(ಚಿತ್ರ ಕೃಪೆ: X/@BCBtigers)
ಢಾಕಾ: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಇಕ್ಕಟ್ಟಿಗೆ ಸಿಲುಕಿದ್ದು, ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಇಂದಿನ (ಗುರುವಾರ) ಪಂದ್ಯವನ್ನು ಆಟಗಾರರು ಬಹಿಷ್ಕರಿಸಿದ್ದಾರೆ.
ಭಾರತದೊಂದಿಗಿನ ಬಿಕ್ಕಟ್ಟು ಮುಂದುವರಿಯುತ್ತಿರುವ ಮಧ್ಯೆಯೇ ನೆರೆಯ ರಾಷ್ಟ್ರದಲ್ಲಿ ಈ ಎಲ್ಲ ಬೆಳವಣಿಗೆಗಳು ಕಂಡುಬಂದಿವೆ.
ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ದೇಶಕ ಎಂ. ನಜ್ಮುಲ್ ಇಸ್ಲಾಂ ರಾಜೀನಾಮೆ ನೀಡಬೇಕೆಂದು ಆಟಗಾರರು ಪಟ್ಟು ಹಿಡಿದಿದ್ದಾರೆ.
ಇಂದು (ಗುರುವಾರ) ಆಟಗಾರರು ಮೈದಾನಕ್ಕಿಳಿಯದ ಕಾರಣ ನೋವಾಖಾಲಿ ಎಕ್ಸ್‌ಪ್ರೆಸ್ ಹಾಗೂ ಚಟ್ಟೋಗ್ರಾಮ ರಾಯಲ್ಸ್ ತಂಡಗಳ ನಡುವಣ ಬಿಪಿಎಲ್ ಪಂದ್ಯವು ವಿಳಂಬವಾಗಿದ್ದು, ಅನಿಶ್ಚಿತತೆ ಮುಂದುವರಿದಿದೆ.
ಈ ಮಧ್ಯೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಬಾಂಗ್ಲಾದೇಶದ ಕ್ರಿಕೆಟಿಗರ ಕಲ್ಯಾಣ ಸಂಘದ (ಸಿಡಬ್ಲ್ಯುಎಬಿ) ಅಧ್ಯಕ್ಷ ಮೊಹಮ್ಮದ್ ಮಿಥುನ್, 'ನಜ್ಮುಲ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಸಿಬಿ ಭರವಸೆ ನೀಡಿದೆ. ಆದರೂ ಆಟಗಾರರು ತಮ್ಮ ನಿರ್ಧಾರದಲ್ಲಿ ಅಚಲವಾಗಿದ್ದಾರೆ' ಎಂದು ಹೇಳಿದ್ದಾರೆ.
ಭದ್ರತಾ ಕಾರಣಗಳನ್ನು ನೀಡಿ ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿತ್ತು. ಈ ಕುರಿತು ಪ್ರಸ್ತಾಪಿಸಿದಾಗ ನಜ್ಮುಲ್, ಆಟಗಾರರ ಸಂಭಾವನೆ ಕುರಿತಾಗಿನ ಕಳವಳಗಳನ್ನು ನಿರಾಕರಿಸಿದ್ದರು.
ಇಲ್ಲಿಯವರೆಗೆ ಒಂದೇ ಒಂದು ಐಸಿಸಿ ಟೂರ್ನಿ ಗೆಲ್ಲುವಲ್ಲಿ ಆಟಗಾರರು ವಿಫಲವಾಗಿದ್ದಾರೆ. ಬಿಸಿಬಿ ನಿರ್ಧಾರವನ್ನು ಆಟಗಾರರು ಸಮರ್ಥಿಸಿಕೊಂಡಿಲ್ಲ. ಹಾಗಾಗಿ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಅವರು ಹೇಳಿದ್ದರು. ಮಾಜಿ ನಾಯಕ ತಮೀಮ್ ಇಕ್ಬಾಲ್ 'ಭಾರತದ ಏಜೆಂಟ್' ಎಂದು ಸಹ ಆರೋಪಿಸಿದ್ದರು. ಇದು ಆಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.
ಏತನ್ಮಧ್ಯೆ ನಜ್ಮುಲ್ ಅವರಿಗೆ ಬಿಸಿಬಿ, ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ಆಟಗಾರರ ಪರವಾಗಿ ಇದ್ದೇವೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.