ADVERTISEMENT

ಚೆಂಡು ಬಡಿದು ಆಸಿಸ್ ಕ್ರಿಕೆಟಿಗ ನಿಧನ: ಮಹಿಳಾ ವಿಶ್ವಕಪ್ ಪಂದ್ಯದ ವೇಳೆ ಗೌರವ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2025, 14:11 IST
Last Updated 30 ಅಕ್ಟೋಬರ್ 2025, 14:11 IST
<div class="paragraphs"><p>ಚೆಂಡು ಕುತ್ತಿಗೆಗೆ ಬಡಿದು ಮೃತಪಟ್ಟ ಬೆನ್‌ ಆಸ್ಟಿನ್‌. (ಮತ್ತೊಂದು ಚಿತ್ರದಲ್ಲಿ) ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ</p></div>

ಚೆಂಡು ಕುತ್ತಿಗೆಗೆ ಬಡಿದು ಮೃತಪಟ್ಟ ಬೆನ್‌ ಆಸ್ಟಿನ್‌. (ಮತ್ತೊಂದು ಚಿತ್ರದಲ್ಲಿ) ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ

   

ಕೃಪೆ: X (@cricketvictoria), ಪಿಟಿಐ

ಮೆಲ್ಬರ್ನ್: ಆಸ್ಟ್ರೇಲಿಯಾದ 17 ವರ್ಷ ವಯಸ್ಸಿನ ಆಟಗಾರನೊಬ್ಬ ಚೆಂಡು ಬಡಿದ ಪರಿಣಾಮ ಸಾವಿಗೀಡಾಗಿದ್ದಾರೆ. 

ADVERTISEMENT

ಮಂಗಳವಾರ ಟಿ20 ಪಂದ್ಯಕ್ಕೆ ಮುನ್ನ ನೆಟ್ಸ್‌ನಲ್ಲಿ ಚೆಂಡೆಸುವ ಯಂತ್ರದ ಎದುರು ಅಭ್ಯಾಸ ನಡೆಸುವ ವೇಳೆ ಎಸೆತವೊಂದು ಅವರ ಕುತ್ತಿಗೆಗೆ ಬಡಿದಿದೆ. ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಜೀವನ್ಮರಣ ಹೋರಾಟದಲ್ಲಿದ್ದ ಅವರು ಗುರುವಾರ ಮೃತಪಟ್ಟಿದ್ದಾರೆ.

ಫೆರ್ನ್‌ಟ್ರೀ ಗಲಿ ತಂಡ ಪ್ರತಿನಿಧಿಸುತ್ತಿದ್ದ ಅವರು ಹೆಲ್ಮೆಟ್‌ ಧರಿಸಿದ್ದರು. ಆದರೆ ಕುತ್ತಿಗೆಗೆ ರಕ್ಷಣೆ ನೀಡುವ ‘ಸ್ಟೆಮ್‌ ಗಾರ್ಡ್‌’ ಧರಿಸಿರಲಿಲ್ಲ ಎಂದು ಎಬಿಸಿ ವರದಿ ಮಾಡಿದೆ.

‘ಬೆನ್‌ ನಿಧನದಿಂದ ನಾವು ಆಘಾತಗೊಂಡಿದ್ದೇವೆ. ಅವರ ನಿಧನ ಇಡೀ ಕ್ರಿಕೆಟ್‌ ಸಮುದಾಯವನ್ನು ಶೋಕದಲ್ಲಿ ಮುಳುಗಿಸಿದೆ’ ಎಂದು ಫೆರ್ನ್‌ಟ್ರೀ ಕ್ಲಬ್‌ ಹೇಳಿಕೆಯಲ್ಲಿ ತಿಳಿಸಿದೆ.

ಸೆಮಿಫೈನಲ್‌ ವೇಳೆ ಗೌರವ
ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಾಡುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು, ಆಸ್ಟಿನ್‌ ಅವರಿಗೆ ಗೌರವ ಸೂಚಿಸಿವೆ. ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಣಕ್ಕಿಳಿಯುವ ಮೂಲಕ ಸಂತಾಪ ಸೂಚಿಸಿವೆ.

ಫಿಲ್‌ ಹ್ಯೂಸ್‌ ನೆನಪು
ಆಸ್ಟ್ರೇಲಿಯಾ ಪರ 26 ಟೆಸ್ಟ್‌, 25 ಏಕದಿನ ಹಾಗೂ 1 ಟಿ20 ಪಂದ್ಯದಲ್ಲಿ ಆಡಿದ್ದ ಫಿಲ್‌ ಹ್ಯೂಸ್‌ ಅವರೂ ಇದೇ ರೀತಿ ಮೃತಪಟ್ಟಿದ್ದರು.

2014ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದ ವೇಳೆ ವೇಗಿ ಸೀನ್‌ ಅಬೋಟ್‌ ಎಸೆದ ಬೌನ್ಸರ್‌, ಫಿಲ್‌ ತಲೆಗೆ ಅಪ್ಪಳಿಸಿತ್ತು. ಪೆಟ್ಟಿನ ತೀವ್ರತೆಗೆ ಕೋಮಾಗೆ ಜಾರಿದ್ದ ಫಿಲ್‌, ನವೆಂಬರ್‌ 27ರಂದು ಮೃತಪಟ್ಟಿದ್ದರು. ಆಗ ಅವರ ವಯಸ್ಸು ಕೇವಲ 25!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.