ADVERTISEMENT

ICC T20I Rankings: 38 ಸ್ಥಾನಗಳ ಭರ್ಜರಿ ಜಿಗಿತ ಕಂಡ ಅಭಿಷೇಕ್‌ ನಂ.2

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2025, 9:30 IST
Last Updated 5 ಫೆಬ್ರುವರಿ 2025, 9:30 IST
<div class="paragraphs"><p>ಅಭಿಷೇಕ್ ಶರ್ಮಾ</p></div>

ಅಭಿಷೇಕ್ ಶರ್ಮಾ

   

(ಚಿತ್ರ ಕೃಪೆ: X/@BCCI)

ದುಬೈ: ಲಯದಲ್ಲಿರುವ ಭಾರತದ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರು ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ನ ಬ್ಯಾಟರ್‌ಗಳ ವಿಭಾಗದಲ್ಲಿ 38 ಸ್ಥಾನಗಳಷ್ಟು ಬಡ್ತಿ ಪಡೆದು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬುಧವಾರ ಪ್ರಕಟವಾದ ಪಟ್ಟಿಯ ಪ್ರಕಾರ ತಂಡದ ಸಹ ಆಟಗಾರ ತಿಲಕ್‌ ವರ್ಮಾ ಒಂದು ಸ್ಥಾನ ಇಳಿದು ಮೂರನೇ ಸ್ಥಾನದಲ್ಲಿದ್ದಾರೆ.

ADVERTISEMENT

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಅವರು ಮಿಂಚಿನ ಶತಕ (54 ಎಸೆತಗಳಲ್ಲಿ 135) ಸಿಡಿಸಿದ್ದರು. ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾದ ತಾರೆ ಟ್ರಾವಿಸ್‌ ಹೆಡ್‌ ಅವರು ಶರ್ಮಾ ಅವರಿಗಿಂತ 26 ಪಾಯಿಂಟ್‌ ಮುಂದೆಯಿದ್ದಾರೆ.

ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಐದನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಮೂರು ಸ್ಥಾನಗಳಷ್ಟು ಬಡ್ತಿ ಪಡೆದು ಇಂಗ್ಲೆಂಡ್‌ನ ಸ್ಪಿನ್ನರ್ ಅದಿಲ್ ರಶೀದ್ ಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ವರುಣ್ ಟಿ20 ಸರಣಿಯಲ್ಲಿ ‘ಸರಣಿಯ ಸರ್ವೋತ್ತಮ’ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತ ತಂಡದ ಇನ್ನೊಬ್ಬ ಸ್ಪಿನ್ನರ್ ರವಿ ಬಿಷ್ಣೋಯಿ ನಾಲ್ಕು ಸ್ಥಾನ ಬಡ್ತಿ ಪಡೆದಿದ್ದು ಆರನೇ ಸ್ಥಾನಕ್ಕೇರಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಹ ಅಗ್ರ 10ರಲ್ಲಿದ್ದು ಒಂಬತ್ತನೇ ಸ್ಥಾನಕ್ಕೇರಿದ್ದಾರೆ.

ವೆಸ್ಟ್‌ ಇಂಡೀಸ್‌ನ ಸ್ಪಿನ್ನರ್ ಅಕೀಲ್ ಹುಸೇನ್ ಮರಳಿ ಅಗ್ರಸ್ಥಾನಕ್ಕೇರಿದ್ದಾರೆ. ವಾರದ ಹಿಂದೆ ಅದಿಲ್ ರಶೀದ್ ಅಗ್ರಸ್ಥಾನದಲ್ಲಿದ್ದರು.

ಬದಲಾಗದ ಜೈಸ್ವಾಲ್ ಸ್ಥಾನ:

ಟೆಸ್ಟ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್‌, ಹ್ಯಾರಿ ಬ್ರೂಕ್ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್‌ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.

ಇತ್ತೀಚೆಗಷ್ಟೇ ಐಸಿಸಿ ವರ್ಷದ ಕ್ರಿಕೆಟಿಗ ಮತ್ತು ವರ್ಷದ ಟೆಸ್ಟ್‌ ಆಟಗಾರ ಗೌರವಕ್ಕೆ ಪಾತ್ರರಾದ ಜಸ್‌ಪ್ರೀತ್ಬೂಮ್ರಾ ಅವರು ಟೆಸ್ಟ್‌ ಬೌಲರ್‌ ಗಳ ವಿಭಾಗದಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (ಒಂಬತ್ತನೇ ಸ್ಥಾನ) ಅಗ್ರ 10ರಲ್ಲಿರುವ ಭಾರತದ ಮತ್ತೊಬ್ಬ ಆಟಗಾರ.

ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಆಸ್ಟ್ರೇಲಿಯಾದ ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ಜೋಶ್‌ ಹ್ಯಾಜಲ್‌ವುಡ್ ಮತ್ತು ಪಾಕಿಸ್ತಾನದ ನೊಮಾನ್ ಅಲಿ ಅವರು ಕ್ರಮವಾಗಿ ಎರಡರಿಂದ ಐದವರೆಗಿನ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಹಿರಿಯ ಸ್ಪಿನ್ನರ್ ನೇಥನ್ ಲಯನ್ ಅವರು ಎರಡು ಸ್ಥಾನ ಬಡ್ತಿ ಪಡೆದು ಆರನೇ ಸ್ಥಾನದಲ್ಲಿ ನೆಲಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.