ADVERTISEMENT

ವಿರಾಟ್ ಕೊಹ್ಲಿಗೆ 10 ದಿನ ವಿಶ್ರಾಂತಿ: ಶ್ರೀಲಂಕಾ ವಿರುದ್ಧದ ಟಿ–20 ಸರಣಿಗೂ ಅಲಭ್ಯ

ಪಿಟಿಐ
Published 19 ಫೆಬ್ರುವರಿ 2022, 8:48 IST
Last Updated 19 ಫೆಬ್ರುವರಿ 2022, 8:48 IST
ವಿರಾಟ್ ಕೊಹ್ಲಿ – ಪಿಟಿಐ ಚಿತ್ರ
ವಿರಾಟ್ ಕೊಹ್ಲಿ – ಪಿಟಿಐ ಚಿತ್ರ   

ನವದೆಹಲಿ: ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 10 ದಿನಗಳ ವಿಶ್ರಾಂತಿ ನೀಡಿದೆ.

ಕೊಹ್ಲಿ ಅವರು ಬಯೋಬಬಲ್ ತೊರೆದಿದ್ದು, ಮನೆಗೆ ಮರಳಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಕೋಲ್ಕತ್ತದಲ್ಲಿ ನಡೆಯಲಿರುವ ಕೊನೆಯ ಟ್ವೆಂಟಿ–20 ಪಂದ್ಯಕ್ಕೆ ಲಭ್ಯರಿರುವುದಿಲ್ಲ.

ಶ್ರೀಲಂಕಾ ವಿರುದ್ಧ ಫೆಬ್ರುವರಿ 24ರಂದು ಲಖನೌದಲ್ಲಿ ಆರಂಭವಾಗಲಿರುವ ಟ್ವೆಂಟಿ–20 ಸರಣಿಯಲ್ಲಿಯೂ ಕೊಹ್ಲಿ ತಂಡಕ್ಕೆ ಲಭ್ಯರಿರುವುದಿಲ್ಲ. ಶ್ರೀಲಂಕಾ ವಿರುದ್ಧದ ಸರಣಿಯ ಎರಡು ಪಂದ್ಯಗಳು ಧರ್ಮಶಾಲಾದಲ್ಲಿ ಫೆಬ್ರುವರಿ 26 ಹಾಗೂ 27ರಂದು ನಡೆಯಲಿವೆ.

ADVERTISEMENT

‘ಹೌದು, ಈಗಾಗಲೇ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದುಕೊಂಡಿರುವ ಕಾರಣ ಕೊಹ್ಲಿ ಶನಿವಾರ ಬೆಳಿಗ್ಗೆ ಮನೆಗೆ ತೆರಳಿದ್ದಾರೆ. ಆಟಗಾರರ ಕೆಲಸದ ಒತ್ತಡ ಮತ್ತು ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ಬಿಸಿಸಿಐಯು ಸರದಿ ಪ್ರಕಾರ ಬಯೋಬಬಲ್‌ನಿಂದ ವಿಶ್ರಾಂತಿ ನೀಡುತ್ತಿದೆ’ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟ್ವೆಂಟಿ–20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಇಂದು ಸಂಜೆ ಪ್ರಕಟಿಸುವ ನಿರೀಕ್ಷೆ ಇದೆ.

ಕಳೆದ ಹಲವು ಸಮಯದಿಂದ ಬ್ಯಾಟಿಂಗ್‌ನಲ್ಲಿ ಉತ್ತಮ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಕೊಹ್ಲಿ ಅವರು 41 ಎಸೆತಗಳಲ್ಲಿ 52 ರನ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಅವರ ಇನ್ನಿಂಗ್ಸ್‌ 7 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು.

ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ನಡೆದಿದದ್ದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿರುವ ಭಾರತ ತಂಡ, ಶುಕ್ರವಾರ ರಾತ್ರಿ ಕೋಲ್ಕತ್ತದಲ್ಲಿ ನಡೆದ ಎರಡನೇ ಟ್ವೆಂಟಿ–20 ಪಂದ್ಯವನ್ನು ಎಂಟು ರನ್‌ಗಳಿಂದ ಜಯಿಸಿ ಸರಣಿಯನ್ನು 2–0 ಅಂತರದಿಂದ ವಶಪಡಿಸಿಕೊಂಡಿದೆ. ಸರಣಿಯ ಕೊನೆಯ ಪಂದ್ಯ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.