ADVERTISEMENT

ಏಷ್ಯಾ ಕಪ್ ಟಿ20 ಕ್ರಿಕೆಟ್| ಭಾರತಕ್ಕೆ ಇಂದು ಅಪ್ಗಾನಿಸ್ತಾನ್ ಸವಾಲು

ಏಷ್ಯಾ ಕಪ್ ಟಿ20 ಕ್ರಿಕೆಟ್: ರೋಹಿತ್ ಬಳಗಕ್ಕೆ ಸಮಾಧಾನಕರ ಜಯದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 20:01 IST
Last Updated 7 ಸೆಪ್ಟೆಂಬರ್ 2022, 20:01 IST
ರೋಹಿತ್ ಶರ್ಮಾ 
ರೋಹಿತ್ ಶರ್ಮಾ    

ದುಬೈ : ಭಾರತ ತಂಡದ ಮಟ್ಟಿಗೆ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶದ ಕನಸು ಬಹುತೇಕ ಕಮರಿದೆ.

ಟೂರ್ನಿಯಿಂದ ನಿರ್ಗಮಿಸುವ ಮುನ್ನ ರೋಹಿತ್ ಶರ್ಮಾ ಬಳಗವು ಗುರುವಾರ ಸೂಪರ್ ಫೋರ್ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಕಣಕ್ಕಿಯಲಿದೆ.

ಈ ಹಂತದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಎದುರು ಸೋತಿರುವ ಭಾರತ ತಂಡದ ಫೈನಲ್ ಹಾದಿಯು ಬಹುತೇಕ ಮುಚ್ಚಿದೆ. ಅಫ್ಗಾನಿಸ್ತಾನ ತಂಡವು ಗುಂಪು ಹಂತದಲ್ಲಿ ಉತ್ತಮವಾಗಿ ಆಡಿತ್ತು. ಶ್ರೀಲಂಕಾ ಎದುರಿನ ಸೂಪರ್‌ ಫೋರ್ ಪಂದ್ಯದಲ್ಲಿಯೂ ದಿಟ್ಟವಾಗಿ ಆಡಿತ್ತು. ಹಣಾಹಣಿಯಲ್ಲಿ ಸೋತರೂ ರೆಹಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಅವರ ಅಬ್ಬರದ ಬ್ಯಾಟಿಂಗ್ ಗಮನ ಸೆಳೆದಿತ್ತು.

ADVERTISEMENT

ಅನುಭವಿ ರಶೀದ್ ಖಾನ್, ಫಜಲ್ ಹಕ್ ಫಾರೂಕಿ ಹಾಗೂ ಮುಜೀಬ್ ಉರ್ ರೆಹಮಾನ್ ಈ ಟೂರ್ನಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಆದ್ದರಿಂದ ಭಾರತದ ಬ್ಯಾಟಿಂಗ್ ಪಡೆಗೆ ದಿಟ್ಟ ಸವಾಲೊಡ್ಡಬಲ್ಲ ಸಾಮರ್ಥ್ಯವೂ ಇವರಿಗೆ ಇದೆ.

ಭಾರತ ತಂಡದಲ್ಲಿ ವೈಫಲ್ಯ ಅನುಭವಿಸಿರುವ ರಿಷಭ್ ಪಂತ್ ಅವರನ್ನು ಕೈಬಿಟ್ಟು, ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಬೌಲಿಂಗ್‌ನಲ್ಲಿ ಹೆಚ್ಚು ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಏಕೆಂದರೆ ಆವೇಶ್ ಖಾನ್ ಗಾಯಗೊಂಡಿರುವುದರಿಂದ ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಅವರೇ ವೇಗದ ವಿಭಾಗವನ್ನು ನಿಭಾಯಿಸಬಹುದು. ಚಾಹಲ್‌ಗೆ ವಿಶ್ರಾಂತಿ ನೀಡಿ ರವಿ ಬಿಷ್ಣೊಯಿಗೆ ಅವಕಾಶ ನೀಡಬಹುದು.

ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ರೂಪಿಸುವತ್ತ ಚಿತ್ತ ನೆಟ್ಟಿರುವ ಭಾರತ ತಂಡಕ್ಕೆ ಈ ಪಂದ್ಯವೂ ಪ್ರಯೋಗದ ವೇದಿಕೆಯಾಗಲಿದೆ.

‘ತಂಡದಲ್ಲಿ ಆಡಿರುವ ಮೂವರು ಮಧ್ಯಮವೇಗಿಗಳ ಆಟವು ತೃಪ್ತಿಕರವಾಗಿದೆ. ಆವೇಶ್ ಖಾನ್ ಫಿಟ್‌ನೆಸ್‌ ಟೆಸ್ಟ್‌ ಉತ್ತೀರ್ಣರಾಗಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ನಾಲ್ವರು ವೇಗಿಗಳನ್ನು ಆಡಿಸಬೇಕಾಗಬಹುದು. ಆದ್ದರಿಂದ ಸದ್ಯದ ಸಂಯೋಜನೆ ಚೆನ್ನಾಗಿದೆ’ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.