ADVERTISEMENT

ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

ಆಸ್ಟ್ರೇಲಿಯಾ ಹೋರಾಟ

ಏಜೆನ್ಸೀಸ್
Published 5 ಜನವರಿ 2026, 16:00 IST
Last Updated 5 ಜನವರಿ 2026, 16:00 IST
<div class="paragraphs"><p>ವಿಕೆಟ್‌ ಕಳೆದುಕೊಂಡು ಮೈದಾನದಿಂದ ನಿರ್ಗಮಿಸುವ ಮೊದಲು ಜೋ ರೂಟ್‌ ಬ್ಯಾಟ್ ಎತ್ತಿ ಹಿಡಿದರು. ಎಎಫ್‌ಫಿ ಚಿತ್ರ </p></div>

ವಿಕೆಟ್‌ ಕಳೆದುಕೊಂಡು ಮೈದಾನದಿಂದ ನಿರ್ಗಮಿಸುವ ಮೊದಲು ಜೋ ರೂಟ್‌ ಬ್ಯಾಟ್ ಎತ್ತಿ ಹಿಡಿದರು. ಎಎಫ್‌ಫಿ ಚಿತ್ರ

   

ಸಿಡ್ನಿ: ಅನುಭವಿ ಜೋ ರೂಟ್‌ ಅವರ ಆಕರ್ಷಕ 160 ರನ್‌ಗಳ (242ಎ, 4x15) ನೆರವಿನಿಂದ ಇಂಗ್ಲೆಂಡ್ ತಂಡ ಆ್ಯಷಸ್‌ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನ  384 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತ್ತು. ಆದರೆ ವೇಗವಾಗಿ ಆಡಿದ ಟ್ರಾವಿಸ್‌ ಹೆಡ್‌ ಅಜೇಯ 91 ರನ್ ಬಾರಿಸಿದ್ದು, ಆಸ್ಟ್ರೇಲಿಯಾ ಹೋರಾಟ ನಡೆಸುತ್ತಿದೆ.

ಸೋಮವಾರ ಎರಡನೇ ದಿನದಾಟ ಮುಗಿದಾಗ ಆಸ್ಟ್ರೇಲಿಯಾ 2 ವಿಕೆಟ್‌ಗೆ 166 ರನ್ ಗಳಿಸಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ 3–1 ಮುನ್ನಡೆ ಗಳಿಸಿದೆ.

ADVERTISEMENT

35 ವರ್ಷ ವಯಸ್ಸಿನ ರೂಟ್‌ ಅವರಿಗೆ ಇದು 41ನೇ ಟೆಸ್ಟ್‌ ಶತಕವಾಗಿದ್ದು, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಸರಿಗಟ್ಟಿದರು. ಸಚಿನ್ ತೆಂಡೂಲ್ಕರ್ (51) ಮತ್ತು ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್‌ (45) ಮೊದಲ ಎರಡು ಸ್ಥಾನದಲ್ಲಿದ್ದಾರೆ. ಮೈಕೆಲ್ ನೆಸೆರ್‌ (60ಕ್ಕೆ4) ತಮ್ಮದೇ ಬೌಲಿಂಗ್‌ನಲ್ಲಿ ಹಿಡಿದ ಅಮೋಘ ಕ್ಯಾಚಿಗೆ ರೂಟ್‌ ನಿರ್ಗಮಿಸಿದರು.

ಭರ್ತಿಯಾಗಿದ್ದ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಆಸ್ಟ್ರೇಲಿಯಾ ಅಂತಿಮ ಅವಧಿ ನಿಭಾಯಿಸಬೇಕಾಗಿತ್ತು. ಜೇಕ್ ವೆಥೆರಾಲ್ಡ್‌ (21) ಮತ್ತು ಮಾರ್ನಸ್‌ ಲಾಬುಷೇನ್ (48) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಹೆಡ್ ಜೊತೆ ನೈಟ್‌ ವಾಚ್‌ಮನ್ ನೆಸೆರ್ (1*) ಆಟ ಕಾದಿರಿಸಿದ್ದರು. ಹೆಡ್‌ 87 ಎಸೆತ ಎದುರಿಸಿದ್ದು, 15 ಬೌಂಡರಿ ಬಾರಿಸಿದ್ದಾರೆ.

ಪರ್ತ್‌ನಲ್ಲಿ ಮೊದಲ ಟೆಸ್ಟ್‌ ವೇಳೆ ಪದಾರ್ಪಣೆ ಮಾಡಿದ ನಂತರ ವೆಥೆರಾಲ್ಡ್‌ ನಿರಾಸೆ ಮೂಡಿಸಿದ್ದಾರೆ. ಈ ಇನಿಂಗ್ಸ್‌ನಲ್ಲೂ ಎರಡು ಜೀವದಾನ ಪಡೆದಿದ್ದ ಅವರು ಅಂತಿಮವಾಗಿ ಬೆನ್‌ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ಗಲಿಯಲ್ಲಿದ್ದ ಜೇಕಬ್‌ ಬೆಥೆಲ್‌ಗೆ ಕ್ಯಾಚ್‌ ನೀಡುವ ಮೊದಲು ಲಾಬುಷೇನ್ ಏಳು ಬೌಂಡರಿಗಳನ್ನು ಹೊಡೆದರು.

‌3 ವಿಕೆಟ್‌ಗೆ 211 ರನ್‌ಗಳೊಡನೆ ದಿನದಾಟ ಮುಂದುವರಿಸಿದ ರೂಟ್‌ (ಭಾನುವಾರ: 72*) ಅವರು ಕಳಂಕರಹಿತ ಶತಕಗಳಿಸಿದರು. ಬ್ರೂಕ್‌ (84) ಅವರು ಭಾನುವಾರದ ಮೊತ್ತಕ್ಕೆ ಆರು ರನ್ ಸೇರಿಸಿ ನಿರ್ಗಮಿಸಿದರು. ಸ್ಕಾಟ್ ಬೋಲ್ಯಾಂಡ್ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿದ್ದ ಸ್ಟೀವ್ ಸ್ಮಿತ್‌ಗೆ ಕ್ಯಾಚಿತ್ತರು.

ಈ ಹಿಂದಿನ ಮೂರು ಪ್ರವಾಸಗಳಲ್ಲಿ ರೂಟ್‌ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಗಳಿಸಲಾಗದೇ ಒತ್ತಡಕ್ಕೆ ಒಳಗಾಗಿದ್ದರು. ಆದರೆ ಅಹರ್ನಿಶಿಯಾಗಿ ನಡೆದ ಎರಡನೇ ಟೆಸ್ಟ್‌ನಲ್ಲಿಅ ವರು ಅಜೇಯ 138 ರನ್ ಬಾರಿಸಿ ಆ ಕೊರತೆ ನೀಗಿಸಿದ್ದರು.

ರೂಟ್ 17 ಬಾರಿ ಟೆಸ್ಟ್‌ನಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು 20ಕ್ಕೂ ಹೆಚ್ಚು ಬಾರಿ ಈ ಮೈಲಿಗಲ್ಲು ದಾಟಿದ್ದಾರೆ. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಇಂಗ್ಲೆಂಡ್‌: 97.3 ಓವರುಗಳಲ್ಲಿ 384 (ಜೋ ರೂಟ್‌ 160, ಹ್ಯಾರಿ ಬ್ರೂಕ್‌ 84, ಜೇಮಿ ಸ್ಮಿತ್ 46, ವಿಲ್ ಜಾಕ್ಸ್‌ 27; ಮೈಕೆಲ್‌ ನೆಸೆರ್ 60ಕ್ಕೆ4); ಆಸ್ಟ್ರೇಲಿಯಾ: 34.1 ಓವರುಗಳಲ್ಲಿ 2 ವಿಕೆಟ್‌ಗೆ 166 (ಟ್ರಾವಿಸ್‌ ಹೆಡ್‌ ಬ್ಯಾಟಿಂಗ್ 91, ಮಾರ್ನಸ್‌ ಲಾಬುಷೇನ್ 48; ಬೆನ್‌ ಸ್ಟೋಕ್ಸ್ 30ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.