ADVERTISEMENT

Bengaluru Stampede | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂತಕದ ಛಾಯೆ

ಮಡುಗಟ್ಟಿದ ಮೌನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
<div class="paragraphs"><p>ಬೆಂಗಳೂರಿನಲ್ಲಿ ಬುಧವಾರ ನಡೆದ ಐಪಿಎಲ್‌&nbsp; ಚಾಂಪಿಯನ್ ತಂಡವಾದ ಆರ್‌ಸಿಬಿ ಆಟಗಾರರ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಅನಾಹುತ ಹಿನ್ನೆಲೆಯಲ್ಲಿ&nbsp; ಗುರುವಾರವೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು&nbsp; </p></div>

ಬೆಂಗಳೂರಿನಲ್ಲಿ ಬುಧವಾರ ನಡೆದ ಐಪಿಎಲ್‌  ಚಾಂಪಿಯನ್ ತಂಡವಾದ ಆರ್‌ಸಿಬಿ ಆಟಗಾರರ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಅನಾಹುತ ಹಿನ್ನೆಲೆಯಲ್ಲಿ  ಗುರುವಾರವೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು 

   

-ಪ್ರಜಾವಾಣಿ ಚಿತ್ರ/ ರಂಜು ಪಿ

ಬೆಂಗಳೂರು: ಸದಾ ಕ್ರಿಕೆಟ್ ಕುರಿತ ಚಟುವಟಿಕೆಗಳ ತಾಣವಾಗಿರುತ್ತಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣ ಗುರುವಾರ ಅಕ್ಷರಶಃ ಸೂತಕದ ಮನೆಯಂತಾಗಿತ್ತು. ಎಲ್ಲೆಲ್ಲೂ ನೀರವ ಮೌನ.

ADVERTISEMENT

ಆಡಳಿತ ಕಚೇರಿಯಲ್ಲಿದ್ದ ಬೆರಳೆಣಿಕೆಯಷ್ಟು ಸಿಬ್ಬಂದಿಯ ಮುಖಗಳಲ್ಲಿ ಆತಂಕದ ಛಾಯೆ. ಕ್ಯಾಂಟಿನ್, ಜ್ಯೂಸ್ ಕಾರ್ನರ್, ಕ್ಲಬ್‌ ಹೌಸ್, ಈಜುಕೊಳ, ರೆಸ್ಟೊರೆಂಟ್‌ಳು ಭಣಗುಡುತ್ತಿದ್ದವು. ಸಂಸ್ಥೆಯ ಪದಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳಿಂದ ದೂರ ದೂರ ಹೋಗುವ ಪ್ರಯತ್ನದಲ್ಲಿದ್ದರು. 

ಕ್ರೀಡಾಂಗಣದ ಸುತ್ತಮುತ್ತ ಹರಿದುಬಿದ್ದ ಬ್ಯಾನರ್‌ಗಳು, ಚೆಲ್ಲಾಪಿಲ್ಲಿಯಾಗಿದ್ದ ಬಟ್ಟೆಗಳು, ಚಪ್ಪಲಿ, ಬೂಟುಗಳ ರಾಶಿಯನ್ನು ವಿಲೇವಾರಿ ಮಾಡುವ ಕೆಲಸವೂ ನಡೆಯುತ್ತಿತ್ತು.  

ಮೈದಾನದ ಹೊರಗೆ ಮೀಸಲು ಪೊಲೀಸ್ ಪಡೆಯ ಬಸ್‌ಗಳು ಸಾಲುಗಟ್ಟಿದ್ದವು. ಒಳಗೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಒದಗಿಸಿದ್ದರು. ಕ್ಯಾಂಟಿನ್‌ಗಳ ಕಾರ್ಮಿಕರು, ಭದ್ರತಾ ಸಿಬ್ಬಂದಿಯು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ನಿಂತು ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತಕ್ಕೆ 11 ಜನರು ಮೃತರಾದ ಘಟನೆಯ  ‘ಭಯಾನಕ ದೃಶ್ಯಾವಳಿ’ಗಳ ಬಗ್ಗೆ ಮಾತನಾಡುತ್ತಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆಲುವಿನ ಸಂಭ್ರಮೋತ್ಸವ ವೀಕ್ಷಿಸಲು ಬಂದವರು ಸಾವನ್ನಪ್ಪಿದ್ದರು. 

‘ಮೂರ್ನಾಲ್ಕು ಸಾವಿರ ಜನರು ಗೇಟ್‌ ಕಿತ್ತುಹಾಕಲು ‍ಪ್ರಯತ್ನ ಮಾಡುತ್ತಿದ್ದರು. ಅವರನ್ನು ತಡೆಯಲು ಅಲ್ಲಿ ಇದ್ದದ್ದು ಕೇವಲ 40–50 ಜನ ಭದ್ರತಾ ಸಿಬ್ಬಂದಿ ಮಾತ್ರ.  ಮೈಕ್‌ನಲ್ಲಿ ಎಷ್ಟೇ ಕೂಗಿದರೂ ಜನರ ಕಿವಿಗೆ ಬೀಳುತ್ತಿರಲಿಲ್ಲ. ಕ್ರೀಡಾಂಗಣ ಎದುರಿನ ರಸ್ತೆ ತುಂಬ ಮತ್ತು ಇಕ್ಕೆಲಗಳಲ್ಲಿ ಜನವೋ ಜನ. ಕಂಪೌಂಡ್, ಬ್ಯಾರಿಕೇಡ್‌ಗಳನ್ನೂ ದಾಟಿ ಬರುವ ಪ್ರಯತ್ನ ಮಾಡುತ್ತಿದ್ದರು. ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಪಕ್ಕದ ಗೇಟ್‌ ಸಮೀಪ ವಿಪರೀತ ಜನದಟ್ಟಣೆ ಇತ್ತು. ಅಲ್ಲಿ ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಹೊರತರುವುದೂ ಕಷ್ಟವಾಗಿತ್ತು. ಆದ್ದರಿಂದ ಗಾಯಗೊಂಡವರನ್ನು ಪೊಲೀಸ್ ಸಿಬ್ಬಂದಿಯು ಹೊತ್ತುಕೊಂಡು ಕ್ರೀಡಾಂಣದೊಳಗಿನ ಕಟ್ಟಡದ ಮೂಲಕ ಬಂದು 12ನೇ ಗೇಟ್‌ ಸಮೀಪದಲ್ಲಿದ್ದ ಅಂಬುಲೇನ್ಸ್‌, ವಾಹನಗಳಿಗೆ ಹಾಕಿದರು’ ಎಂದು ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು. 

‘ಹಲವು ವರ್ಷಗಳಿಂದ  ಇಲ್ಲಿ ಇದ್ದೇನೆ.  ಹಲವಾರು ಅಂತರರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳು ಇಲ್ಲಿ ನಡೆದಿವೆ. ಆಗಲೂ ಸಾವಿರಾರು ಜನರು ಇಲ್ಲಿ ಸೇರುತ್ತಾರೆ. ಆದರೆ ಈ ತರಹದ ದುರ್ಘಟನೆಗಳಾಗಿರಲಿಲ್ಲ. ನಿನ್ನೆಯ (ಬುಧವಾರ) ಘಟನೆ ಈಗಲೂ ನನಗೆ ಭಯ ಮೂಡಿಸುತ್ತಿದೆ’ ಎಂದೂ ಅವರು ಹೇಳಿದರು. 

ಕೆಎಸ್‌ಸಿಎ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇತರ ಪದಾಧಿಕಾರಿಗಳಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.  

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಕಂಪೌಂಡ್‌ ಗ್ರಿಲ್ ಮೇಲೆ ನೇತಾಡುತ್ತಿರುವ ಬಟ್ಟೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.