ರೋಹಿತ್ ಶರ್ಮಾ
ಅಡಿಲೇಡ್: ಎಂದಿನಂತೆ ಆಕ್ರಮಣಕಾರಿ ಶೈಲಿಯ ಆಟ ಆಡುವಂತಾಗಲು ನಾಯಕ ರೋಹಿತ್ ಶರ್ಮಾ ಅವರು ಮತ್ತೆ ಆರಂಭ ಆಟಗಾರನ ಸ್ಥಾನಕ್ಕೆ ಮರಳಬೇಕು ಎಂದು ಭಾರತ ತಂಡದ ಮಾಜಿ ಆಟಗಾರರಾದ ಸುನೀಲ್ ಗಾವಸ್ಕರ್ ಮತ್ತು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.
ಮೊದಲ ಟೆಸ್ಟ್ ತಪ್ಪಿಸಿಕೊಂಡಿದ್ದ ರೋಹಿತ್, ಅಡಿಲೇಡ್‌ನಲ್ಲಿ ನಡೆದ ಪಿಂಕ್‌ಬಾಲ್ ಟೆಸ್ಟ್ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಈ ಕ್ರಮಾಂಕದಲ್ಲಿ ಅವರು ಸಪ್ಪೆಯಾಗಿ ಕಂಡರು. ಮೊದಲ ಟೆಸ್ಟ್‌ನಲ್ಲಿ ಆರಂಭಿಕನಾಗಿ ಉತ್ತಮವಾಗಿ ಆಡಿದ ಕೆ.ಎಲ್.ರಾಹುಲ್ ಅವರಿಗೆ ಮತ್ತೆ ಅದೇ ಸ್ಥಾನದಲ್ಲಿ ಆಡಲು ಬಿಟ್ಟಿದ್ದರು.
ಆದರೆ ಆರನೇ ಕ್ರಮಾಂಕದಲ್ಲಿ ಆಡಿದ ಭಾರತ ನಾಯಕ ಕೇವಲ 3 ಮತ್ತು 6 ರನ್ ಗಳಿಸಿ ವಿಫಲರಾಗಿದ್ದರು. ಭಾರತ ಆ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸೋತಿತ್ತು.
‘ಈ ಕಾರಣದಿಂದಲೇ ಅವರು ಆರಂಭದಲ್ಲಿ ಆಡುವುದನ್ನು ಬಯಸುತ್ತೇನೆ. ಅವರು ಅಲ್ಲಿ ಆಕ್ರಮಣಕಾರಿಯಾಗಿ ಮತ್ತು ಒತ್ತಡವಿಲ್ಲದೇ ಆಡಬಹುದು. ಎರಡನೇ ಪಂದ್ಯದಲ್ಲಿ ಅವರ ಹಾವಭಾವ ನೋಡಿದರೆ ಅವರು ಕಳಾಹೀನರಾಗಿದ್ದಂತೆ ಕಂಡರು’ ಎಂದು ಶಾಸ್ತ್ರಿ ‘ಸ್ಟಾರ್ ಸ್ಪೋರ್ಟ್ಸ್’ಗೆ ತಿಳಿಸಿದ್ದಾರೆ.
‘ಪರ್ತ್ ಟೆಸ್ಟ್ ಪಂದ್ಯದ ಸಂಯೋಜನೆ ಬದಲಿಸಲು ಇಷ್ಟಪಡುವುದಿಲ್ಲ’ ಎಂದಿದ್ದ ರೋಹಿತ್, ಕೆಳ ಕ್ರಮಾಂಕದಲ್ಲಿ ಆಡುವುದು ವೈಯಕ್ತಿಕವಾಗಿ ಕಠಿಣ ನಿರ್ಧಾರ ಎಂದೂ ಹೇಳಿದ್ದರು. 2018ರ ನಂತರ ಮೊದಲ ಬಾರಿ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು.
‘ರೋಹಿತ್ ಎಂದಿನಂತೆ ಆರಂಭ ಆಟಗಾರನ ಸ್ಥಾನದಲ್ಲಿ ಆಡಬೇಕು. ರಾಹುಲ್ ಆರಂಭ ಆಟಗಾರನಾಗಿ ಆಡಲು ಕಾರಣ ರೋಹಿತ್ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದು ಎಂಬುದನ್ನು ನೆನಪಿನಲ್ಲಿಡಬೇಕು’ ಎಂದು ಸುನೀಲ್ ಗಾವಸ್ಕರ್ ‘ಸ್ಪೋರ್ಟ್ ತಕ್’ನಲ್ಲಿ ತಿಳಿಸಿದ್ದಾರೆ.
‘ರಾಹುಲ್ ಎರಡನೇ ಟೆಸ್ಟ್‌ನಲ್ಲಿ ಹೆಚ್ಚಿನ ರನ್ ಗಳಿಸದ ಕಾರಣ ಅವರು 5 ಅಥವಾ 6ನೇ ಕ್ರಮಾಂಕಕ್ಕೆ ಹಿಂತಿರುಗಬೇಕು. ರೋಹಿತ್ ಇನಿಂಗ್ಸ್ ಆರಂಭಿಸಬೇಕು. ಆರಂಭದಲ್ಲಿ ಬೇಗ ರನ್ ಗಳಿಸುತ್ತ ಹೋದರೆ ಅವರು (ರೋಹಿತ್) ಭರ್ಜರಿ ಶತಕ ಗಳಿಸಲೂ ಶಕ್ತರು’ ಎಂದು ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.