ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
   

ಮದ್ಯವ್ಯಸನದಿಂದ ವ್ಯಕ್ತಿ–ಕುಟುಂಬ ನಾಶ

ಆಂಧ್ರಪ್ರದೇಶದ ಕರ್ನೂಲ್‌ ಬಳಿ ಸಂಭವಿಸಿದ ಬಸ್‌ ದುರಂತಕ್ಕೆ ಮದ್ಯವ್ಯಸನಿಯೇ
ಕಾರಣ ಎಂದು ಪ್ರಾಥಮಿಕ ತನಿಖಾ ವರದಿ ಹೇಳಿದೆ. ಕುಡಿದ ಮತ್ತಿನಲ್ಲಿ ಬೈಕ್‌ ಸವಾರ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದ. ಆ ಬೈಕ್‌ಗೆ ಬಸ್‌ ಡಿಕ್ಕಿಯಾಗಿದ್ದರಿಂದ ದೊಡ್ಡ ಅನಾಹುತ ಸಂಭವಿಸಿದೆ. ಹಾಗಾಗಿ, ಸರ್ಕಾರಗಳು ಮದ್ಯಪಾನದಿಂದ ಆಗುತ್ತಿರುವ ದುರಂತಗಳತ್ತ ಗಮನಹರಿಸಬೇಕಿದೆ. ಜನರ ಜೀವಹರಣ ಮಾಡಿ ಹಣ ಸಂಪಾದಿಸುವುದು ನೈತಿಕತೆಯಲ್ಲ. ಮದ್ಯಪಾನ ನಿಷೇಧಕ್ಕೆ ಸರ್ಕಾರ ಮುಂದಾಗಬೇಕಿದೆ. 

‌ರಷ್ಯಾದ ಮೇರು ಲೇಖಕ ಲಿಯೊ ಟಾಲ್‌ಸ್ಟಾಯ್ ಯುವ ವಯಸ್ಸಿನಲ್ಲಿ ಕುಡುಕನಾಗಿದ್ದ. ನಂತರ ಕುಡಿತದಿಂದ ಮುಕ್ತನಾದ. ಮನುಷ್ಯರಿಗೆ ಅತ್ಯಂತ ಅವಶ್ಯಕವಾದ ವಿವೇಕವನ್ನೇ ಕುಡಿತ ಕಿತ್ತುಕೊಳ್ಳುತ್ತದೆ; ಆದ್ದರಿಂದ ಇದರ ಸಹವಾಸ ಬೇಡವೇ ಬೇಡ ಎಂದ. ‘ತಾನು ಈ ದೇಶದ ಸರ್ವಾಧಿಕಾರಿಯಾದರೆ ಮದ್ಯಪಾನ ನಿಷೇಧವು ನನ್ನ ಮೊದಲ ಆದ್ಯತೆ’ ಎಂದಿದ್ದರು ಗಾಂಧೀಜಿ.

ADVERTISEMENT

-ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ 

**

ಆಸ್ತಿ ನೋಂದಣಿಗೆ ಸರ್ವರ್‌ ಅಡಚಣೆ

ಕಳೆದ ಮೂರು ದಿನಗಳಿಂದ ಆಸ್ತಿ ನೋಂದಣಿ ಮಾಡಿಸಲು ನೋಂದಣಾಧಿಕಾರಿ ಗಳ ಕಚೇರಿ ಸುತ್ತುತ್ತಿದ್ದೇನೆ. ಅಲ್ಲಿನ ಸಿಬ್ಬಂದಿ ಸರ್ವರ್ ಸರಿ ಇಲ್ಲವೆಂಬ ಉತ್ತರ ನೀಡುತ್ತಾರೆ. ಸರ್ವರ್ ಸಮಸ್ಯೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವರಮಾನ ನಷ್ಟ. ಇದಕ್ಕೆ ಯಾರೂ ಹೊಣೆ. ತ್ವರಿತವಾಗಿ ಈ ಸಮಸ್ಯೆ ಬಗೆಹರಿಸಿ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕಿದೆ.

-ಮಲ್ಲತ್ತಹಳ್ಳಿ ಎಚ್. ತುಕಾರಾಂ, ಬೆಂಗಳೂರು 

**

ಎಸ್‌ಬಿಐ: ಕನ್ನಡಿಗರಿಗೆ ಸಿಗಬೇಕಿದೆ ಆದ್ಯತೆ

ಕರ್ನಾಟಕದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಶಾಖೆಗಳಲ್ಲಿ ಕನ್ನಡೇತರ ಸಿಬ್ಬಂದಿಯ ಭಾಷಾ ಸಂವಹನ ಕೊರತೆಯಿಂದಾಗಿ ಕನ್ನಡಿಗರು ತೊಂದರೆಗೆ ಸಿಲುಕುತ್ತಿ ದ್ದಾರೆ. ಭಾಷೆಯ ಸಮಸ್ಯೆ ಕೆಲವು ಶಾಖೆಗಳಲ್ಲಿ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಘರ್ಷಣೆಗೂ ಕಾರಣವಾಗಿದೆ. ಮುಂದಿನ ಐದು ತಿಂಗಳೊಳಗೆ ಸುಮಾರು 3,500 ಸಿಬ್ಬಂದಿ ನೇಮಕಕ್ಕೆ ಎಸ್‌ಬಿಐ ನಿರ್ಧರಿಸಿದೆ. ಕರ್ನಾಟಕಕ್ಕೆ ಮೀಸಲಾಗಿರುವ ಹುದ್ದೆಗಳಿಗೆ ಕನ್ನಡದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲು ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ಣಯಿಸಬೇಕಿದೆ. ಇದರಿಂದ ಬ್ಯಾಂಕಿಂಗ್‌ ವಹಿವಾಟು ಸರಾಗವಾಗಿ ನಡೆಯಲಿದೆ. ಗ್ರಾಹಕರಿಗೂ ಅನುಕೂಲವಾಗಲಿದೆ. 

-ಪಟ್ಟಡಿ ಎ. ಬಸವರಾಜ್, ಬೆಂಗಳೂರು

**

ಸುರಂಗ ರಸ್ತೆ: ಜನಪ್ರತಿನಿಧಿಗಳೇಕೆ ಮೌನ?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜೋಡಿ ಸುರಂಗ ರಸ್ತೆ ನಿರ್ಮಾಣವು ಅನಗತ್ಯ ಕಾರಣಗಳಿಂದ ನಿತ್ಯವೂ ಸದ್ದು ಮಾಡುತ್ತಿದೆ. ಇದರ ನಿರ್ಮಾಣದ ಅವಶ್ಯಕತೆ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಇಂದಿಗೂ ಜನರ ಮುಂದೆ ವೈಜ್ಞಾನಿಕ ಸಕಾರಣಗಳನ್ನು ತೆರೆದಿಟ್ಟಿಲ್ಲ. ಬೆಂಗಳೂರು ಪ್ರತಿನಿಧಿಸುವ ಜನಪ್ರತಿನಿಧಿಗಳ ಪೈಕಿ ಒಂದಿಬ್ಬರಷ್ಟೆ ಇದರ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹ ವಿಷಯದಲ್ಲಿ ಉಳಿದವರ ಮೌನ ನಿಜಕ್ಕೂ ಅಚ್ಚರಿದಾಯಕ. ಸುರಂಗ ರಸ್ತೆಯಿಂದ ಆಗುವ ಪರಿಸರ ಹಾನಿಗೆ ಜವಾಬ್ದಾರಿ ಹೊರುವವರು ಯಾರು? 

-ಕೆ.ಎಸ್. ಸೋಮೇಶ್ವರ, ಬೆಂಗಳೂರು

**

‘ಎ’ ಖಾತಾ: ಇಡೀ ರಾಜ್ಯಕ್ಕೆ ವಿಸ್ತರಣೆ ಆಗಲಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ‘ಬಿ’ ಖಾತಾ ಸಮಸ್ಯೆಗಳು ರಾಜ್ಯದ ಎಲ್ಲಾ ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿವೆ. ಬೆಂಗಳೂರಿಗರಿಗೆ ಸಿಕ್ಕಿರುವ ನೆಮ್ಮದಿ ಮತ್ತು ಕಾನೂನಾತ್ಮಕ ಭದ್ರತೆಯು ರಾಜ್ಯದ ಉಳಿದ ಭಾಗದ ಜನರಿಗೆ ಏಕಿಲ್ಲ? ​ಈ ಯೋಜನೆಯು ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು. ಸರ್ಕಾರವು ಈ ಕುರಿತಾದ ಕಾನೂನು ಪ್ರಕ್ರಿಯೆಗಳನ್ನು ವಿಳಂಬ ಮಾಡದೆ ಕೂಡಲೇ ತಜ್ಞರ ಅಭಿಪ್ರಾಯ ಪಡೆದು ಇಡೀ ರಾಜ್ಯಕ್ಕೆ ವಿಸ್ತರಿಸಬೇಕಿದೆ. 

-ರವಿ, ಹರಿಹರ 

**

ಅಶ್ವಮೇಧ ಬಸ್‌: ಪಾಸ್ ಅನುಮತಿಸಿ

ಶಾಲಾ–ಕಾಲೇಜು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ‘ಶಕ್ತಿ’ ಯೋಜನೆಯ ಪರಿಣಾಮದಿಂದಾಗಿ ಈ ಬಸ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಪಾಡು ಹೇಳತೀರದು. ವಿದ್ಯಾರ್ಥಿನಿಯರಿಗೆ ‘ಶಕ್ತಿ’ ಸೌಲಭ್ಯದಿಂದ ಅಶ್ವಮೇಧ ಬಸ್ ಮತ್ತು ತಡೆರಹಿತ ಬಸ್‌ಗಳಲ್ಲಿಯೂ ಉಚಿತ ಪ್ರಯಾಣದ ಅವಕಾಶವಿದೆ. ಗಂಡು ಮಕ್ಕಳಿಗೆ ಈ ಬಸ್‌ಗಳಲ್ಲಿ ಪಾಸ್ ಅನುಮತಿಸುತ್ತಿಲ್ಲ. ಇದರಿಂದ ಅವರು ಆಗೊಮ್ಮೆ ಹೀಗೊಮ್ಮೆ ಬರುವ ಸಾಮಾನ್ಯ ಬಸ್‌ಗಳನ್ನೇ ಅವಲಂಬಿಸುವಂತಾಗಿದೆ. ಇದರಿಂದ ಅವರು ನಿಗದಿತ ಸಮಯಕ್ಕೆ ಶಾಲೆ, ಕಾಲೇಜು ತಲುಪಲು ಸಾಧ್ಯವಿಲ್ಲದಂತಾಗಿದೆ. ತಡೆರಹಿತ ಮತ್ತು ಅಶ್ವಮೇಧ ಬಸ್‌ಗಳಲ್ಲಿ ವಿದ್ಯಾರ್ಥಿ ಪಾಸ್ ಅನುಮತಿಗೆ ಅವಕಾಶ ಕಲ್ಪಿಸಬೇಕಿದೆ.

-ದರ್ಶನ್ ಚಂದ್ರ ಎಂ.ಪಿ., ಮುಕ್ಕಡಹಳ್ಳಿ 

**
ಬದುಕು

ಕಣ್ಣಿಲ್ಲದವರ ಮದುವೆಗೆ
ಕಣ್ಣಿದ್ದವರ ಕಾನೂನು
ಕುರುಡಾಗಿತ್ತು.
ಪ್ರಭಾವತಿ ಮತ್ತು 
ಇಮಾಂಸಾಬ್ ಅಂಧರು 
ದಾಂಪತ್ಯಕ್ಕೆ ಕಾಲಿಟ್ಟಾಗ, 
ಜಾತಿ–ಧರ್ಮ ಹಿಂದೆ ಸರಿದು
ಬದುಕು ಕಣ್ಣು ತೆರೆಸಿತು.

 -ತಾ.ಸಿ. ತಿಮ್ಮಯ್ಯ, ಬೆಂಗಳೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.