ADVERTISEMENT

ಡಿಆರ್‌ಸಿ ಮೊರೆಹೋದ ಹತಾಶ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ

ಬದಲಿ ತಂಡವಾಗಿ ಸ್ಕಾಟ್ಲೆಂಡ್‌: ಇಂದು ಪ್ರಕಟಿಸುವ ಸಾಧ್ಯತೆ

ಪಿಟಿಐ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
<div class="paragraphs"><p>ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು</p></div>

ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು

   

ನವದೆಹಲಿ: ಕಗ್ಗಂಟು ಬಗೆಹರಿಸಲು ಹಾತೊರೆಯುತ್ತಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು, ಐಸಿಸಿ ವ್ಯಾಜ್ಯ ಪರಿಹಾರ ಸಮಿತಿಯ (ಡಿಆರ್‌ಸಿ) ಮೊರೆಹೋಗಿದೆ. ಟಿ20 ವಿಶ್ವಕಪ್‌ನ ತನ್ನ ಪಂದ್ಯಗಳನ್ನು ಭಾರತದಲ್ಲೇ ಆಡಬೇಕೆಂದು ನಿರ್ದೇಶಿಸಿರುವ ಐಸಿಸಿ ಆಡಳಿತ ಮಂಡಳಿಯ ನಿರ್ಧಾರವನ್ನು ಬದಲಿಸಬೇಕೆಂದು ಲಿಖಿತವಾಗಿ ಮನವಿ ಮಾಡಿದೆ.

ಆದರೆ ಈ ವಿಷಯವು ಉಪಸಮಿತಿ ವ್ಯಾಪ್ತಿಯ ಹೊರಗಿರುವುದರಿಂದ, ಬಿಸಿಬಿಯ ಮೇಲ್ಮನವಿ ಅಲಿಸಲು ಅವಕಾಶ ಇಲ್ಲವಾಗಿದೆ. ಬಾಂಗ್ಲಾ ತಂಡದ ಬದಲು ಕ್ರಮಾಂಕದಲ್ಲಿ ಅದರ ನಂತರದ ಸ್ಥಾನದಲ್ಲಿರುವ ಸ್ಕಾಟ್ಲೆಂಡ್ ತಂಡವನ್ನು ಈಗ ಸ್ಟ್ಯಾಂಡ್‌ಬೈನಲ್ಲಿ ಇಡಲಾಗಿದೆ.

ADVERTISEMENT

19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಟೂರ್ನಿಯ ಕಾರ್ಯಕ್ರಮಕ್ಕೆ ನಮೀಬಿಯಾಕ್ಕೆ ತೆರಳಿದ್ದ ಐಸಿಸಿ ಅಧ್ಯಕ್ಷ ಜಯ್‌ ಶಾ ಅವರು ಈಗಾಗಲೇ ದುಬೈ ತಲುಪಿದ್ದಾರೆ. ಬಾಂಗ್ಲಾದೇಶ ತಂಡಕ್ಕೆ ಬದಲಿಯಾಗಿ ಆಡುವ ತಂಡವನ್ನು ಶನಿವಾರ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ.

ಭಾರತದಲ್ಲೇ ಪಂದ್ಯಗಳನ್ನು ಆಡಬೇಕೆಂದು ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಗೆ ಐಸಿಸಿ ತಾಕೀತು ಮಾಡಿರುವ ಕಾರಣ ಅದರ ಅಧ್ಯಕ್ಷ ಅಮಿನುಲ್ ಇಸ್ಲಾಂ ಬುಲ್‌ಬುಲ್ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೊನೆಯ ಪ್ರಯತ್ನವಾಗಿ ಅವರು ಇಂಗ್ಲೆಂಡ್‌ನ ಮೈಕೆಲ್ ಬೆಲೋಫ್ ನೇತೃತ್ವದ ಐಸಿಸಿಯ ವ್ಯಾಜ್ಯ ಪರಿಹಾರ ಸಮಿತಿಯ ನೆರವು ಕೇಳಿದ್ದಾರೆ. ಈ ಸಮಿತಿ 11 ಸದಸ್ಯರನ್ನು ಹೊಂದಿದೆ.

‘ತನ್ನ ಮುಂದಿದ್ದ ಇತರ ಎಲ್ಲಾ ಆಯ್ಕೆಗಳು ಫಲಪ್ರದವಾಗದ ಕಾರಣ ಬಿಸಿಬಿಯು, ಐಸಿಸಿ ಅಂಗಸಂಸ್ಥೆಯಾದ ಡಿಆರ್‌ಸಿಯನ್ನು ಸಂಪರ್ಕಿಸಿರುವುದು ನಿಜ. ಒಂದೊಮ್ಮೆ ಡಿಆರ್‌ಸಿಯೂ ಬಿಸಿಬಿಗೆ ವಿರುದ್ಧವಾಗಿ ಆದೇಶ ನೀಡಿದಲ್ಲಿ, ಅದು ಸ್ವಿಟ್ಜರ್ಲೆಂಡ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ (ಸಿಎಎಸ್‌) ಮೊರೆಹೋಗಲು ಅವಕಾಶವಿದೆ’ ಎಂದು ಬಿಸಿಬಿಯ ಮೂಲವೊಂದು ಪಿಟಿಐಗೆ ತಿಳಿಸಿದೆ.

ಬಾಂಗ್ಲಾದೇಶ ತಂಡವು ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ಭಾರತಕ್ಕೆ ಪಯಣಿಸುವುದಿಲ್ಲ ಎಂದು ಆ ದೇಶದ ಮಧ್ಯಂತರ ಸರ್ಕಾರದ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ನಝ್ರುಲ್ ಗುರುವಾರ ಪ್ರಕಟಿಸಿದ್ದರು.

ಐಸಿಸಿಯ ನಿರ್ದೇಶಕ ಮಂಡಳಿಯಲ್ಲಿ ಅಂಗೀಕಾರಗೊಂಡ ನಿರ್ಣಯವನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿಯನ್ನು ಆಲಿಸುವ ಹಕ್ಕು ವ್ಯಾಜ್ಯ ಪರಿಹಾರ ಸಮಿತಿಗೆ ಇಲ್ಲ ಎಂಬ ಅಂಶ ಐಸಿಸಿಯ ನಿಯಮಾವಳಿಯಲ್ಲಿ ಇದೆ.

ಐಸಿಸಿ ನಿರ್ದೇಶಕ ಮಂಡಳಿ ಗುರುವಾರ ಸಭೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮನವಿ 14–2 ಮತಗಳಿಂದ ತಿರಸ್ಕೃತಗೊಂಡಿದೆ.