ADVERTISEMENT

Aus vs Ind | ನಿತೀಶ್ ರೆಡ್ಡಿ ಆಟಕ್ಕೆ ‘ತಗ್ಗಿದ’ ಆಸೀಸ್ ಬೌಲರ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2024, 6:45 IST
Last Updated 28 ಡಿಸೆಂಬರ್ 2024, 6:45 IST
<div class="paragraphs"><p>ಶತಕ ಬಾರಿಸಿದ ಸಂಭ್ರಮದಲ್ಲಿ ನಿತೀಶ್ ಕುಮಾರ್ ರೆಡ್ಡಿ</p></div>

ಶತಕ ಬಾರಿಸಿದ ಸಂಭ್ರಮದಲ್ಲಿ ನಿತೀಶ್ ಕುಮಾರ್ ರೆಡ್ಡಿ

   

– ಎಕ್ಸ್ ಚಿತ್ರ: @bcci

ಮೆಲ್ಬರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತದ ಯುವ ಬ್ಯಾಟರ್‌ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸಿದ್ದಾರೆ. ಇದು ಟೆಸ್ಟ್‌ನಲ್ಲಿ ಅವರ ಚೊಚ್ಚಲ ಶತಕ.

ADVERTISEMENT

ಮೂರನೇ ದಿನದಾಟದ ಕೊನೆಯ ಸೆಷನ್‌ನಲ್ಲಿ ಮಂದ ಬೆಳಕಿನಿಂದಾಗಿ ಆಟ ನಿಂತಾಗ ಭಾರತ 9 ವಿಕೆಟ್‌ ಕಳೆದುಕೊಂಡು 358‌‌‌‌‌‌‌ರನ್ ಗಳಿಸಿದೆ. ಇನ್ನೂ 116 ರನ್ ಹಿನ್ನಡೆಯಲ್ಲಿದೆ.

ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತವನ್ನು ನಿತೀಶ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಮೇಲಕ್ಕೆತ್ತಿದ್ದರು.

ತಾಳ್ಮೆಯ ಆಟವಾಡಿದ ಸುಂದರ್ ಅರ್ಧ ಶತಕ ಬಾರಿಸಿದರು. 50 ರನ್ ಗಳಿಸಿದ್ದಾಗ ಲಯನ್ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ಸ್ಟೀವನ್ ಸ್ಮಿತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ನಂತರ ಬಂದ ಜಸ್ಪ್ರೀತ್ ಬೂಮ್ರಾ ಶೂನ್ಯಕ್ಕೆ ನಿರ್ಗಮಿಸಿದಾಗ ರೆಡ್ಡಿ 99 ರನ್ ಗಳಿಸಿ ಆಡುತ್ತಿದ್ದರು. ಮೈದಾನದಲ್ಲಿ ಇದ್ದ ಅವರ ತಂದೆ ಮಗನ ಶತಕಕ್ಕಾಗಿ ಪ್ರಾರ್ಥಿಸುತ್ತಿದ್ದರು. ಬೋಲ್ಯಾಂಡ್ ಎಸೆತದಲ್ಲಿ ಬೌಂಡರಿ ಬಾರಿಸಿ ಚೊಚ್ಚಲ ಶತಕದ ಸಂಭ್ರಮಾಚರಣೆ ಮಾಡಿದರು. ಮಗನ ಶತಕದ ಸಂಭ್ರಮ ನೋಡಿ ತಂದೆಯ ಕಣ್ಣುಗಳು ಒದ್ದೆಯಾಯಿತು. ಮೈದಾನದಲ್ಲಿ ಉದ್ಘೋಷಗಳು ಮೊಳಗಿದವು.

ಎರಡನೇ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 164 ರನ್‌ಗಳಿಸಿದ್ದ ಭಾರತದ ಬ್ಯಾಟರ್‌ಗಳು ಮೂರನೇ ದಿನವೂ ವೈಫಲ್ಯ ಅನುಭವಿಸಿದರು. ಉತ್ತಮ ಹೊಡೆತಗಳ ಮೂಲಕ ಭರವಸೆ ಮೂಡಿಸಿದ್ದ ರಿಷಬ್ ಪಂತ್‌ ಬೋಲ್ಯಾಂಡ್ ಎಸೆತದಲ್ಲಿ ಲಯನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ತಂಡದ ಮೊತ್ತಕ್ಕೆ ಅವರ ಕೊಡುಗೆ 28 ರನ್. ರವೀಂದ್ರ ಜಡೇಜಾ 17 ರನ್ ಗಳಿಸಿದ್ದಾಗ ಲಯನ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ರೆಡ್ಡಿ ಹಾಗೂ ಸುಂದರ್ ಹೊಸ ಚೆಂಡಿನಲ್ಲಿ ಪ್ರಬುದ್ಧವಾಗಿ ಆಡಿದರು. ರೆಡ್ಡಿ ಮನಮೋಹಕ ಹೊಡೆತಗಳ ಮೂಲಕ ರಂಜಿಸಿದರಲ್ಲದೆ, ಭಾರತವನ್ನು ಫಾಲೋಆನ್ ಭೀತಿಯಿಂದ ಪಾರು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.