ADVERTISEMENT

ನಕಲಿ ಗೆಳತನಕ್ಕೆ ಗುಡ್‌ಬೈ, ದೇಶ ಸುತ್ತಬೇಕು: ಹೀಗಿದೆ ಯುವಜನತೆಯ 2026ರ ನಿರ್ಧಾರ

ವೀಣಾಶ್ರೀ
Published 31 ಡಿಸೆಂಬರ್ 2025, 7:06 IST
Last Updated 31 ಡಿಸೆಂಬರ್ 2025, 7:06 IST
<div class="paragraphs"><p>ಗೆಟ್ಟಿ ಚಿತ್ರ</p></div>

ಗೆಟ್ಟಿ ಚಿತ್ರ

   

ಇಂದು (ಡಿಸೆಂಬರ್ 31) ಈ ವರ್ಷದ ಕೊನೆಯ ದಿನ. 2025ಕ್ಕೆ ವಿದಾಯ ಹೇಳಿ, 2026 ಅನ್ನು ಸ್ವಾಗತಿಸಲು ಯುವಜನತೆ ಸಜ್ಜಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳಾಗುವುದನ್ನು ಕಾಣಬಹುದು. ಜೀವನಶೈಲಿ ಅಥವಾ ಅಭ್ಯಾಸಗಳಲ್ಲಿ ಸುಧಾರಣೆ ತರಲು ಅನೇಕರು ಸಂಕಲ್ಪ ಮಾಡುತ್ತಾರೆ.

2026ಕ್ಕೆ ಆರೋಗ್ಯ, ಶಿಕ್ಷಣ, ವೈಯಕ್ತಿಕ ಬೆಳವಣಿಗೆ, ಸಂಬಂಧಗಳು, ಹೊಸ ಕೌಶಲ್ಯ ಕಲಿಯುವುದಕ್ಕೆ ಯುವಜನತೆ ವಿಭಿನ್ನ ನಿರ್ಣಯವನ್ನು ಕೈಗೊಂಡಿದ್ದಾರೆ. ಹೊಸ ವರ್ಷದ ಹೊಸ್ತಿಲಿನಲ್ಲಿರುವ ಯುವಜನತೆಯನ್ನು 'ಪ್ರಜಾವಾಣಿ ಡಿಜಿಟಲ್' ಮಾತನಾಡಿಸಿದಾಗ ಅವರ ಉತ್ತರ ಹೀಗಿದೆ...

ADVERTISEMENT

ಗೆಟ್ಟಿ ಚಿತ್ರ

ಐಎಎಸ್ ಆಫೀಸರ್ ಆಗಲೇಬೇಕು..

ನನ್ನ ಹೆಸರು ಮಾಯಾ, ನಾನು ಈಗ ಪಿಜಿಯಲ್ಲಿ ವಾಸವಿದ್ದೇನೆ. ನಾನು ಬೆಂಗಳೂರಿಗೆ ಬಂದಿರುವ ಉದ್ದೇಶವೇ ಐಎಎಸ್ ಅಧಿಕಾರಿಯಾಗಲು. ಹೀಗಾಗಿ ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ಓದುತ್ತಿದ್ದೇನೆ. ಈಗ ನಾನು ಹೆಚ್ಚಾಗಿ ಗ್ರಂಥಾಲಯದಲ್ಲೇ ಕಾಲ ಕಳೆಯುತ್ತಿದ್ದೇನೆ. ಇದು ನನಗೆ ಖುಷಿ ಕೊಟ್ಟಿದೆ. ಈ ವರ್ಷದ ನನ್ನ ನಿರ್ಣಯ, ನಮ್ಮ ಮನೆಯವರ ಆಸೆ ಒಂದೇ ಐಎಎಸ್ ಅಧಿಕಾರಿಯಾಗುವುದು. ಇದು ನನಗೆ ನಾನೇ ಮಾಡಿಕೊಂಡಿರುವ ಸಂಕಲ್ಪ ಎಂದರು.

ನನ್ನ ತಂದೆ ತಾಯಿಗೆ ಆಸರೆಯಾಗಬೇಕು

ನನ್ನ ಹೆಸರು ಕಾರ್ತೀಕ್, 2025ರಲ್ಲಿ ನಾನು ತುಂಬಾ ಕಷ್ಟಗಳನ್ನು ಎದುರಿಸಿದ್ದೇನೆ. ಅದನ್ನು ಎದುರಿಸಲು ನಾನು ತುಂಬಾ ಶ್ರಮವಹಿಸಿದ್ದೇನೆ. ಈಗ ಯಾವುದೇ ಕಷ್ಟಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧವಾಗಿದ್ದೇನೆ. ಅದರಲ್ಲಿ ಒಂದು ನನ್ನ ತಂದೆ ತಾಯಿಗೆ ಆಸರೆಯಾಗಿ ನಿಲ್ಲುವುದೇ ನನ್ನ ದೃಢ ನಿರ್ಧಾರವಾಗಿದೆ.

ಅಮ್ಮನ ಬಳಿ ದುಡ್ಡು ಕೇಳೋದಕ್ಕೆ ಮನಸ್ಸಿಲ್ಲ

ನಾನು ವಿಕಾಸ್ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವೆ. ಏನಾದರೂ ಸಾಧನೆ ಮಾಡಬೇಕು ಅಂತ 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದೆ. ಆದರೆ ಕೋಚಿಂಗ್ ಕ್ಲಾಸ್‌ಗೆ ಹೋಗಲು ನನ್ನ ಹತ್ತಿರ ದುಡ್ಡು ಇರಲಿಲ್ಲ. ಅಮ್ಮನ ಬಳಿ ದುಡ್ಡು ಕೇಳೋದಕ್ಕೂ ನನಗೆ ಮನಸ್ಸಿಲ್ಲ. ಹೀಗಾಗಿ ನನ್ನ ಕಾಲಿನ ಮೇಲೆ ನಿಂತು, ಕಷ್ಟಪಟ್ಟ ದುಡಿದು ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಿದ್ದೇನೆ. ಈಗಾಗಲೇ ನಾನು ಪೊಲೀಸ್ ಕಾನ್‌ಸ್ಟೆಬಲ್ ಆಗಲು 3 ಪರೀಕ್ಷೆ ಬರೆದಿದ್ದೇನೆ. ಈ ವರ್ಷದಲ್ಲಿ ನಾನು ಪೊಲೀಸ್‌ ಅಧಿಕಾರಿ ಆಗುವುದೇ ನನ್ನ ಸಂಕಲ್ಪ.

ಗೆಟ್ಟಿ ಚಿತ್ರ

ನಕಲಿ ಸ್ನೇಹಿತರಿಗೆ ಗುಡ್‌ ಬೈ

ಈ ವರ್ಷ ಕೆಲವು ನಕಲಿ ಸ್ನೇಹಿತರಿಗೆ ಗುಡ್‌ ಬೈ ಹೇಳುವುದೇ ನನ್ನ ನಿರ್ಧರವಾಗಿದೆ. 2025ರಲ್ಲಿ ಕೆಲವು ಸ್ನೇಹಿತರಿಂದ ನಾನು ಮೋಸ ಹೋಗಿದ್ದೇನೆ. ಆದರೆ ಈ ವರ್ಷ ನಾನು ಎಲ್ಲಾ ನಕಲಿ ಸ್ನೇಹಿತರನ್ನು ದೂರ ಇಡಲು ಇಷ್ಟಪಡ್ತೇನೆ. ಏಕೆಂದರೆ ‘ನೂರು ಬಂಗಾರದ ಕಡಗಗಳಿಗಿಂತ, ಒಂದು ಗೆಳೆಯನ ಕೈ ಲೇಸು’ ಎಂಬ ಗಾದೆ ಮಾತನ್ನು ನಾನು ಬಲವಾಗಿ ನಂಬುತ್ತೇನೆ ಎಂದು ಹೆಸರು ಹೇಳಲು ಇಚ್ಚಿಸದ ಯುವತಿ ಪ್ರತಿಕ್ರಿಯೆ ನೀಡಿದರು.

ಗೆಟ್ಟಿ ಚಿತ್ರ

ದೇಶ ಸುತ್ತಬೇಕು.. ಮಜಾ ಮಾಡಬೇಕು

ಪ್ರತಿ ಸಲ ಅಂದುಕೊಳ್ಳುತ್ತೇನೆ, ಈ ವರ್ಷ ಎಲ್ಲಾದ್ರೂ ಹೋಗಬೇಕು, ಮಜಾ ಮಾಡಬೇಕು ಅಂತ. ಆದರೆ ಅದು ಯಾವುದು 2025ರಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ 2026 ಬಂದೇ ಬಿಟ್ಟಿದೆ. ಈ ವರ್ಷ ನಾನು ತಿಂಗಳಿಗೆ ಒಮ್ಮೆಯಾದ್ರೂ ಪ್ರವಾಸ ಮಾಡಬೇಕು. ಪ್ರತಿಯೊಂದು ಸ್ಥಳದ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ನನ್ನ ಸಂಕಲ್ಪ ಎಂದು ಇನ್ನೋರ್ವ ಯುವತಿ ತಿಳಿಸಿದರು.

ಅಪ್ಪ, ಅಮ್ಮನ ಕಷ್ಟಕ್ಕೆ ಹೆಗಲು ಕೊಡುವುದು..

ನನ್ನ ಹೆಸರು ಸುಶ್ಮಿತಾ. ಪ್ರತಿ ವರ್ಷದ ಹೊಸತರಲ್ಲಿ ನಾನು ಮನೆಯಲ್ಲಿ ಇರುತ್ತಿರಲಿಲ್ಲ. ಆದರೆ 2026ನ್ನು ಅಮ್ಮ ಹಾಗೂ ನನ್ನ ತಮ್ಮನ ಜೊತೆಗೆ ಆರಂಭಿಸುವುದಕ್ಕೆ ಬಹಳ ಉತ್ಸುಕಳಾಗಿದ್ದೇನೆ. ನನ್ನ ತಮ್ಮ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅಪ್ಪ, ಅಮ್ಮ ಕೂಲಿ ಕೆಲಸ ಮಾಡುತ್ತಿದ್ದಾರೆ. ನಾನು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿ ಮನೆಗೆ ಸಹಾಯ ಮಾಡುತ್ತಿದ್ದೇನೆ. ಕೇವಲ ಈ ವರ್ಷವಲ್ಲದೇ ನನ್ನ ಉಸಿರು ಇರುವವರೆಗೂ ನಾನು ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವುದೇ ಸಂಕಲ್ಪ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.