ಅಬುಧಾಬಿ: ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡ 169 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನಕ್ಕೆ ರೆಹಮಾನುಲ್ಲಾ ಗುರ್ಬಾಜ್ 14, ಸಿದ್ದಿಕ್ ಉಲ್ಲಾ 18 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ, ಇಬ್ರಾಹಿಂ ಜರ್ದಾನ್ 24 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.
ಆದರೆ, ರನ್ ವೇಗ ಮಾತ್ರ ಹೆಚ್ಚಾಗಿರಲಿಲ್ಲ. ಬಳಿಕ, ಕ್ರೀಸಿಗಿಳಿದ ಮೊಹಮ್ಮದ್ ನಬಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. 22 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 60 ರನ್ ಸಿಡಿಸಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು. ನಾಯಕ ರಶೀದ್ ಖಾನ್ ಸಹ 24 ರನ್‌ಗಳ ಕಾಣಿಕೆ ನೀಡಿದರು.
ಅಂತಿಮವಾಗಿ 20 ಓವರ್ ಅಂತ್ಯಕ್ಕೆ ಅಫ್ಗಾನಿಸ್ತಾನ 8 ವಿಕೆಟ್ ಕಳೆದುಕೊಂಡು 169 ರನ್ ಪೇರಿಸಿತು.
ಶ್ರೀಲಂಕಾ ಪರ 4 ಓವರ್‌ಗಳಲ್ಲಿ 18 ರನ್ ನೀಡಿ 4 ವಿಕೆಟ್ ಉರುಳಿಸಿದ ನುವಾನ್ ತುಷಾರಾ ಅತ್ಯುತ್ತಮ ಬೌಲರ್ ಎನಿಸಿದರು.
ಅಫ್ಗಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಸೋತ ಬಳಿಕ ಈ ಪಂದ್ಯ ಮಹತ್ವದ್ದಾಗಿದ್ದು, ಗೆದ್ದರೆ ಮಾತ್ರ ಸೂಪರ್–4ಗೆ ಅರ್ಹತೆ ಪಡೆಯಲಿದೆ. ಒಂದುವೇಳೆ ಇಂದಿನ ಪಂದ್ಯ ಸೋತರೆ ಅಫ್ಗಾನಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.