ADVERTISEMENT

Asia Cup: ಬಾಂಗ್ಲಾಕ್ಕೆ ಸೋಲು: ಫೈನಲ್‌ನಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2025, 18:58 IST
Last Updated 25 ಸೆಪ್ಟೆಂಬರ್ 2025, 18:58 IST
   

ದುಬೈ: ಶಾಹಿನ್‌ ಶಾ ಅಫ್ರಿದಿ (17ಕ್ಕೆ 3) ಅವರ ವೇಗದ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡವು ಗುರುವಾರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 11 ರನ್‌ಗಳಿಂದ ಮಣಿಸಿ ಫೈನಲ್‌ ಪ್ರವೇಶಿಸಿತು.

ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಲಿದೆ. ಗುಂಪು ಹಂತ, ಸೂಪರ್‌ ಫೋರ್‌ ಹಂತದ ಬಳಿಕ ಟೂರ್ನಿಯಲ್ಲಿ ಮೂರನೇ ಬಾರಿ ಉಭಯ ತಂಡಗಳು ಸೆಣಸಾಡಲಿವೆ.

ಪಾಕ್‌ ತಂಡ ನೀಡಿದ್ದ 136 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ತಂಡವು 9 ವಿಕೆಟ್‌ಗೆ 124  ರನ್‌ ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ ಶಮೀಮ್ ಹುಸೇನ್ (30;25ಎ) ಹೊರತು ಪಡಿಸಿ ಉಳಿದವರು ನಿರಾಸೆ ಮೂಡಿಸಿದರು. ಹ್ಯಾರಿಸ್ ರವೂಫ್‌ ಮೂರು ವಿಕೆಟ್‌ ಪಡೆದರೆ, ಸಯೀಮ್ ಅಯೂಬ್‌ ಎರಡು ವಿಕೆಟ್‌ ಗಳಿಸಿ ಗೆಲುವಿನಲ್ಲಿ ಮಿಂಚಿದರು.

ADVERTISEMENT

ಇದಕ್ಕೂ ಮೊದಲು ಟಾಸ್‌ ಗೆದ್ದ ಬಾಂಗ್ಲಾ ಫೀಲ್ಡಿಂಗ್‌ ಆಯ್ದುಕೊಂಡಿತು. ಬೌಲರ್‌ಗಳು ಸಾಂಘಿಕ ನಿರ್ವಹಣೆ ತೋರಿ ಪಾಕ್‌ ತಂಡವನ್ನು 8 ವಿಕೆಟ್‌ಗೆ 135 ರನ್‌ಗಳಿಗೆ ನಿಯಂತ್ರಿಸಿದರು.  ತಂಡ 50 ತಲುಪುವ ಮೊದಲೇ ಸಯೀಮ್ ಅಯೂಬ್ (0), ಫಖರ್ ಜಮಾನ್ (13), ಹುಸೇನ್ ತಲತ್‌ (3) ಮತ್ತು ನಾಯಕ ಸಲ್ಮಾನ್ ಆಘಾ (19) ನಿರ್ಗಮಿಸಿದ್ದರು. ಮೊಹಮ್ಮದ್ ಹ್ಯಾರಿಸ್ (31, 23 ಎ) ಚೇತರಿಕೆ ನೀಡಿದರು. ಮೊಹಮ್ಮದ್ ನವಾಜ್ (25, 15ಎ) ಮತ್ತು ಶಾಹಿನ್ ಶಾ ಅಫ್ರಿದಿ (19, 13ಎ) ಅವರು ಕೊನೆಗಳಿಗೆಯಲ್ಲಿ ತಂಡದ ಮೊತ್ತ 130 ದಾಟಿಸಿದರು.

ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್ ಮೂರು ವಿಕೆಟ್‌ ಪಡೆದರೆ, ಆಫ್‌ ಸ್ಪಿನ್ನರ್‌ ಮಹೆದಿ ಹಸನ್ ಮತ್ತು ಲೆಗ್ ಸ್ಪಿನ್ನರ್ ರಿಷದ್ ಹುಸೇನ್ ತಲಾ ಎರಡು ವಿಕೆಟ್‌ ಪಡೆದರು. 

ಇದೇ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಎರಡು ಸಲ ಮಣಿಸಿತ್ತು. ಹಸ್ತಲಾಘವ ವಿವಾದದ ನಡುವೆ ಈಗ ಮೂರನೇ ಸಲ ಮುಖಾಮುಖಿಯಾಗಲಿದೆ. ಫೈನಲ್ ಪಂದ್ಯವು ಭಾನುವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: 

ಪಾಕಿಸ್ತಾನ: 20 ಓವರುಗಳಲ್ಲಿ 8ಕ್ಕೆ 135 (ಮೊಹಮ್ಮದ್ ಹ್ಯಾರಿಸ್ 31, ಮೊಹಮ್ಮದ್ ನವಾಝ್ 25; ತಸ್ಕಿನ್ ಅಹ್ಮದ್ 28ಕ್ಕೆ3, ಮಹೆದಿ ಹಸನ್‌ 28ಕ್ಕೆ2, ರಿಷದ್ ಹುಸೇನ್ 18ಕ್ಕೆ2)

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 124 (ಸೈಫ್‌ ಹಸನ್‌ 18, ಶಮೀಮ್ ಹುಸೇನ್ 30; ಶಾಹಿನ್‌ ಶಾ ಅಫ್ರಿದಿ 17ಕ್ಕೆ 3, ಹ್ಯಾರಿಸ್‌ ರವೂಫ್‌ 33ಕ್ಕೆ 3, ಸಯೀಮ್ ಅಯೂಬ್‌ 16ಕ್ಕೆ 2). ಫಲಿತಾಂಶ: ಪಾಕಿಸ್ತಾನಕ್ಕೆ 11 ರನ್‌ಗಳ ಜಯ.

ಪಂದ್ಯದ ಆಟಗಾರ: ಶಾಹಿನ್‌ ಶಾ ಅಫ್ರಿದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.