ADVERTISEMENT

ರಿಷಭ್ ಇದಿದ್ದರೆ ಆಸ್ಟ್ರೇಲಿಯಾ ಆಟಗಾರರಿಗೆ ನಿದ್ದೆಯೇ ಬರುತ್ತಿರಲಿಲ್ಲ: ಚಾಪೆಲ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 1:48 IST
Last Updated 7 ಫೆಬ್ರುವರಿ 2023, 1:48 IST
ಇಯಾನ್ ಚಾಪೆಲ್
ಇಯಾನ್ ಚಾಪೆಲ್   

ಬೆಂಗಳೂರು: ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಬಾರ್ಡರ್‌ –ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿ ಇದೇ ವಾರ ಆರಂಭವಾಗಲಿದೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿಕೆಟ್‌ಕೀಪರ್ ರಿಷಭ್ ಪಂತ್ ಈ ಸರಣಿಯಲ್ಲಿ ಆಡುವುದಿಲ್ಲ. ಇದರಿಂದಾಗಿ ಭಾರತ ತಂಡಕ್ಕೆ ಅವರ ಕೊರಗು ಕಾಡಲಿದೆ ಎಂದು ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

‘ಈ ಹಿಂದೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ಗಳಲ್ಲ ಅವರ ಆಟ ಅಮೋಘವಾಗಿತ್ತು. ಬಹುಶಃ ಅವರು ಈ ಸರಣಿಯಲ್ಲಿ ಇದ್ದಿದ್ದರೆ ಆಸ್ಟ್ರೇಲಿಯಾ ಆಟಗಾರರಿಗೆ ನಿದ್ದೆಯೇ ಬರುತ್ತಿರಲಿಲ್ಲ. ಏಕೆಂದರೆ, ರಿಷಭ್ ಒಮ್ಮೆ ಕ್ರೀಸ್‌ನಲ್ಲಿ ಹೊಂದಿಕೊಂಡರೆ ನಿಯಂತ್ರಿಸುವುದು ಕಷ್ಟ. ಪಂದ್ಯದ ದಿಕ್ಕನ್ನೇ ಬದಲಿಸಿಬಿಡುತ್ತಾರೆ. ಬಹಳ ದಿಟ್ಟ ಹೋರಾಟಗಾರ ಅವರು. ಅವರಿಲ್ಲದಿದ್ದರೂ ಭಾರತ ತಂಡವೇ ಫೆವರಿಟ್ ಆಗಿದೆ’ ಎಂದಿದ್ದಾರೆ.

ವೀಕ್ಷಕ ವಿವರಣೆಗಾರ, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರಾದ ಚಾಪೆಲ್, ಸರಣಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಸೋಮವಾರ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ (ವರ್ಚುವಲ್) ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮತ್ತೊಬ್ಬ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಕೂಡ ಇದ್ದರು.

ADVERTISEMENT

‘ಭಾರತ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು. ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ತೃತೀಯ ಸ್ಪಿನ್ನರ್ ಆಗಬೇಕು. ಜಡೇಜ ಮತ್ತು ಅಕ್ಷರ್ ಪಟೇಲ್ ಅವರ ಬೌಲಿಂಗ್ ಬಹುತೇಕ ಒಂದೇ ತೆರನಾಗಿದೆ. ಆದರೆ ಕುಲದೀಪ್ ವಿಭಿನ್ನ ಶೈಲಿ ಮತ್ತು ಸ್ಪಿನ್ ಪ್ರಯೋಗ ಮಾಡುತ್ತಾರೆ. ಅವರು ತಂಡಕ್ಕೆ ಉತ್ತಮ ಕಾಣಿಕೆ ನೀಡಬಲ್ಲರು’ ಎಂದು ಶಾಸ್ತ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.