ADVERTISEMENT

ಏಷ್ಯಾ ಕಪ್ ಕ್ರಿಕೆಟ್‌: ಹಾಂಗ್‌ಕಾಂಗ್‌ ವಿರುದ್ಧ ಪಾಕಿಸ್ತಾನಕ್ಕೆ ದಾಖಲೆಯ ಜಯ

ರಿಜ್ವಾನ್‌, ಜಮಾನ್‌ ಅರ್ಧಶತಕ

ಪಿಟಿಐ
Published 3 ಸೆಪ್ಟೆಂಬರ್ 2022, 1:40 IST
Last Updated 3 ಸೆಪ್ಟೆಂಬರ್ 2022, 1:40 IST
ಮೊಹಮ್ಮದ್‌ ರಿಜ್ವಾನ್‌ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ
ಮೊಹಮ್ಮದ್‌ ರಿಜ್ವಾನ್‌ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ   

ಶಾರ್ಜಾ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಆಟ ಹಾಗೂ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಪಾಕಿಸ್ತಾನ ತಂಡ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಹಾಂಗ್‌ಕಾಂಗ್‌ ವಿರುದ್ಧ ದಾಖಲೆಯ ಜಯ ಗಳಿಸಿತು. ಶಾರ್ಜಾ ದಲ್ಲಿ ಶುಕ್ರವಾರ 155 ರನ್‌ಗಳಿಂದ ಗೆದ್ದು ಸೂಪರ್‌ 4 ಹಂತಕ್ಕೆ ಪ್ರವೇಶಿಸಿತು.

ಭಾನುವಾರ ನಡೆಯುವ ಸೂಪರ್‌ 4 ಹಂತದ ಪಂದ್ಯದಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಎದುರಿಸಲಿದೆ. ಗುಂಪು ಹಂತದಲ್ಲಿ ಭಾರತ, ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಮಣಿಸಿತ್ತು.

ಮೊದಲು ಬ್ಯಾಟ್‌ ಮಾಡಿದ ಬಾಬರ್‌ ಅಜಂ ಬಳಗ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 193 ರನ್‌ ಗಳಿಸಿತು. ಹಾಂಗ್‌ಕಾಂಗ್‌ 11ನೇ ಓವರ್‌ನಲ್ಲಿ ಕೇವಲ 38 ರನ್‌ ಗಳಿಸಿ ಎಲ್ಲ ವಿಕೆಟ್‌ ಒಪ್ಪಿಸಿತು. ತಂಡದ ಯಾರೊಬ್ಬರೂ ಎರಡಂಕಿ ಮೊತ್ತ ದಾಟಲಿಲ್ಲ.

ADVERTISEMENT

ಪಾಕ್‌ ಪರ ಆರಂಭಿಕ ಬ್ಯಾಟರ್‌ ಮೊಹಮ್ಮದ್ ರಿಜ್ವಾನ್‌ (ಅಜೇಯ 78, 57 ಎ., 4X6, 6X1) ಮತ್ತು ಫಖ್ರ್‌ ಜಮಾನ್‌ (53 ರನ್‌, 41 ಎ., 4X3, 6X2) ಅವರು ಅರ್ಧಶತಕದ ಮೂಲಕ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಖುಷ್‌ದಿಲ್‌ ಶಾ (ಅಜೇಯ 35, 15 ಎ., 6X5) ಬೀಸಾಟವಾಡಿ ರನ್‌ ರೇಟ್‌ ಹೆಚ್ಚಿಸಿದರು.

ಟಿ20 ಮಾದರಿಯಲ್ಲಿ ಪಾಕಿಸ್ತಾನಕ್ಕೆ ಇದು ಗರಿಷ್ಠ ಅಂತರದ ಜಯ ಆಗಿದೆ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 193 (ಮೊಹಮ್ಮದ್‌ ರಿಜ್ವಾನ್‌ ಅಜೇಯ 78, ಬಾಬರ್ ಅಜಂ 9, ಫಖ್ರ್‌ ಜಮಾನ್ 53, ಖುಷ್‌ದಿಲ್‌ ಶಾ ಅಜೇಯ 35, ಎಹ್ಸಾನ್‌ ಖಾನ್‌ 28ಕ್ಕೆ 2). ಹಾಂಗ್‌ಕಾಂಗ್‌: 10.4 ಓವರ್‌ಗಳಲ್ಲಿ 38 (ನಿಜಾಕತ್ ಖಾನ್‌ 8, ಕಿಂಚಿತ್‌ ಶಾ 6; ನಸೀಂ ಶಾ 7ಕ್ಕೆ 2, ಶಾದಾಬ್ ಖಾನ್‌ 8ಕ್ಕೆ 4, ಮೊಹಮ್ಮದ್ ನವಾಜ್‌ 5ಕ್ಕೆ 3). ಪಾಕಿಸ್ತಾನಕ್ಕೆ 155 ರನ್‌ಗಳ ಜಯ

ಇಂದಿನ ‍ಪಂದ್ಯ: ಶ್ರೀಲಂಕಾ– ಅಫ್ಗಾನಿಸ್ತಾನ. ಆರಂಭ: ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.