ಕಾಲ್ಪನಿಕ ಚಿತ್ರ
ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತ ಮಾಡಿತು. ಇದರ ಪರಿಣಾಮ ದೇಶದ ವಿವಿಧ ಬ್ಯಾಂಕುಗಳ ಉಳಿತಾಯ ಯೋಜನೆಗಳು ನೀಡುವ ಬಡ್ಡಿ ದರದಲ್ಲಿ ವ್ಯತ್ಯಾಸವಾಗಲಿದೆ. ಅಂಚೆ ಕಚೇರಿಯ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸೇರಿದಂತೆ ಹಲವು ಯೋಜನೆಗಳ ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC). ಈ ಯೋಜನೆಯು ಸರ್ಕಾರದಿಂದ ಮಾನ್ಯತೆ ಪಡೆದಿರುವ ಯೋಜನೆಯಾಗಿದೆ. ಅಂಚೆ ಇಲಾಖೆಯಲ್ಲಿ ಈ ಸೇವೆ ಲಭ್ಯವಿದ್ದು ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡ ಬಯಸುವವರು ಇಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ಅವಧಿ 5 ವರ್ಷ. ಇದರಲ್ಲಿ ಕನಿಷ್ಠ ₹1000 ದಿಂದ ಹೂಡಿಕೆಯನ್ನು ಆರಂಭಿಸಬಹುದು. ಗರಿಷ್ಠ ಹೂಡಿಕೆಗೆ ಮಿತಿಯಿಲ್ಲ. ಹೂಡಿಕೆ ಮಾಡಿದ ₹1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ.
ಈ ಯೋಜನೆಯ ಮೂಲಕ ಹೂಡಿಕೆ ಮಾಡುವವರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದೊಂದು ಸುರಕ್ಷಿತವಾದ ಯೋಜನೆಯಾಗಿರುವುದರಿಂದ ನಿಶ್ಚಿತವಾಗಿ ಹಣ ದೊರೆಯುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)
ಈ ಯೋಜನೆಯಲ್ಲಿ ಸಣ್ಣ ಮೊತ್ತದಿಂದ ದೊಡ್ಡ ಮೊತ್ತದ ವರೆಗೂ ಹೂಡಿಕೆ ಮಾಡಬಹುದು. ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಕನಿಷ್ಠ ಹಣವನ್ನು ಹೂಡಿಕೆ ಮಾಡಿ ಮಾಸಿಕವಾಗಿ ಮೂರಂಕಿಯ ಮೊತ್ತವನ್ನು (₹100) ಠೇವಣಿ ಮಾಡುತ್ತಾ ಹೋಗಬಹುದು. ಅಂಚೆ ಇಲಾಖೆ ಹೇಳಿರುವಂತೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಠೇವಣಿಗೆ ವಾರ್ಷಿಕ ಶೇ 7.7 ರಷ್ಟು ಬಡ್ಡಿ ದೊರೆಯುತ್ತದೆ.
ಹೂಡಿಕೆಗೆ ಅರ್ಹತೆಗಳೇನು ?
ಭಾರತದ ಪ್ರಜೆಯಾಗಿರಬೇಕು.
18 ವರ್ಷದ ಒಳಗಿನವರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಆದರೆ ಆ ಖಾತೆಯನ್ನು ಪೋಷಕರು ನಿರ್ವಹಣೆ ಮಾಡಬೇಕು.
ಅಸ್ವಸ್ಥ ವ್ಯಕ್ತಿಯ ಪರವಾಗಿ ಪೋಷಕರು ಖಾತೆಯನ್ನು ತೆರೆದು ನಿರ್ವಹಿಸಬಹುದು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದು.
ಎಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು?
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಠೇವಣಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅನ್ವಯ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಖಾತೆಯನ್ನು ತೆರೆಯಲು ಕನಿಷ್ಠ ₹1000 ಠೇವಣಿ ಮಾಡಬೇಕು.
ಅವಧಿಗೆ ಮುನ್ನ ಖಾತೆಯನ್ನು ಮುಚ್ಚಬಹುದೇ?
ಇಲಾಖೆಯ ನಿಯಮದ ಪ್ರಕಾರ ಕೆಲವು ಪರಿಸ್ಥಿತಿಗಳನ್ನು ಹೊರತು ಪಡಿಸಿ ಅವಧಿಗೂ ಮುನ್ನ ಖಾತೆಯನ್ನು ಮುಚ್ಚಲು ಅವಕಾಶವಿಲ್ಲ. ಠೇವಣಿ ಇಟ್ಟ ದಿನಾಂಕದಿಂದ ಒಂದು ವರ್ಷ ಮುಗಿಯುವ ಮೊದಲು ಖಾತೆಯನ್ನು ಮುಚ್ಚಿದರೆ, ಅಸಲು ಮೊತ್ತವನ್ನು ಮಾತ್ರ ಪಾವತಿಸಲಾಗುತ್ತದೆ. 1 ವರ್ಷದಿಂದ 3 ವರ್ಷದ ನಡುವೆ ಖಾತೆಯನ್ನು ಮುಚ್ಚಿದರೆ ಅನ್ವಯವಾಗುವ ಬಡ್ಡಿ ಹಾಗೂ ಅಸಲು ಮೊತ್ತವನ್ನು ಪಾವತಿಸಲಾಗುತ್ತದೆ.
ಖಾತೆಯನ್ನು ವರ್ಗಾವಣೆ ಮಾಡಬಹುದೇ?
ಖಾತೆಯನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಬಹುದು. ಆದರೆ ಮೇಲಿನ ಅರ್ಹತೆಗೆ ವ್ಯಕ್ತಿಯು ಬದ್ಧವಾಗಿರಬೇಕು. ಖಾತೆಯಲ್ಲಿರುವವರು ಮೃತಪಟ್ಟರೆ ಠೇವಣಿದಾರರು ನಾಮನಿರ್ದೇಶನ ಮಾಡಿದವರಿಗೆ ಠೇವಣಿ ಸಂದಾಯವಾಗುತ್ತದೆ. ಜಂಟಿ ಖಾತೆಯಲ್ಲಿರುವವರು ಮೃತಪಟ್ಟರೆ ಖಾತೆಯಲ್ಲಿ ಉಳಿದಿರುವ ವ್ಯಕ್ತಿಗೆ ಠೇವಣಿಯನ್ನು ವರ್ಗಾಯಿಸಲಾಗುತ್ತದೆ.
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆಯ ಅಧಿಕೃತ ಅಂತರ್ಜಾಲ ತಾಣ ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂರ್ಪಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.