ADVERTISEMENT

ಕ್ರಿಕೆಟ್‌:‌ ಪಾಕ್‌, ದುಬೈ ಮಾರ್ಗವಾಗಿ ಶ್ರೀಲಂಕಾಗೆ ತೆರಳಲಿದೆ ಅಫ್ಗಾನಿಸ್ತಾನ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 0:37 IST
Last Updated 22 ಆಗಸ್ಟ್ 2021, 0:37 IST
ಕಾಬೂಲ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಫ್ಗಾನಿಸ್ತಾನ ಕ್ರಿಕೆಟಿಗರು
ಕಾಬೂಲ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಫ್ಗಾನಿಸ್ತಾನ ಕ್ರಿಕೆಟಿಗರು   

ಕೊಲಂಬೊ:ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯುಶ್ರೀಲಂಕಾದಲ್ಲಿ ನಿಗದಿಯಾಗಿದೆ. ಸೆಪ್ಟೆಂಬರ್‌3ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿಆಡಲು ಅಫ್ಗಾನ್ ತಂಡವು ಪಾಕಿಸ್ತಾನ ಮತ್ತು ದುಬೈ ಮಾರ್ಗವಾಗಿ ಶ್ರೀಲಂಕಾಗೆ ತೆರಳಲಿದೆ ಎಂದುವರದಿಯಾಗಿದೆ.

ಸದ್ಯ ತಾಲಿಬಾನ್‌ ಹಿಡಿತದಲ್ಲಿರುವ ಅಫ್ಗಾನಿಸ್ತಾನದಲ್ಲಿ ಪ್ರಯಾಣಿಕ ವಿಮಾನಗಳ ಹಾರಾಟವು ಸ್ಥಗಿತಗೊಂಡಿದೆ. ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಕ್ರೀಡಾತಾಣದ ಮಾಹಿತಿ ಪ್ರಕಾರ, ಎಸಿಬಿ ತನ್ನ ಎಲ್ಲ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಮೊದಲು ಪಾಕಿಸ್ತಾನ ವೀಸಾಗಳನ್ನು ಪಡೆದುಕೊಂಡು ಪಾಕ್‌ಗೆ ಕರೆದೊಯ್ಯಲಿದೆ. ಬಳಿಕ ಅವರನ್ನು (ಆಟಗಾರರು ಮತ್ತು ಸಿಬ್ಬಂದಿಯನ್ನು) ದುಬೈಗೆ ಮತ್ತು ನಂತರ ಶ್ರೀಲಂಕಾಗೆ ಕಳುಹಿಸಲು ತತ್‌ಕ್ಷಣದ ಯೋಜನೆ ರೂಪಿಸಿಕೊಂಡಿದೆ.

ಸದ್ಯದ ಅನಿಶ್ಚಿತತೆಯ ನಡುವೆಯೂ, ಸರಣಿಯು ನಿಗದಿಯಂತೆ ನಡೆಯಲಿದೆ ಎಂದುಎಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಮೀದ್‌ ಶಿನ್ವಾರಿ ತಿಳಿಸಿದ್ದಾರೆ.

ADVERTISEMENT

ಕ್ರಿಕ್‌ಇನ್ಫೋ ಜೊತೆ ಮಾತನಾಡಿರುವ ಶಿನ್ವಾರಿ, ʼಕ್ರಿಕೆಟ್‌ ಚೆನ್ನಾಗಿ ನಡೆಯುತ್ತಿದೆ.ನಾವು ಕಚೇರಿಗೆ (ಎಸಿಬಿ) ತೆರಳುತ್ತಿದ್ದೇವೆ. ಕ್ರಿಕೆಟ್‌ ತಂಡವು ಶ್ರೀಲಂಕಾದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಸರಣಿಗೆ ಸಜ್ಜಾಗುತ್ತಿದೆ.ಸರಣಿಯಲ್ಲಿ ಆಡುವುದು ಖಚಿತವಾಗಿದೆ. ನಾವು ಸಾಧ್ಯವಾದಷ್ಟು ಬೇಗನೆ ಶ್ರೀಲಂಕಾಗೆ ತಂಡವನ್ನು ಕಳುಹಿಸಲು ಬದ್ಧವಾಗಿದ್ದೇವೆ. ಆಫ್ಗಾನಿಸ್ತಾನದಲ್ಲಿ ಅಡಳಿತ ಬದಲಾವಣೆಯಾಗುತ್ತಿರುವುದರಿಂದ, ವಿಮಾನ ಕಾರ್ಯಾಚರಣೆಯಲ್ಲಿ ನಿರ್ವಾತ ಉಂಟಾಗಿದೆ. ನಮಗೆ ವಿಮಾನ ಖಚಿತವಾಗುತ್ತಿದ್ದಂತೆ ಸಾಧ್ಯವಾದಷ್ಟು ಬೇಗನೆ ಪ್ರಯಾಣ ಆರಂಭಿಸುತ್ತೇವೆ. ಎಲ್ಲ ಆಟಗಾರರು ಕಾಬೂಲ್‌ಗೆ ಆಗಮಿಸಿದ್ದು, ಸರಣಿಗಾಗಿ ತಾಲೀಮು ನಡೆಸುತ್ತಿದ್ದಾರೆʼ ಎಂದು ತಿಳಿಸಿದ್ದಾರೆ.

ʼಮುಂದಿನ ನಾಲ್ಕು ದಿನಗಳಲ್ಲಿ ತಂಡವು ಹೊರಡಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗಳಿಗೆ ಈ ವಿಚಾರ ತಿಳಿಸಿದ್ದೇವೆ. ನಮಗಾಗಿ ಟೂರ್ನಿ ಆಯೋಜಿಸುತ್ತಿರುವ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ನಾವು ಕೃತಜ್ಞರಾಗಿದ್ದೇವೆʼ ಎಂದೂ ಹೇಳಿಕೊಂಡಿದ್ದಾರೆ.

ಎರಡೂ ತಂಡಗಳು ಮೂರು ದಿನ ಕ್ವಾರಂಟೈನ್‌ನಲ್ಲಿರಲಿದ್ದು, ಸರಣಿಯ ಮೂರೂ ಪಂದ್ಯಗಳು ಹಂಬಂಟೋಟಾದಲ್ಲಿ ನಡೆಯಲಿವೆ.

ಸದ್ಯ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ, ಆ ದೇಶದ ತಂಡ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆಯೂ ಅನುಮಾನಗಳು ಮೂಡಿದ್ದವು. ಆದರೆ,ಅಫ್ಗಾನ್‌ ತಂಡದ ವ್ಯವಸ್ಥಾಪಕ‌ ಹಿಕ್ಮತ್‌ ಹಸನ್‌ ಅವರು, ʼದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ನಮ್ಮ ತಂಡ ಭಾಗವಹಿಸುವುದರಲ್ಲಿ ಯಾವುದೇ ಅನುಮಾನವಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.