ADVERTISEMENT

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಶೇ 7.1 ರಷ್ಟು ಬಡ್ಡಿ‌ದರ ಪಡೆಯುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2025, 5:23 IST
Last Updated 16 ಸೆಪ್ಟೆಂಬರ್ 2025, 5:23 IST
   
ಭಾರತೀಯ ಅಂಚೆಯ ವಿವಿಧ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) ಒಂದಾಗಿದೆ. ಈ ಯೋಜನೆಯು ಹೆಚ್ಚು ಜನರಿಗೆ ಉಪಯೋಗವಾಗುವುದರೊಂದಿಗೆ ಹಣದ ಸುರಕ್ಷತೆ ಹಾಗೂ ಉತ್ತಮ ಬಡ್ಡಿಯ ದರವು ದೊರೆಯುತ್ತದೆ. ದೀರ್ಘಾವಧಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ಈ ಯೋಜನೆಯನ್ನು ಆಯ್ಕೆ ಮಾಡಬಹುದು.

ಈ ಯೋಜನೆಯು ಸರ್ಕಾರದಿಂದ ಮಾನ್ಯತೆ ಪಡೆದಿದೆ. ಇದರಲ್ಲಿ ಹೂಡಿಕೆ ಮಾಡಿದ ಠೇವಣಿಗೆ ತೆರಿಗೆ ವಿನಾಯಿತಿ ಇರಲಿದೆ. ಈ ಯೋಜನೆಯ ಅವಧಿ 15 ವರ್ಷಗಳಾಗಿದೆ. ಹೂಡಿಕೆ ಮಾಡಿದ ಠೇವಣಿಯಿಂದ ಪ್ರತಿ ವರ್ಷ ಶೇ 7.1ರಷ್ಟು ಬಡ್ಡಿಯನ್ನು ಪಡೆಯಬಹುದು. ಇದರಲ್ಲಿ ₹500 ದಿಂದ ₹1.5 ಲಕ್ಷದ ವರೆಗೂ ಹೂಡಿಕೆಯನ್ನು ಮಾಡಬಹುದು. ಹೂಡಿಕೆಯನ್ನು 12 ಕಂತುಗಳಲ್ಲಿ ಅಥವಾ ವರ್ಷಕ್ಕೆ ಒಂದು ಕಂತಿನಲ್ಲಿ ಠೇವಣಿಯನ್ನು ಇಡುವ ಅವಕಾಶವಿದೆ.

ಸಾರ್ವಜನಿಕ ಭವಿಷ್ಯ ನಿಧಿಯ (PPF) ಅವಧಿ

ಈ ಯೋಜನೆಯು 15 ವರ್ಷದ ಅವಧಿಯನ್ನು ಹೊಂದಿದೆ. ಈ ಅವಧಿಯು ಪೂರ್ಣಗೊಂಡ ನಂತರ 5 ವರ್ಷಗಳ ವರೆಗೆ ವಿಸ್ತರಿಸಲು ಅವಕಾಶವಿದೆ.

ಅಗತ್ಯ ಅರ್ಹತೆಗಳೇನು?
  • ಭಾರತದ ಪ್ರಜೆಯಾಗಿರಬೇಕು.

  • 18 ವರ್ಷದ ಒಳಗಿನವರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಆದರೆ ಪೋಷಕರು ನಿರ್ವಹಣೆ ಮಾಡಬೇಕು.

  • ಅನಿವಾಸಿ ಭಾರತೀಯರು ಖಾತೆ ತೆರೆಯುವಂತಿಲ್ಲ.

ದೊರೆಯಲಿರುವ ಬಡ್ಡಿಯ ದರ ಎಷ್ಟು?

ಅಂಚೆ ಇಲಾಖೆಯು ಹೇಳಿರುವಂತೆ ಬಡ್ಡಿಯ ದರವು ವರ್ಷಕ್ಕೆ ಶೇ 7.1% ರಷ್ಟು ದೊರೆಯಲಿದೆ. ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ನೀಡಲಾಗುವ ಬಡ್ಡಿಯ ದರವನ್ನು ಸರ್ಕಾರವು 3 ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುತ್ತದೆ.

ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವೇ?
  • ಹೂಡಿಕೆ ಮಾಡಿದ 5ನೇ ವರ್ಷದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ಠೇವಣಿಯನ್ನು ಹಿಂಪಡೆಯಬಹುದು.

  • 4ನೇ ವರ್ಷದ ಕೊನೆಯಲ್ಲಿ ಅಥವಾ 3ನೇ ವರ್ಷದ ಕೊನೆಯಲ್ಲಿ, ಠೇವಣಿಯ ಶೇ 50% ವರೆಗೆ ಹಿಂಪಡೆಯಬಹುದು.

  • ಅವಧಿಗೂ ಮುನ್ನ ಖಾತೆಯನ್ನು ಮುಚ್ಚಿದರೆ ಶೇ 1% ರಷ್ಟು ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ.

ಹೂಡಿಕೆದಾರ ಮೃತಪಟ್ಟರೇ?

ಹೂಡಿಕೆ ಮಾಡುವ ವೇಳೆ ಯಾರ ಹೆಸರನ್ನು ನಾಮನಿರ್ದೇಶನ ಮಾಡಿರುತ್ತಾರೋ ಅವರಿಗೆ ಹಣ ದೊರೆಯಲಿದೆ. ಹೂಡಿಕೆದಾರ ಮೃತಪಟ್ಟರೆ ಖಾತೆಯನ್ನು ಮುಚ್ಚಲಾಗುತ್ತದೆ. ಸಾವಿನ ಕಾರಣದಿಂದಾಗಿ ಪಿಪಿಎಫ್ ಖಾತೆಯನ್ನು ಮುಚ್ಚುವ ಸಮಯದಲ್ಲಿ, ಖಾತೆಯನ್ನು ಮುಚ್ಚಿದ ಹಿಂದಿನ ತಿಂಗಳ ಅಂತ್ಯದವರೆಗೆ ಬಡ್ಡಿದರವನ್ನು ಪಾವತಿಸಲಾಗುತ್ತದೆ.

ಹೂಡಿಕೆಯ ಮೇಲೆ ಸಾಲ ಪಡೆಯಬಹುದೇ?

ಹೂಡಿಕೆ ಮಾಡಿದ 1 ವರ್ಷದಿಂದ 5 ವರ್ಷದ ನಡುವೆ ನಿಮ್ಮ ಠೇವಣಿಯ ಮೇಲೆ ಶೇ 25% ರಷ್ಟು ಸಾಲವನ್ನು ಪಡೆಯಬಹುದು. ಸಾಲ ಪಡೆದ 36 ತಿಂಗಳೊಳಗೆ ಮರುಪಾವತಿ ಮಾಡಿದರೆ ವಾರ್ಷಿಕ ಶೇ 1% ಬಡ್ಡಿ ಅನ್ವಯವಾಗಲಿದೆ. 36 ತಿಂಗಳ ನಂತರ ಪಾವತಿ ಮಾಡಿದರೆ ವಾರ್ಷಿಕ ಶೇ 6% ರ ಬಡ್ಡಿದರ ಅನ್ವಯವಾಗುತ್ತದೆ. ಸಾಲವನ್ನು ಮರುಪಾವತಿ ಮಾಡಿದ ನಂತರ ಪುನಃ ಸಾಲ ಪಡೆಯಬಹುದು. ಒಂದು ಹಣಕಾಸಿನ ವರ್ಷದಲ್ಲಿ ಒಂದು ಸಾಲ ಮಾತ್ರ ಪಡೆಯಲು ಅವಕಾಶವಿದೆ.

ಈ ಯೋಜನೆಯ ಪ್ರಯೋಜನವೇನು?
  • ಹೂಡಿಕೆ ಮಾಡಿದ ಹಣವು ಹೆಚ್ಚು ಸುರಕ್ಷಿತವಾಗಿರುತ್ತದೆ.

  • ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ ದೊರೆಯುತ್ತದೆ.

  • ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಠೇವಣಿಗೆ ಸರ್ಕಾರದ ತೆರಿಗೆ ನೀತಿ ಅನ್ವಯವಾಗುವುದಿಲ್ಲ. ಆದ್ದರಿಂದ ಬೇರೆಲ್ಲಾ ಯೋಜನೆಗಳಿಗಿಂತ ಈ ಯೋಜನೆಯು ಹೆಚ್ಚು ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.