ಢಾಕಾ: ಭಾರತದಿಂದ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಮರುಪರಿಶೀಲಿಸುವಂತೆ ಐಸಿಸಿ ಮಂಗಳವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ‘ಮನವಿ’ ಮಾಡಿತು. ಆದರೆ ಇದಕ್ಕೆ ಬಗ್ಗದ ಮಂಡಳಿಯು ‘ಭದ್ರತೆಯ ಬಗ್ಗೆ ಕಳವಳ’ವನ್ನು ಪುನರುಚ್ಚರಿಸಿದೆ.
ಬೇಡಿಕೆಯನ್ನು ಪರಿಗಣಿಸಲು ಐಸಿಸಿ ಹಿಂದೇಟು ಹಾಕಿದರೂ, ಪಂದ್ಯ ಸ್ಥಳಾಂತರಿಸಬೇಕೆಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಬಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಸಂಭಾವ್ಯ ಪರಿಹಾರ ಕಂಡುಕೊಳ್ಳಲು ಎರಡೂ ಕಡೆಯಿಂದ (ಬಿಸಿಬಿ–ಐಸಿಸಿ) ಪ್ರಯತ್ನ ಮುಂದುವರಿಯಲಿದೆ ಎಂದೂ ಹೇಳಿದೆ.
ಭದ್ರತಾ ಕಳವಳದ ಕಾರಣ ನೀಡಿ ಭಾರತದಲ್ಲಿ ನಿಗದಿಯಾಗಿರುವ ತನ್ನ ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹಿಸಿ ಬಿಸಿಬಿ ಈಗಾಗಲೇ ಐಸಿಸಿಗೆ ಹಲವು ಪತ್ರಗಳನ್ನು ಬರೆದಿದೆ. ಆದರೆ ಫೆ. 7ರಂದು ಆರಂಭವಾಗುವ ಟಿ20 ವಿಶ್ವಕಪ್‌ಗೆ ಈಗಾಗಲೇ ವೇಳಾಪಟ್ಟಿ ಅಂತಿಮಗೊಂಡಿರುವ ಕಾರಣ ಐಸಿಸಿ ಪಟ್ಟುಸಡಿಲಿಸುವ ಸಾಧ್ಯತೆಯಿಲ್ಲ.
‘ಟೂರ್ನಿಯ ವೇಳಾಪಟ್ಟಿ ಈಗಾಗಲೇ ಅಂತಿಮಗೊಂಡಿದೆ ಎಂಬುದನ್ನು ಐಸಿಸಿ ಒತ್ತಿ ಹೇಳಿದ್ದು, ನಿಲುವನ್ನು ಬದಲಾಯಿಸಲು ಬಿಸಿಬಿಗೆ ಮನವಿ ಮಾಡಿದೆ. ಆದರೆ ಬಿಸಿಬಿ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಸಂಭಾವ್ಯ ಪರಿಹಾರ ಸೂತ್ರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ಮುಂದುವರಿಸಲು ಇತ್ತಂಡಗಳೂ ಒಪ್ಪಿಕೊಂಡಿವೆ’ ಎಂದು ಬಿಸಿಬಿ ಹೇಳಿದೆ.
ಭಾರತದಲ್ಲಿ ಆಡಲು ತೆರಳುವುದು ಭದ್ರತಾದೃಷ್ಟಿಯಿಂದ ತನ್ನ ಆಟಗಾರರಿಗೆ ಸುರಕ್ಷಿತವಲ್ಲ ಎಂದು ಬಿಸಿಬಿ ಹೇಳುತ್ತಿದೆ. ಆದರೆ ಭದ್ರತೆಗೆ ಸಂಬಂಧಿಸಿ ಐಸಿಸಿ ನಡೆಸಿದ ತಜ್ಞರ ಮೌಲ್ಯಮಾಪನದಲ್ಲಿ ಬಾಂಗ್ಲಾ ತಂಡವು ಭಾರತದಲ್ಲಿ ಆಡಿದರೆ ಅಪಾಯದ ಸನ್ನಿವೇಶ ಎದುರಾಗುವ ಸಾಧ್ಯತೆಯಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.