ADVERTISEMENT

ಐಪಿಎಲ್‌ ಆಯ್ತು; ಈಗ ವಿಶ್ವಕಪ್‌ ಗೆಲ್ಲುವ ಬಯಕೆ –ಹಾರ್ದಿಕ್ ಪಾಂಡ್ಯ

ಪದಾರ್ಪಣೆ ಆವೃತ್ತಿಯಲ್ಲೇ ಗುಜರಾತ್ ಟೈಟನ್ಸ್ ತಂಡವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿದ ಹಾರ್ದಿಕ್ ಪಾಂಡ್ಯ

​ಪ್ರಜಾವಾಣಿ ವಾರ್ತೆ
Published 30 ಮೇ 2022, 14:36 IST
Last Updated 30 ಮೇ 2022, 14:36 IST
ಟ್ರೋಫಿಯೊಂದಿಗೆ ಸಂಭ್ರಮಿಸಿದ ಗುಜರಾತ್ ಟೈಟನ್ಸ್ ಆಟಗಾರರು –ಪಿಟಿಐ ಚಿತ್ರ
ಟ್ರೋಫಿಯೊಂದಿಗೆ ಸಂಭ್ರಮಿಸಿದ ಗುಜರಾತ್ ಟೈಟನ್ಸ್ ಆಟಗಾರರು –ಪಿಟಿಐ ಚಿತ್ರ   

ನವದೆಹಲಿ: ಪದಾರ್ಪಣೆ ಆವೃತ್ತಿಯಲ್ಲೇ ಗುಜರಾತ್ ಟೈಟನ್ಸ್ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ ಹಾರ್ದಿಕ್ ಪಾಂಡ್ಯ. ಈ ಯಶಸ್ಸಿನ ಬೆನ್ನಲ್ಲೇ ಅವರು ಟ್ವೆಂಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರವಾಗಿ ಆಡಿ ಪ್ರಶಸ್ತಿ ಗೆಲ್ಲುವ ಬಯಕೆ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ನಡುವೆ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವ‌ನ್ನು ಗುಜರಾತ್ ಟೈಟನ್ಸ್ 7 ವಿಕೆಟ್‌ಗಳಿಂದ ಮಣಿಸಿತ್ತು.

ಮೊದಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ತಂಡವನ್ನು ತವರಿನ ಅಂಗಣದಲ್ಲಿ ಮಣಿಸಿದ ಗುಜರಾತ್ ತಂಡಕ್ಕಾಗಿ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಉರುಳಿಸಿದ್ದರು. ಬ್ಯಾಟಿಂಗ್‌ನಲ್ಲೂ ಮಿಂಚಿ 34 ರನ್ ಕಲೆ ಹಾಕಿದ್ದರು. ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ಜೋಸ್ ಬಟ್ಲರ್ ವಿಕೆಟ್ ಹಾರ್ದಿಕ್ ಪಾಂಡ್ಯ ಪಾಲಾಗಿತ್ತು. ಬೆನ್ನುನೋವಿನಿಂದ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂಬುದನ್ನು ಈ ಪಂದ್ಯದದಲ್ಲಿ ತೋರಿದ ಸಾಮರ್ಥ್ಯ ಸಾಬೀತು ಮಾಡಿದೆ. ಹಿಂದಿನ ಎರಡು ಆವೃತ್ತಿಗಳಲ್ಲಿ ಬ್ಯಾಟರ್ ಆಗಿ ಆಡಿದ್ದ ಅವರು ಈ ಬಾರಿ ಆಲ್‌ರೌಂಡ್‌ ಆಟದ ಮೂಲಕ ಲಯಕ್ಕೆ ಮರಳಿದ್ದಾರೆ.

ADVERTISEMENT

ಪಂದ್ಯದ ನಂತರ ಮಾತುಕತೆಯ ನಡುವೆ ನಿಮ್ಮ ಮುಂದಿನ ಗುರಿಯೇನು ಎಂದು ಕೇಳಿದಾಗ ‘ಭಾರತ ತಂಡದಲ್ಲಿದ್ದು ವಿಶ್ವಕಪ್‌ ಗೆಲ್ಲುವ ಬಯಕೆ ಇದೆ. ನನ್ನ ಸಂಪೂರ್ಣ ಸಾಮರ್ಥ್ಯ ತೋರಿ ದೇಶಕ್ಕಾಗಿ ಆಡಲು ಸಜ್ಜಾಗಿದ್ದೇನೆ’ ಎಂದರು.

ಹಾರ್ದಿಕ್, ಭಾರತ ತಂಡದ ಭವಿಷ್ಯದ ನಾಯಕ?
ಗುಜರಾತ್ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ಭವಿಷ್ಯದ ನಾಯಕನನ್ನಾಗಿಸುವ ಭರವಸೆ ಮೂಡಿದೆ. ಪಂದ್ಯದ ನಂತರ ವೀಕ್ಷಕ ವಿವರಣೆಕಾರರು ಹಾರ್ದಿಕ್ ಅವರಿಗೆ ರಾಷ್ಟ್ರೀಯ ತಂಡದ ನಾಯಕನಾಗುವ ಅರ್ಹತೆ ಇದೆ ಎಂದು ಶ್ಲಾಘಿಸಿದ್ದರು.

‘ನಾಯಕತ್ವ ಗುಣ ಇರುವವರು ಸಹಜವಾಗಿ ರಾಷ್ಟ್ರೀಯ ಮಟ್ಟದಲ್ಲಿ ತಂಡಗಳನ್ನು ಮುನ್ನಡೆಸುವ ಅರ್ಹತೆ ಗಳಿಸುತ್ತಾರೆ. ಹಾರ್ದಿಕ್ ಪಾಂಡ್ಯ ಅವರು ಅಂಥ ಗುಣ ಇರುವ ಆಟಗಾರ’ ಎಂದು ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಕಾರ ಸುನಿಲ್ ಗಾವಸ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.