ADVERTISEMENT

ಮಹಿಳೆಯರ ಸ್ವ ಉದ್ಯಮಕ್ಕೆ ‘ಸ್ತ್ರೀ ಶಕ್ತಿ ಪ್ಯಾಕೇಜ್’: ಸಹಾಯಧನ ಪಡೆಯುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2026, 6:48 IST
Last Updated 4 ಫೆಬ್ರುವರಿ 2026, 6:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ ಕೃಪೆ; ಎಐ

ಮಹಿಳಾ ಸಬಲೀಕರಣಕ್ಕಾಗಿ ದೇಶದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಮಹಿಳೆಯರಿಗಾಗಿಯೇ ಪಂಚ ಯೋಜನಗಳು ಜಾರಿಯಲ್ಲಿವೆ. ಇದೀಗ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಆ ಯೋಜನೆಯೇ ‘ಸ್ತ್ರೀ ಶಕ್ತಿ ಪ್ಯಾಕೇಜ್’. 

ADVERTISEMENT

ಸ್ತ್ರೀ ಶಕ್ತಿ ಪ್ಯಾಕೇಜ್‌ ಎಂದರೇನು? 

ಯೋಜನೆಯ ಮುಖ್ಯ ಉದ್ದೇಶ, ಮಹಿಳೆಯರನ್ನು ಸ್ವ–ಉದ್ಯೋಗಕ್ಕೆ ಪ್ರೇರೆಪಿಸುವುದಾಗಿದೆ. ಮನೆಯಲ್ಲಿಯೇ ವಿವಿಧ ಗೃಹ ಉದ್ಯಮಗಳನ್ನು ಆರಂಭ ಮಾಡಲು ಎಸ್‌ಬಿಐ ಸೇರಿದಂತೆ ವಿವಿಧ ರಾಷ್ಟೀಕೃತ ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ ₹25 ಲಕ್ಷದ ವರೆಗೂ ಸಾಲ ಸೌಲಭ್ಯ ಸಿಗಲಿದೆ. 

ಯೋಜನೆಯಲ್ಲಿ ಲಭ್ಯವಿರುವ ಸೌಲಭ್ಯಗಳೇನು?

  • ವೃತ್ತಿಪರ ಅಥವಾ ಗೃಹ ಉದ್ಯಮಗಳಿಗೆ ₹25 ಲಕ್ಷದಿಂದ ₹50 ಲಕ್ಷದವರೆಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ.

  • ಸಾಲದ ಮೊತ್ತವು ₹2 ಲಕ್ಷಕ್ಕಿಂತ ಹೆಚ್ಚಿದರೆ ಶೇ 0.5 ರಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ.

  • ಗರಿಷ್ಟ ₹10 ಲಕ್ಷದವರೆಗಿನ ಸಾಲಕ್ಕೆ ಆಧಾರವಾಗಿ ಆಸ್ತಿ, ಮನೆ ಪತ್ರಗಳು ಅಥವಾ ಶೂರಿಟಿಯ ಅಗತ್ಯವಿಲ್ಲ.  ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್‌ನ ಅಡಿ ಸಾಲ ಸಿಗಲಿದೆ.

  • ಬೀದಿ ಬದಿ ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಕೃಷಿ, ವೈದ್ಯರು ಹಾಗೂ ಬ್ಯೂಟಿ ಪಾರ್ಲರ್  ಸೇರಿದಂತೆ ವಿವಿಧ ಸಣ್ಣ ಉದ್ಯಮ ಆರಂಭಿಸುವವರಿಗೆ ಯೋಜನೆ ಮೀಸಲಾಗಿದೆ.

 ಸಾಲದ ಪ್ಯಾಕೇಜ್‌ಗಳು ಹೀಗಿವೆ...

  • ಚಿಲ್ಲರೆ ವ್ಯಾಪಾರ ಮಾಡುವ ಮಹಿಳೆಯರು ₹50 ಸಾವಿರದಿಂದ ₹2 ಲಕ್ಷದವರೆಗೆ ಸಾಲದ ಸಹಾಯ ಧನ ಪಡೆಯಬಹುದು.

  • ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ ಸೇರಿದಂತೆ ಇತರೆ ವೃತ್ತಿಪರ ಉದ್ಯಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳನ್ನು ಆರಂಭಿಸಲು ₹50 ಸಾವಿರದಿಂದ ₹25 ಲಕ್ಷದವರೆಗೆ ಸಾಲ ಸಿಗಲಿದೆ.

ಯಾವೆಲ್ಲಾ ಉದ್ಯಮಗಳಿಗೆ ಸಾಲ ಸೌಲಭ್ಯಗಳು ಲಭ್ಯ?

ಸಿದ್ಧ ಉಡುಪುಗಳ ತಯಾರಿಕೆ, ಬಟ್ಟೆ ವ್ಯಾಪಾರ, ಡೈರಿ ಉತ್ಪನ್ನಗಳ ಮಾರಾಟ, ಮೊಟ್ಟೆ ಮಾರಾಟ, ಬೀಜ, ಗೊಬ್ಬರ, ಕೃಷಿ ಉತ್ಪನ್ನಗಳ ಮಾರಾಟ, ಮನೆಯಲ್ಲಿಯೇ ತಯಾರಿಸುವ ದಿನಬಳಕೆ ವಸ್ತುಗಳು ಹಾಗೂ ಗುಡಿ ಕೈಗಾರಿಕೆಗೆ ಈ ಸೌಲಭ್ಯವನ್ನು ಪಡೆಯಬಹುದು.

ಪ್ರಮುಖ ದಾಖಲೆಗಳು

ಸಾಲ ಪಡೆಯಲು ಅರ್ಜಿ ಸಲ್ಲಿಕೆಗೆ ಬೇಕಾದ ಪ್ರಮುಖ ದಾಖಲೆಗಳೆಂದರೆ ಆಧಾರ್ ಕಾರ್ಡ್, ಪ್ಯಾನ್‌ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್‌ ಬಿಲ್‌, ಭಾವಚಿತ್ರ ಹಾಗೂ ಉದ್ದಿಮೆಯ ನೋಂದಣಿ ಪತ್ರ.

 ಅರ್ಜಿ ಸಲ್ಲಿಸುವುದು ಹೇಗೆ?

ಯೋಜನೆ ಪಡೆಯಲು ಬಯಸುವ ಮಹಿಳೆಯರು ನೇರವಾಗಿ ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು. ದಾಖಲೆಗಳ ಪರಿಶೀಲನೆ ಬಳಿಕ ಸಾಲ ಮಂಜೂರಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.