ದುಬೈ: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಏಷ್ಯಾ ಕಪ್ ಕ್ರಿಕೆಟ್ ಸೂಪರ್ ಫೋರ್ ವಿಭಾಗದ ಕೊನೆಯ ಪಂದ್ಯದಲ್ಲಿ ‘ಸೂಪರ್ ಓವರ್’ನಲ್ಲಿ ಜಯ ಸಾಧಿಸಿತು. ಅದರೊಂದಿಗೆ ಟೂರ್ನಿಯುದ್ದಕ್ಕೂ ಅಜೇಯವಾಗುಳಿಯಿತು.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯವು ರೋಚಕ ರಸದೌತಣ ನೀಡಿತು. ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ ಶರ್ಮಾ ಅವರ ಮಿಂಚಿನ ಅರ್ಧಶತಕ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 202 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ಟೂರ್ನಿಯಲ್ಲಿ ಮೊದಲ ಸಲ ಭಾರತಕ್ಕೆ ಕಠಿಣ ಸವಾಲೊಡ್ಡಿತು. ಆರಂಭಿಕ ಬ್ಯಾಟರ್ ಪಥುಮ್ ನಿಸಾಂಕ (107; 58ಎ, 4X7, 6X6) ಅಮೋಘ ಶತಕ ಹೊಡೆದರು. ಕುಸಾಲ ಪೆರೆರಾ (58; 32ಎ) ಅರ್ಧಶತಕ ಗಳಿಸಿದರು. ಆದರೂ ಭಾರತದ ಬೌಲರ್‌ಗಳ ಬೌಲರ್‌ಗಳು ಪಂದ್ಯ ’ಟೈ’ ಆಗಲು ಕಾರಣರಾದರು. ಉಭಯ ತಂಡಗಳು ಸಮಬಲ ಸಾಧಿಸಿದವು. ಲಂಕಾ 5 ವಿಕೆಟ್‌ಗಳಿಗೆ 202 ರನ್ ಗಳಿಸಿತು.
ಅದರಿಂದಾಗಿ ಸೂಪರ್ ಓವರ್ ನೀಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡಕ್ಕೆ ಎಡಗೈ ವೇಗಿ ಕೇವಲ 2 ರನ್ ಬಿಟ್ಟುಕೊಟ್ಟರು. ಭಾರತದ ಸೂರ್ಯಕುಮಾರ್ ಯಾದವ್ ತಾವೆದುರಿಸಿದ ಮೊದಲ ಎಸೆತದಲ್ಲಿ 3 ರನ್ ಗಳಿಸಿ ಜಯದ ಸಂಭ್ರಮ ಆಚರಿಸಿದರು.
ಭಾರತ ತಂಡವು ಈಗಾಗಲೇ ಫೈನಲ್ ಪ್ರವೇಶಿಸಿದೆ. ಭಾನುವಾರ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಶ್ರೀಲಂಕಾ ತಂಡವು ಜಯದ ಸಿಹಿಯೊಂದಿಗೆ ಹೊರನಡೆಯುವ ಛಲದಲ್ಲಿತ್ತು.
ಶರ್ಮಾ–ವರ್ಮಾ ಬ್ಯಾಟಿಂಗ್: ಶರ್ಮಾ (61; 31ಎ, 4X8, 6X2) ಮತ್ತು ವರ್ಮಾ (ಔಟಾಗದೇ 49, 34ಎ, 4X4, 6X1) ತಂಡಕ್ಕೆ ಬಲ ತುಂಬಿದರು. ಅವರೊಂದಿಗೆ ಅನುಭವಿ ಸಂಜು ಸ್ಯಾಮ್ಸನ್ (39; 23ಎ, 4X1, 6X3) ಕೂಡ ಸೇರಿಕೊಂಡರು. 15 ಎಸೆತಗಳಲ್ಲಿ 21 ರನ್‌ಗಳನ್ನು ಹೊಡೆದ ಅಕ್ಷರ್ ಪಟೇಲ್ ಕೂಡ ಕಾಣಿಕೆ ನೀಡಿದರು.
ಲಂಕಾದ ಆರಂಭಿಕ ಆಟಗಾರ ನಿಸಾಂಕ ಅವರು ಭಾರತದ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಹಾರ್ದಿಕ್ ಎಸೆತವನ್ನು ಆಡುವಾಗ ಕುಸಾಲ ಮೆಂಡಿಸ್ ಔಟಾದರು. ನಿಸಾಂಕ ಅವರಿಗೆ ಕುಸಾಲ ಪೆರೆರಾ ಉತ್ತಮ ಜೊತೆ ನೀಡಿದರು. ಎರಡನೆ ವಿಕೆಟ್ ಜೊತೆಯಾಟದಲ್ಲಿ127 ರನ್ ಸೇರಿಸಿದರು. 13ನೇ ಓವರ್‌ನಲ್ಲಿ ಪೆರೆರಾ ಅವರನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ ಔಟ್ ಮಾಡಿದರು. ನಿಸಾಂಕ ಕೊನೆಯ ಓವರ್‌ನಲ್ಲಿ ಔಟಾದರು.
ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರ್‌ಗಳಲ್ಲಿ 5ಕ್ಕೆ202 (ಅಭಿಷೇಕ್ ಶರ್ಮಾ 61, ತಿಲಕ್ ವರ್ಮಾ ಔಟಾಗದೇ 49, ಸಂಜು ಸ್ಯಾಮ್ಸನ್ 39, ಅಕ್ಷರ್ ಪಟೇಲ್ ಔಟಾಗದೇ 21, ಮಹೀಷ ತೀಕ್ಷಣ 36ಕ್ಕೆ1, ದುಷ್ಮಂತಾ ಚಾಮೀರ 40ಕ್ಕೆ1, ವಣಿಂದು ಹಸರಂಗಾ 37ಕ್ಕೆ1).
ಶ್ರೀಲಂಕಾ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 202 (ಪಥುಮ್ ನಿಸಾಂಕ 107, ಕುಶಾಲ್ ಪೆರೆರಾ 58, ದಸುನ್ ಶನಾಕಾ ಔಟಾಗದೇ 22; ಹಾರ್ದಿಕ್ ಪಾಂಡ್ಯ 7ಕ್ಕೆ 1, ಕುಲದೀಪ್ ಯಾದವ್ 31ಕ್ಕೆ 1, ವರುಣ್ ಚಕ್ರವರ್ತಿ 31ಕ್ಕೆ 1).
ಫಲಿತಾಂಶ: ಭಾರತಕ್ಕೆ ಸೂಪರ್ ಓವರ್‌ನಲ್ಲಿ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.