ADVERTISEMENT

IPL–2020 | ಕೊನೆಯವರೆಗೂ ಕೆಕೆಆರ್‌ ಪರ ಆಡುವೆ ಎಂದ ವಿಂಡೀಸ್‌ ಕ್ರಿಕೆಟಿಗ ರಸೆಲ್‌

ಪಿಟಿಐ
Published 4 ಮೇ 2020, 3:35 IST
Last Updated 4 ಮೇ 2020, 3:35 IST
ಆ್ಯಂಡ್ರೆ ರಸೆಲ್‌ 
ಆ್ಯಂಡ್ರೆ ರಸೆಲ್‌    

ನವದೆಹಲಿ: ‘ಕ್ರಿಕೆಟ್‌ ಬದುಕಿಗೆ ವಿದಾಯ ಹೇಳುವವರೆಗೂ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಪರ ಆಡುತ್ತೇನೆ’ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಹೇಳಿದ್ದಾರೆ.

ಕೆಕೆಆರ್‌ ತಂಡ ಆಯೋಜಿಸಿದ್ದ ‘ನೈಟ್ಸ್‌ ಅನ್‌ಪ್ಲಗ್ಡ್‌’ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 32 ವರ್ಷ ವಯಸ್ಸಿನ ರಸೆಲ್‌ ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವಾಗ ರೋಮಾಂಚಿತನಾಗುತ್ತೇನೆ. ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಆಡುವಾಗಲಂತೂ ಮೈ ನವಿರೇಳುತ್ತದೆ’ ಎಂದಿದ್ದಾರೆ.

‘ಕೋಲ್ಕತ್ತದ ಅಭಿಮಾನಿಗಳ ಪ್ರೀತಿ ಹಾಗೂ ಪ್ರೋತ್ಸಾಹ ಕಂಡು ಮೂಕವಿಸ್ಮಿತನಾಗಿದ್ದೇನೆ. ಕೊಂಚ ಒತ್ತಡಕ್ಕೂ ಒಳಗಾಗಿದ್ದಿದೆ. ಹಿಂದಿನ ಆರು ಐಪಿಎಲ್‌ ಆವೃತ್ತಿಗಳಲ್ಲಿ ಕೆಕೆಆರ್‌ ಪರ ಆಡಿದ್ದೇನೆ. ತಂಡದ ಜೊತೆಗಿನ ಪ್ರತಿ ಕ್ಷಣವನ್ನೂ ಸಂತಸದಿಂದ ಕಳೆದಿದ್ದೇನೆ. ಹೀಗಾಗಿ ಐಪಿಎಲ್‌ನಲ್ಲಿ ಆಡುವಷ್ಟೂ ಸಮಯ ಈ ತಂಡದಲ್ಲೇ ಇರಬೇಕೆಂದು ಮನಸ್ಸು ಬಯಸುತ್ತಿದೆ’ ಎಂದೂ ನುಡಿದಿದ್ದಾರೆ.

ADVERTISEMENT

‘ಕೊರೊನಾ ವೈರಾಣು ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಹೀಗಾಗಿ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧವಾಗಿವೆ. ನನ್ನನ್ನು ಮೈದಾನದಿಂದ ದೂರ ಇರುವಂತೆ ಮಾಡಿದೆ. ಬೌಂಡರಿ, ಸಿಕ್ಸರ್ ಬಾರಿಸದಂತೆ ಕೈ ಕಟ್ಟಿಹಾಕಿದೆ. ಈ ಬಿಕ್ಕಟ್ಟು ಬಗೆಹರಿದು ಶೀಘ್ರವೇ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.