ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್ ಮೇಲೆ ದಾಳಿ ನಡೆಸಿ, ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಸೇರಿ ಹಲವು ಪ್ರಮುಖ ನಾಯಕರನ್ನು ಹತ್ಯೆ ಮಾಡಿದೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದ್ದು, ಯುಎಇ, ಬಹರೇನ್, ಒಮಾನ್, ಇರಾಕ್ ಸೇರಿ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಇಡೀ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂಘರ್ಷವು ಭಾರತದ ಮೇಲೆ ಹಲವಾರು ಆಯಾಮಗಳಲ್ಲಿ ಪ್ರಭಾವ ಬೀರಲಿದೆ.
ಭಾರತವು ತನ್ನ ಕಚ್ಚಾ ತೈಲದ ಶೇ 80ಕ್ಕಿಂತ ಹೆಚ್ಚಿನ ಪಾಲನ್ನು ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಇದನ್ನು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲಿದೆ.
ಭಾರತವು ಪ್ರತಿದಿನ ಸುಮಾರು 20 ಲಕ್ಷ ಬ್ಯಾರೆಲ್ ತೈಲ 'ಹಾರ್ಮುಜ್ ಜಲಸಂಧಿ'ಯ ಮೂಲಕ ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿ ಮುಚ್ಚಿದ್ದಾಗಿ ಇರಾನ್ ಹೇಳಿದೆ. ಇದರಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಇಂಧನ ದರ ಏರಿಕೆ, ಹಣದುಬ್ಬರ ಮತ್ತು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರಲಿದೆ. ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಭಾರತಕ್ಕೆ ದೊಡ್ಡ ಸವಾಲಾಗಲಿದೆ.
ಅಫ್ಘಾನಿಸ್ತಾನ, ಮಧ್ಯ ಏಷ್ಯಾ, ರಷ್ಯಾ ಮತ್ತು ಯುರೋಪ್ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಭಾರತಕ್ಕೆ ಇರಾನ್ ಅತ್ಯಂತ ಪ್ರಮುಖವಾಗಿದೆ. ಒಮಾನ್ ಕೊಲ್ಲಿಯಲ್ಲಿರುವ ಭಾರತ-ಇರಾನ್ ಜಂಟಿ ಉದ್ಯಮವಾದ ಚಾಬಹಾರ್ ಬಂದರು ಯೋಜನೆ, ಪಾಕಿಸ್ತಾನದ ಸಹಾಯವಿಲ್ಲದೆ ಮಧ್ಯ ಏಷ್ಯಾಕ್ಕೆ ಪ್ರವೇಶಿಸಲು ದಾರಿ ಮಾಡಿಕೊಡುತ್ತದೆ.
ಈ ಸಂಘರ್ಷವು ಭಾರತದ ಸಂಪರ್ಕ ಯೋಜನೆಗಳಿಗೆ ಧಕ್ಕೆ ತರುವುದಲ್ಲದೆ, ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಪ್ರಗತಿಗೆ ಅಡ್ಡಿಯಾಗಲಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಸಂಪರ್ಕವನ್ನು ಕಡಿತಗೊಳಿಸುವ ಸಾಧ್ಯತೆಯಿದೆ.
ಯುದ್ಧದ ಭೀತಿಯಿಂದ ಹಡಗುಗಳು ದೀರ್ಘವಾದ 'ಕೇಪ್ ಆಫ್ ಗುಡ್ ಹೋಪ್' ಮಾರ್ಗವನ್ನು ಅವಲಂಬಿಸಬೇಕಾಗಬಹುದು. ಇದರಿಂದ ಪ್ರಯಾಣದ ಸಮಯ 10-14 ದಿನಗಳಷ್ಟು ಹೆಚ್ಚಾಗಲಿದ್ದು, ಸರಕು ಸಾಗಣೆ ವೆಚ್ಚವೂ ದುಪ್ಪಟ್ಟಾಗಲಿದೆ. ಪಶ್ಚಿಮ ಏಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುವ ಎಲ್‌ಪಿಜಿ, ಎಲ್‌ಎನ್‌ಜಿ, ಪೆಟ್ರೋಕೆಮಿಕಲ್ಸ್ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.
ಈ ಸಂಘರ್ಷವು ಪಶ್ಚಿಮ ಏಷ್ಯದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಭಾರತ ಸರ್ಕಾರವು ಈಗಾಗಲೇ ಸಹಾಯವಾಣಿ, ಪ್ರಯಾಣ ಮಾರ್ಗಸೂಚಿಗನ್ನು ಬಿಡುಗಡೆ ಮಾಡಿದೆ.
ಇಸ್ರೇಲ್‌ನೊಂದಿಗೆ ರಕ್ಷಣಾ ಸಂಬಂಧ ಮತ್ತು ಇರಾನ್‌ನೊಂದಿಗೆ ಆರ್ಥಿಕ ಸಂಬಂಧ ಎರಡನ್ನೂ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಭಾರತಕ್ಕಿದೆ. ಇಸ್ರೇಲ್-ಇರಾನ್ ಯುದ್ಧ ದೀರ್ಘಕಾಲ ಮುಂದುವರಿದರೆ, ಇರಾನ್‌ನೊಂದಿಗೆ ದೀರ್ಘ ಗಡಿ ಹೊಂದಿರುವ ಪಾಕಿಸ್ತಾನವು ಅಮೆರಿಕಕ್ಕೆ ಭೌಗೋಳಿಕವಾಗಿ ಆಯಕಟ್ಟಿನ ಮಿತ್ರನಾಗಬಹುದು. ಇದು ಪಾಕಿಸ್ತಾನಕ್ಕೆ ಅಮೆರಿಕದಿಂದ ಹೆಚ್ಚಿನ ಮಿಲಿಟರಿ ಮತ್ತು ಆರ್ಥಿಕ ನೆರವು ಹರಿದುಬರಲು ಕಾರಣವಾಗಬಹುದು, ಇದು ಭಾರತದ ಭದ್ರತೆಯ ದೃಷ್ಟಿಯಿಂದ ಕಳವಳಕಾರಿ ಸಂಗತಿ.
(ಹಲವು ಸುದ್ದಿ ಸಂಸ್ಥೆಗಳ ವರದಿ ಕ್ರೋಢಿಕರಿಸಿ ಬರೆದ ಮಾಹಿತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.