ADVERTISEMENT

ಆಸ್ಟ್ರೇಲಿಯಾಕ್ಕೆ ಆರನೇ ವಿಶ್ವಕಪ್

ಮಹಿಳೆಯರ ಟಿ20 ಕ್ರಿಕೆಟ್: ದಕ್ಷಿಣ ಆಫ್ರಿಕಾದ ಕನಸು ನುಚ್ಚುನೂರು; ಬೆಥ್ ಮೂನಿ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 6:25 IST
Last Updated 27 ಫೆಬ್ರುವರಿ 2023, 6:25 IST
ಗೆಲುವಿನ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ –ಎಎಫ್‌ಪಿ ಚಿತ್ರ
ಗೆಲುವಿನ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ –ಎಎಫ್‌ಪಿ ಚಿತ್ರ   

ಕೇಪ್‌ಟೌನ್ (ಪಿಟಿಐ): ಆಸ್ಟ್ರೇಲಿಯಾ ವನಿತೆಯರ ಬಳಗವು ಆರನೇ ಬಾರಿ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಪ್ರಶಸ್ತಿ ಕನಸು ಕಮರಿತು.

ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ್ದ ದಕ್ಷಿಣ ಆಫ್ರಿಕಾ ತಂಡವು ಭಾನುವಾರ ನಡೆಸಿದ ಛಲದ ಹೋರಾಟಕ್ಕೆ ಗೆಲುವಿನ ಫಲ ಸಿಗಲಿಲ್ಲ. ಬಲಿಷ್ಠ ಆಸ್ಟ್ರೇಲಿಯಾ ತಂಡವು 19 ರನ್‌ಗಳಿಂದ ಜಯಿಸಿತು. ಹೋದ ವರ್ಷವೂ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಬ್ಯಾಟರ್ ಬೆಥ್ ಮೂನಿ (ಔಟಾಗದೆ 74; 53ಎ, 4X9, 6X1) ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 156 ರನ್ ಗಳಿಸಿತು. ಆಸ್ಟ್ರೇಲಿಯಾದ ಉಳಿದ ಬ್ಯಾಟರ್‌ಗಳು ಹೆಚ್ಚು ಅಬ್ಬರಿಸದಂತೆ ಆತಿಥೇಯ ತಂಡದ ಬೌಲರ್‌ಗಳು ನೋಡಿಕೊಂಡರು.

ADVERTISEMENT

ಮಧ್ಯಮವೇಗಿ ಶಬ್ನಿಮ್ ಇಸ್ಮಾಯಿಲ್ ಮತ್ತು ಮೆರಿಜಾನೆ ಕ್ಯಾಪ್ ತಲಾ ಎರಡು ವಿಕೆಟ್ ಗಳಿಸಿದರು. ಮಿಯಾಬಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸ್ಟ್ರೇಲಿಯಾ ಬೌಲರ್‌ಗಳು ತಡೆಯೊಡ್ಡಿದರು. ಟೂರ್ನಿಯುದ್ದಕ್ಕೂ ಮಿಂಚಿದ್ದ ಆರಂಭಿಕ ಬ್ಯಾಟರ್ ಲಾರಾ (61; 48ಎ, 4X5, 6X3) ತಮ್ಮ ಮೇಲಿನ ಭರವಸೆ ಉಳಿಸಿಕೊಂಡರು. ಆದರೆ ಉಳಿದ ಬ್ಯಾಟರ್‌ಗಳಿಂದ ಉತ್ತಮ ಬೆಂಬಲ ದೊರೆಯದೇ ದೊಡ್ಡ ಜೊತೆಯಾಟಗಳು ದಾಖಲಾಗಲಿಲ್ಲ. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 137 ರನ್ ಗಳಿಸಲಷ್ಟೇ ದಕ್ಷಿಣ ಆಫ್ರಿಕಾಕ್ಕೆ ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 6ಕ್ಕೆ 156 (ಬೆಥ್ ಮೂನಿ ಔಟಾಗದೆ 74, ಆ್ಯಷ್ಲೆ ಗಾರ್ಡನರ್ 29, ಶಬ್ನಿಮ್ ಇಸ್ಮಾಯಿಲ್ 26ಕ್ಕೆ2, ಮರಿಜಾನೆ ಕ್ಯಾಪ್ 35ಕ್ಕೆ2) ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 137 (ಲಾರಾ ವೊಲ್ವಾರಡ್ಟೆ 61, ಷ್ಲೋ ಟ್ರಯಾನ್ 25, ಮೇಗನ್ ಶುಟ್ 23ಕ್ಕೆ1, ಆ್ಯಷ್ಲೆ ಗಾರ್ಡನರ್ 20ಕ್ಕೆ1) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 19 ರನ್‌ಗಳ ಜಯ ಮತ್ತು ಪ್ರಶಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.