ಮಾನವಪ್ರೇಮವೇ ಪ್ರಮುಖವಾದದ್ದು ಎಂದು ಪ್ರತಿಪಾದಿಸಿದ್ದ ಸ್ವಾಮಿ ವಿವೇಕಾನಂದರು, ತಾವು ಸ್ಥಾಪಿಸಿದ ರಾಮಕೃಷ್ಣ ಮಹಾಸಂಘದ ಘೋಷವಾಕ್ಯವನ್ನೂ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ಎಂದಿರಿಸಿದ್ದರು. ಅಂದರೆ ಜಗತ್ತಿನ ಹಿತ ಸಾಧಿಸುವುದರೊಂದಿಗೇ ಮುಕ್ತಿಯನ್ನು ಕಾಣುವುದು ಎಂದಾಗಿತ್ತು.
ವಿವೇಕಾನಂದರು ಸಮಾಜದ ವೈವಿಧ್ಯಕ್ಕೆ ಬೆಲೆ ಕೊಟ್ಟವರು. ಅಂತೆಯೇ ಧಾರ್ಮಿಕ ಸಹಿಷ್ಣುತೆಯ ಪ್ರತಿಪಾದಕರು. 1893ರ ಸೆಪ್ಟೆಂಬರ್ 11ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ವಿವೇಕಾನಂದರು ನಮ್ಮ ದೇಶದ ಮತ್ತು ಧರ್ಮದ ಬಗ್ಗೆ ಹೇಳಿದ ಮಾತುಗಳು ಇಂದಿಗೂ ಅನುಸರಣೀಯ ಆದರ್ಶವನ್ನು ಒಳಗೊಂಡಿವೆ.
ವಿವೇಕಾನಂದರು ಸರ್ವಧರ್ಮ ಸಮ್ಮೇಳನದ ಕೊನೆಯ ದಿನ, 1893ರ ಸೆಪ್ಟೆಂಬರ್ 27ರಂದು ನೀಡಿದ ಉಪನ್ಯಾಸದ ಕೊನೆಯಲ್ಲಿ ಹೇಳಿದ್ದು: ‘ಸಂಘರ್ಷವಲ್ಲ, ಸೌಹಾರ್ದ; ವಿನಾಶವಲ್ಲ, ಸ್ವೀಕಾರ; ದ್ವೇಷವಲ್ಲ, ಸಾಮರಸ್ಯ ಮತ್ತು ಶಾಂತಿ’. ಎಲ್ಲ ಧರ್ಮಗಳಿಗೆ ವಿವೇಕಾನಂದರ ಈ ಆಶಯ ಅರ್ಥವಾಗಬೇಕು; ಎಲ್ಲ ಧರ್ಮಗಳಲ್ಲೂ ‘ವಿವೇಕಾನಂದರು’ ಇರಬೇಕು.
ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದರ ವಿವೇಕಾನಂದರ ಕೆಲವು ನುಡಿಗಳು ಇಲ್ಲಿವೆ.
ನಿಮ್ಮನ್ನು ನೀವು ದುರ್ಬಲ ಎಂದು ಪರಿಗಣಿಸುವುದೇ ದೊಡ್ಡ ಪಾಪ.
ಒಬ್ಬ ರಾಷ್ಟ್ರವು ಜನರ ಶಿಕ್ಷಣ ಮತ್ತು ಬುದ್ಧಿವಂತಿಕೆಯಿಂದ ಅಭಿವೃದ್ಧಿ ಹೊಂದುತ್ತದೆ.
ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ.
ಯಾರಿಗೆ ತನ್ನ ಮೇಲೆಯೇ ನಂಬಿಕೆ ಇರುವುದಿಲ್ಲವೋ ಅವನೇ ನಾಸ್ತಿಕ
ಅನುಭವವೇ ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ ಇರಲಿ.
ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ನೀವು ಮಾತನಾಡಿ. ಇಲ್ಲದಿದ್ದರೆ, ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಕಳೆದುಕೊಳ್ಳುತ್ತೀರಿ
ನಾವು ಬಿತ್ತಿದ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ನಿಮ್ಮ ಆಲೋಚನೆಗಳ ಬಗ್ಗೆ ಎಚ್ಚರವಿರಲಿ. ಪದಗಳು ಮುಖ್ಯವಲ್ಲ, ಆಲೋಚನೆಗಳು ದೀರ್ಘಕಾಲ ಬದುಕುತ್ತವೆ.
ಸಾವಿರ ಬಾರಿ ಸತ್ಯವನ್ನು ಹೇಳಿದರೂ ಅದು ಸತ್ಯವಾಗಿಯೇ ಇರುತ್ತದೆ. ಆದರೆ ಒಂದೇ ಒಂದು ಅಸತ್ಯವು ಸಾವಿರ ಮುಖವಾಡಗಳನ್ನು ಹಾಕಿಕೊಂಡರೂ ಸತ್ಯವಾಗಲು ಸಾಧ್ಯವಿಲ್ಲ.
ಯಾರನ್ನೂ ಟೀಕಿಸಬೇಡಿ. ನೀವು ಸಹಾಯ ಮಾಡಲು ಸಾಧ್ಯವಾದರೆ ಕೈ ಚಾಚಿ, ಇಲ್ಲದಿದ್ದರೆ ಕೈ ಮುಗಿದು ಅವರು ತಮ್ಮ ಹಾದಿಯಲ್ಲಿ ಸಾಗಲು ಹರಸಿ.
ಅತಿಯಾದ ವಿನಯವು ಕೆಲವು ಬಾರಿ ಧೂರ್ತತನದ ಲಕ್ಷಣವೂ ಆಗಿರಬಹುದು, ಆದ್ದರಿಂದ ಅತಿ ವಿನಯಕ್ಕಿಂತ ನೇರ ನುಡಿ ಲೇಸು. ನೀವು ನಿಮ್ಮನ್ನು ದೇವರೆಂದು ನಂಬುವ ಮೊದಲು, ನಿಮ್ಮನ್ನು ನೀವು ಮನುಷ್ಯನೆಂದು ನಂಬಿ ಮತ್ತು ಇತರರನ್ನು ಗೌರವಿಸಿ.
ವಿಕಾಸವೇ ಜೀವನ ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ಸ್ವಾರ್ಥವೆಲ್ಲಾ ಸಂಕೋಚ ಆದುದರಿಂದ ಪ್ರೇಮವೇ ಬದುಕಿನ ಧರ್ಮ.
ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.