ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 24ರಂದು 'ರಾಷ್ಟ್ರೀಯ ಗ್ರಾಹಕ ಹಕ್ಕು'ಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಗ್ರಾಹಕರು ಹೊಂದಿರುವ ಹಕ್ಕುಗಳಾವುವು, ವಂಚನೆಗೊಳಗಾದರೆ ಎಲ್ಲಿ ದೂರು ನೀಡಬಹುದು? ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ..
1986ರ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಡಿಸೆಂಬರ್ 24ರಂದು ರಾಷ್ಟ್ರಪತಿ ಅನುಮೋದನೆ ನೀಡಿದರು. ಈ ಕಾಯ್ದೆಯನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.
ಉತ್ಪಾದಕರು ಅಥವಾ ಮಾರಾಟಗಾರರಿಂದ ಆಗುವ ಮೋಸ, ವಂಚನೆ, ಶೋಷಣೆಗಳಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಈ ಕಾಯಿದೆಯನ್ನು ಜಾರಿಗೆ ತರಲಾಗಿದೆ.
ಮಹತ್ವವೇನು?
ರಾಷ್ಟ್ರೀಯ ಗ್ರಾಹಕ ದಿನದ ಪ್ರಾಥಮಿಕ ಉದ್ದೇಶ, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು.
ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟವನ್ನು ಹೇಗೆ ನಿರ್ಣಯಿಸುವುದು,
ವಂಚನೆ ಮತ್ತು ಶೋಷಣೆಯನ್ನು ತಪ್ಪಿಸುವುದು
ಕಾನೂನು ನೆರವು ಪಡೆಯುವುದು ಹೇಗೆ ಎಂಬುದರ ಕುರಿತು ಗ್ರಾಹಕರಿಗೆ ಶಿಕ್ಷಣ ನೀಡುವುದು
ಗ್ರಾಹಕ ವೇದಿಕೆಗಳು, ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಹಲವಾರು ಜಾಗೃತಿ ಅಭಿಯಾನಗಳು, ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತವೆ.
ದೋಷಯುಕ್ತ ಉತ್ಪನ್ನಗಳ ಬಗ್ಗೆ ವಂಚನೆ ಅಥವಾ ಮೋಸಕೊಳ್ಳಗಾದ ಗ್ರಾಹಕರು, ದೂರು ನೀಡಲು ಎಲ್ಲಿಗೆ ಹೋಗಬಹುದು, ಹೇಗೆ ದೂರು ಸಲ್ಲಿಸಬಹುದು?ಇಲ್ಲಿದೆ ಮಾಹಿತಿ.
ಮೊದಲು ವಸ್ತುವನ್ನು ಖರೀದಿಸಿದ ಅಂಗಡಿಯನ್ನು ಸಂಪರ್ಕಿಸಿ
ನೀವು ವಸ್ತುವನ್ನು ಖರೀದಿಸಿದ ಅಂಗಡಿಯನ್ನು ಮೊದಲು ಸಂಪರ್ಕಿಸಿ. ಬಿಲ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಮತ್ತು ಅಂಗಡಿಯವರಿಗೆ ವಸ್ತುವಿನಲ್ಲಿ ಏನು ದೋಷವಿದೆ ಎಂದು ತಿಳಿಸಬಹುದು. ಅಥವಾ ವಸ್ತು ಅಥವಾ ಉತ್ಪನ್ನವನ್ನು ಬದಲಿಸಿಕೊಡುವಂತೆ ಅಂಗಡಿಯ ಇಮೇಲ್ ವಿಳಾಸಕ್ಕೆ ಮೇಲ್ ಮಾಡಬಹುದು,
ಅಂಗಡಿ ಅಥವಾ ಕಂಪನಿಯ ಗ್ರಾಹಕ ಸೇವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕವೂ ನೀವು ದೂರು ಸಲ್ಲಿಸಬಹುದು. ಗ್ರಾಹಕ ಸೇವಾ ಅಧಿಕಾರಿಯೊಂದಿಗೆ ಮಾತನಾಡಿ ಮತ್ತು ಸ್ಕ್ರೀನ್‌ಶಾಟ್‌ಗಳು ಮತ್ತು ಫೋಟೋಗಳನ್ನು ಒಳಗೊಂಡಂತೆ ನಿಮ್ಮ ದೂರನ್ನು ದಾಖಲಿಸಬಹುದು.
ಸಹಾಯವಾಣಿಗೆ ಕರೆ ಮಾಡಿ
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಕರೆ ಮಾಡುವ ಮೂಲಕ ನೀವು ದೂರನ್ನು ದಾಖಲಿಸಬಹುದು.
ಇ-ದೂರು ಸಲ್ಲಿಸಿ
ನೀವು ಆನ್‌ಲೈನ್ ಮೂಲಕವೂ ದೂರನ್ನು ಸಲ್ಲಿಸಬಹುದು. (ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ (NCDPR) ವೆಬ್‌ಸೈಟ್‌ನಲ್ಲಿ.)
ಗ್ರಾಹಕ ಆಯೋಗದಿಂದ ಸಹಾಯ ಪಡೆಯಬಹುದು
ಸಣ್ಣಪುಟ್ಟ ವಿವಾದಗಳಿಗೆ ನೀವು ಜಿಲ್ಲಾ ಗ್ರಾಹಕ ವೇದಿಕೆ ಅಥವಾ ಗ್ರಾಹಕ ಆಯೋಗವನ್ನು ಸಂಪರ್ಕಿಸಬಹುದು. ರಾಜ್ಯ ಆಯೋಗದ ನಿರ್ಧಾರವನ್ನು ನೀವು ಒಪ್ಪದಿದ್ದರೆ, ನೀವು ರಾಷ್ಟ್ರೀಯ ಗ್ರಾಹಕ ಆಯೋಗವನ್ನು ಸಂಪರ್ಕಿಸಬಹುದು. ಅಲ್ಲದೇ ನೀವು ಯಾವುದೇ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಬಹುದು.
ನೀವು ಖರೀದಿಸಿದ ವಸ್ತುವಿಗೆ ಸಂಬಂಧಿಸಿದ ಬಿಲ್‌ಗಳು, ಫೋಟೋಗಳು ಇತ್ಯಾದಿ ಸೇರಿದಂತೆ ಎಲ್ಲಾ ಸಂಬಂಧಿತ ದಾಖಲೆಗಳನ್ನು ಹೊಂದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ವಸ್ತುವು ದುಬಾರಿಯಾಗಿದ್ದು ದೋಷಪೂರಿತವಾಗಿದ್ದರೆ, ಮಾರಾಟಗಾರರಿಗೆ ಕರೆ ಮಾಡುವ ಬದಲು ಅವರೊಂದಿಗೆ ಚಾಟ್ ಮಾಡುವುದು ಅಥವಾ ಇಮೇಲ್ ಸಂವಹನ ನಡೆಸುವುದು ಸೂಕ್ತ.
ಗ್ರಾಹಕರ ಹಕ್ಕುಗಳು ಯಾವುವು: ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ಭಾರತೀಯನು ಈ ಕೆಳಗಿನ 5 ಹಕ್ಕುಗಳನ್ನು ಹೊಂದಿದ್ದಾರೆ.
ಸುರಕ್ಷತೆ ಹಕ್ಕು
ಮಾಹಿತಿ ಪಡೆಯುವ ಹಕ್ಕು
ಆಯ್ಕೆ ಮಾಡುವ ಹಕ್ಕು
ವಿಚಾರಣೆಯ ಹಕ್ಕು
ದೂರು ಮತ್ತು ಪರಿಹಾರದ ಹಕ್ಕು
ಸುರಕ್ಷತೆ ಹಕ್ಕು: ಗ್ರಾಹಕರು ಮಾರುಕಟ್ಟೆಯಿಂದ ಗುಣಮಟ್ಟದ ವಸ್ತು ಅಥವಾ ಸೇವೆಗಳನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ.
ಮಾಹಿತಿ ಪೆಯುವ ಹಕ್ಕು: ಗ್ರಾಹಕರು ತಾವು ಪಡೆಯುತ್ತಿರುವ ಉತ್ಪನ್ನದ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಉದಾ.. ಉತ್ಪನ್ನದ ಬೆಲೆ, ಗುಣಮಟ್ಟ, ಪ್ರಮಾಣ, ಉತ್ಪಾದನಾ ದಿನಾಂಕ, ಮುಕ್ತಾಯ ದಿನಾಂಕ ಮತ್ತು ಅದನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಈ ಬಗ್ಗೆ ಅಂಗಡಿಯವರು ತಪ್ಪು ಮಾಹಿತಿ ನೀಡಿದರೆ ಅವರು ದೂರು ದಾಖಲಿಸಬಹುದು.
ಆಯ್ಕೆ ಮಾಡುವ ಹಕ್ಕು: ಯಾವುದೇ ಗ್ರಾಹಕರು ಯಾವುದೇ ಅಂಗಡಿ, ಯಾವುದೇ ಮಾಲ್‌ಗೆ ಹೋಗಿ ತಾವು ಬಯಸುವ ಯಾವುದೇ ಉತ್ಪನ್ನವನ್ನು ಖರೀದಿಸಬಹುದು. ಅಂಗಡಿಯವರು ಅಥವಾ ಮಾರಾಟಗಾರರು ನಿರ್ದಿಷ್ಟ ವಸ್ತುವನ್ನು ಖರೀದಿಸಲು ಅವರ ಮೇಲೆ ಒತ್ತಡ ಹೇರುವಂತಿಲ್ಲ. ಗ್ರಾಹಕರು ಯಾವ ವಸ್ತುವನ್ನಾದರೂ ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ.
ವಿಚಾರಣೆಯ ಹಕ್ಕು: ವಂಚನೆಗೊಳಗಾದ ಸಂದರ್ಭದಲ್ಲಿ ಗ್ರಾಹಕರು ಮೇಲ್ಮನವಿ ಸಲ್ಲಿಸುವ ಅಥವಾ ವಿಚಾರಣೆಯನ್ನು ಕೋರುವ ಹಕ್ಕನ್ನು ಹೊಂದಿರುತ್ತಾರೆ. ಅವರು ಸೂಕ್ತ ವೇದಿಕೆಯ ಮುಂದೆ ತಮ್ಮ ಪ್ರಕರಣವನ್ನು ಮಂಡಿಸಬಹುದು ಮತ್ತು ಕಾನೂನು ಕ್ರಮ ಕೈಗೊಳ್ಳಬಹುದು. ಈ ಉದ್ದೇಶಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಹಕ ವೇದಿಕೆಗಳು ಅಸ್ತಿತ್ವದಲ್ಲಿವೆ.
ಪರಿಹಾರದ ಹಕ್ಕು: ಸರಕು ಮತ್ತು ಸೇವೆಗಳು ನಿಗದಿತ ಬೆಲೆಯಲ್ಲಿ ಲಭ್ಯವಿಲ್ಲದಿದ್ದರೆ, ವಂಚನೆಗಳಾದರೆ ಗ್ರಾಹಕರು ಪರಿಹಾರವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ನಷ್ಟ ಮತ್ತು ಮೋಸವಾಗಿದ್ದಲ್ಲಿ , ಉತ್ಪನ್ನ ಮತ್ತು ಸೇವೆಗಳ ಗುಣಮಟ್ಟದಲ್ಲಿ ತೃಪ್ತಿ ಇಲ್ಲದಿದ್ದರೆ ದೂರು ನೀಡಬಹುದು. ಅಲ್ಲದೇ ಒಂದು ಉತ್ಪನ್ನ ಅಥವಾ ಸೇವೆಯಿಂದಾಗಿ ಗ್ರಾಹಕರು ನಷ್ಟ ಅನುಭವಿಸಿದ್ದರೆ, ಅವರು ಮರುಪಾವತಿಗೆ ಮಾತ್ರವಲ್ಲದೆ ಪರಿಹಾರಕ್ಕೂ ಅರ್ಹರು.
ಜಾಗೃತಿ ಕೊರತೆ
ಗ್ರಾಹಕರ ಹಕ್ಕುಗಳು ಮತ್ತು ಪರಿಹಾರ ಬಗ್ಗೆ ಗ್ರಾಹಕರ ಅರಿವು ಕಡಿಮೆ.
ಪ್ರಕರಣ ವಿಲೇವಾರಿಯಲ್ಲಿ ವಿಳಂಬ ಧೋರಣೆ
ಡಿಜಿಟಲ್ ಮಾರುಕಟ್ಟೆ ಸಮಸ್ಯೆಗಳು: ಇ-ಕಾಮರ್ಸ್, ಡೇಟಾ ಗೋಪ್ಯತೆ ಮತ್ತು ಆನ್‌ಲೈನ್ ವಂಚನೆಗೆ ಸಂಬಂಧಿಸಿದ ಸವಾಲುಗಳು.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪೋರ್ಟಲ್ https://consumerhelpline.gov.in/public/ಅಲ್ಲಿ ದೂರನ್ನು ನೋಂದಾಯಿಸಬಹುದು.
ವ್ಯಾಜ್ಯ ಪರಿಹಾರ ಹೇಗೆ?: ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಅನ್ವಯ ವಿವಾದಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಮೂರು ಹಂತದ ವ್ಯವಸ್ಥೆಯಿದೆ
₹50 ಲಕ್ಷದವರೆಗಿನ ಕ್ಲೇಮುಗಳಿಗೆ– ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ
₹50 ಲಕ್ಷದಿಂದ ₹2 ಕೋಟಿವರೆಗಿನ ಕ್ಲೇಮುಗಳಿಗೆ– – ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ.
₹2 ಕೋಟಿಗಿಂತ ಹೆಚ್ಚಿನ ಕ್ಲೇಮುಗಳಿಗೆ– ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (NCDRC)
ದೋಷ ಅಥವಾ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಬಹುದು
ಉತ್ಪನ್ನಗಳನ್ನು ಬದಲಾಯಿಸಿಕೊಡುವಂತೆ ಅಥವಾ, ಸಂಪೂರ್ಣ ಹಣವನ್ನು ಹಿಂತಿರುಗಿಸುವಂತೆ ಸೂಚಿಸಬಹುದು.
ಸೂಕ್ತ ಪರಿಹಾರ ನೀಡುವಂತೆ ಸೂಚಿಸಬಹುದು.
ಉತ್ಪನ್ನ ಮಾರಾಟವನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಆದೇಶಿಸಬಹುದು
ಯಾವುದೇ ಕೆಟ್ಟ ಅಥವಾ ಅನ್ಯಾಯದ ವ್ಯಾಪಾರ ಪದ್ಧತಿಯನ್ನು ನಿಲ್ಲಿಸುವಂತೆ ಆದೇಶ ಹೊರಡಿಸಬಹುದು.
ಭಾರತದಲ್ಲಿ ಗ್ರಾಹಕ ಹಕ್ಕುಗಳ ರಕ್ಷಣೆ ಮುಖ್ಯ ಯಾಕೆ?
ಗುಣಮಟ್ಟ, ಸುರಕ್ಷತೆ ಮತ್ತು ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು, ನಾಗರಿಕರು ವಂಚನೆಗೆ ಒಳಗಾಗದಂತೆ (ದಾರಿತಪ್ಪಿಸುವ ಜಾಹೀರಾತುಗಳು, ಕಲಬೆರಕೆಯಂತಹ) ತಪ್ಪಿಸಲು ಸಹಾಯಕ.
ಗ್ರಾಹಕರ ಹಿತಾಸಕ್ತಿ ಕಾಪಾಡಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವನ್ನು (CCPA) 2020ರ ಜುಲೈನಲ್ಲಿ ಸ್ಥಾಪಿಸಲಾಯಿತು. ಇದರ ಪ್ರಮುಖ ಕಾರ್ಯಗಳು,
ಕೆಟ್ಟ ವ್ಯಾಪಾರ ಪದ್ಧತಿಗಳನ್ನು ತಡೆಗಟ್ಟುವುದು
ದಾರಿತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸುವುದು
ಅಸುರಕ್ಷಿತ ಸರಕುಗಳನ್ನು ಹಿಂಪಡೆಯಲು ಆದೇಶಿಸುವುದು
ಅಗತ್ಯವಿರುವಲ್ಲಿ ದಂಡ ವಿಧಿಸುವುದು ಮತ್ತು ಕಾನೂನು ಕ್ರಮ ಜರುಗಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.