ಅಬುದಾಭಿ: ಹಸ್ತಲಾಘವ ಮಾಡದಿರುವ ವಿಚಾರವಾಗಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕು ಎಂದು ಪಟ್ಟು ಹಿಡಿದಿರುವ ಪಾಕಿಸ್ತಾನ ತಂಡ, ಹಾಗೆ ಮಾಡದಿದ್ದಲ್ಲಿ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.
ಭಾನುವಾರ ನಡೆದ ಏಷ್ಯಾ ಕಪ್ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಪಂದ್ಯ ಗೆದ್ದ ನಂತರವೂ ಭಾರತದ ಆಟಗಾರರು ಪಾಕ್ ಆಟಗಾರರ ಕೈ ಕುಲುಕದೇ ತೆರಳಿದ್ದರು. ಇದು ಪಾಕ್ ತಂಡದ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತದ ತಂಡ ನಡೆಯನ್ನು ಖಂಡಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮೊದಲಿಗೆ ಟೀಮ್ ಇಂಡಿಯಾ ವಿರುದ್ಧ ಮ್ಯಾಚ್ ರೆಫರಿಗೆ ದೂರು ನೀಡಿತ್ತು. ಟೀಮ್ ಇಂಡಿಯಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮ್ಯಾಚ್ ರೆಫರಿಯನ್ನೇ ವಜಾಗೊಳಿಸುವಂತೆ ಆಗ್ರಹಿಸಿದೆ.
ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಪಿಸಿಬಿ, ಪೈಕ್ರಾಫ್ಟ್ ಅವರನ್ನು ತೆಗೆದುಹಾಕದಿದ್ದರೆ ಬುಧವಾರ ಯುಎಇ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಪಿಸಿಬಿ ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್’ (ಎಸಿಸಿ)ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ ಎಂದು ವರದಿ ಹೇಳಿದೆ.
‘ಐಸಿಸಿ ನೀತಿ ಸಂಹಿತೆ ಮತ್ತು ಕ್ರೀಡಾ ಸ್ಟೂರ್ತಿಗೆ ಸಂಬಂಧಿಸಿದ ಎಂಸಿಸಿ ಕಾನೂನುಗಳನ್ನು ಮ್ಯಾಚ್ ರೆಫರಿ ಉಲ್ಲಂಘಿಸಿದ್ದಾರೆ. ಏಷ್ಯಾ ಕಪ್‌ನಿಂದ ಮ್ಯಾಚ್ ರೆಫರಿಯನ್ನು ತಕ್ಷಣ ತೆಗೆದುಹಾಕಬೇಕೆಂದು ಪಿಸಿಬಿ ಒತ್ತಾಯಿಸಿದೆ’ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ 'ಎಕ್ಸ್' ನಲ್ಲಿ ತಿಳಿಸಿದ್ದಾರೆ.
ಪಂದ್ಯದ ಕೊನೆಯಲ್ಲಿ ‘ಹ್ಯಾಂಡ್‌ಶೇಕ್ ಇಲ್ಲ’ ಎಂಬ ಬಗ್ಗೆ ಹೇಳಲು ಮ್ಯಾಚ್ ರೆಫರಿ ಮರೆತಿದ್ದರು. ಈ ತಪ್ಪಿಗೆ ಅವರು ಪಾಕಿಸ್ತಾನ ತಂಡದ ಕ್ಷಮೆಯಾಚಿಸಿದ್ದರು ಎಂದು ಎಸಿಸಿ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.