಡುವುದಿಲ್ಲ. ಅವರ ಆಯ್ಕೆ ಸರಿಯಾಗಿದೆ. ಸ್ವಾಧೀನಕ್ಕೆ ಒಳಪಡುವ ರೈತರ ಜಮೀನುಗಳನ್ನು ಐವತ್ತು ವರ್ಷಗಳ ಕಾಲ ಹಸಿರು ವಲಯದಲ್ಲಿ ಉಳಿಸಬೇಕು. ಈ ಬಗ್ಗೆ ಕಾನೂನು ರೂಪಿಸಬೇಕು.
-ಮಲ್ಲಿಕಾರ್ಜುನ, ಸುರಧೇನುಪುರ
**
ಕನ್ನಡ
ಭಾವನೆಗಳು ಉಕ್ಕಿ
ಬಂದಾಗ ಬೇರೆ
ಭಾಷೆಗಳು ಕೈ
ಕೊಡುವುದೇ ತಡ...
ಸರಾಗವಾಗಿ ಬಂದು
ಕೈ ಹಿಡಿದು
ಬಿಡುತ್ತೆ ಸವಿನುಡಿಯ
ಕನ್ನಡ...
-ವಿಜಯ ಮಹಾಂತೇಶ್, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.