ADVERTISEMENT

ಐಪಿಎಲ್ 2023: ಈ ಬಾರಿ ಅರ್ಜುನ್‌ಗೆ ಸಿಗುವುದೇ ಅವಕಾಶ? ಹಿಟ್ ಮ್ಯಾನ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2023, 13:15 IST
Last Updated 29 ಮಾರ್ಚ್ 2023, 13:15 IST
ಅರ್ಜುನ್ ತೆಂಡೂಲ್ಕರ್ ಮತ್ತು ಸಚಿನ್ ತೆಂಡೂಲ್ಕರ್
ಅರ್ಜುನ್ ತೆಂಡೂಲ್ಕರ್ ಮತ್ತು ಸಚಿನ್ ತೆಂಡೂಲ್ಕರ್    

ನವದೆಹಲಿ: ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.

ಮುಂಬೈ ಇಂಡಿಯನ್ಸ್‌ ಪ್ರಾಂಚೈಸ್‌ ಕಳೆದ ಎರಡು ಆವೃತ್ತಿಗಳಿಂದ ಅರ್ಜುನ್‌ರನ್ನು ತನ್ನಲ್ಲಿ ಉಳಿಸಿಕೊಂಡಿದೆ. ಆದರೆ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಲು ಅರ್ಜುನ್ ವಿಫಲರಾಗಿದ್ದರು. ಹಾಗಾಗಿ ಈ ಬಾರಿಯಾದರೂ ಅರ್ಜುನ್‌ಗೆ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಅರ್ಜುನ್ ಪದಾರ್ಪಣೆ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ, ‘ಈ ಬಾರಿ ಯುವ ಆಟಗಾರರನ್ನು ನಿರಾಸೆಗೊಳಿಸುವುದಿಲ್ಲ’ ಎಂದು ಉತ್ತರಿಸಿದ್ದಾರೆ.

ADVERTISEMENT

‘ಚುರುಕಾದ ಬೌಲಿಂಗ್‌ನಿಂದ ಗಮನ ಸೆಳೆಯುವಲ್ಲಿ ಅರ್ಜುನ್ ಯಶಸ್ವಿಯಾಗಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ಅವರನ್ನು ಖಂಡಿತವಾಗಿ ಆಯ್ಕೆಗೆ ಪರಿಗಣಿಸಲಾಗುವುದು’ ಎಂದು ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ತಿಳಿಸಿದ್ದಾರೆ.

‘ಅರ್ಜುನ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅವರು ಆಡಲಿದ್ದಾರೆ. ಅರ್ಜುನ್ ಅವರು ಕಳೆದ 6 ತಿಂಗಳಲ್ಲಿ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹಾಗಾಗಿ ನಾವು ಅವರನ್ನು ಆಯ್ಕೆಗೆ ಪರಿಗಣಿಸಲು ಉತ್ಸುಕರಾಗಿದ್ದೇವೆ’ ಎಂದು ಬೌಚರ್ ಹೇಳಿದ್ದಾರೆ.

ಇದೇ ಮಾರ್ಚ್‌ 31ರಂದು ಟೂರ್ನಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.