ADVERTISEMENT

ಶತಕಗಳ ಶತಕ | ಸಚಿನ್ ದಾಖಲೆ ಮುರಿಯಬಲ್ಲರೇ ವಿರಾಟ್?: ಆಸಿಸ್ ವೇಗಿ ಲೀ ಹೇಳಿದ್ದೇನು?

ಏಜೆನ್ಸೀಸ್
Published 25 ಏಪ್ರಿಲ್ 2020, 9:40 IST
Last Updated 25 ಏಪ್ರಿಲ್ 2020, 9:40 IST
   

ನವದೆಹಲಿ: ಬ್ಯಾಟಿಂಗ್‌ ದಿಗ್ಗಜ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿರುವ ನೂರು ಶತಗಳ ದಾಖಲೆಯನ್ನು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮುರಿಯಬಲ್ಲರೇ? ಎಂಬುದರ ಬಗ್ಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್‌ ಲೀ ಮಾತನಾಡಿದ್ದಾರೆ.

ಸಚಿನ್‌ ಬ್ಯಾಟ್‌ನಿಂದ ಏಕದಿನ ಕ್ರಿಕೆಟ್‌ನಲ್ಲಿ 49 ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ 51 ಶತಕ ಮೂಡಿಬಂದಿವೆ. ಅದಕ್ಕಾಗಿ ಅವರು 664 ಪಂದ್ಯಗಳ 782 ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ. 415‬ ಪಂದ್ಯಗಳ 460 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ ಈಗಾಗಲೇ 70 ಶತಕ ಬಾರಿಸಿದ್ದಾರೆ. ಏಕದಿನ ಮಾದರಿಯಲ್ಲಿ 43 ಮತ್ತು ಟೆಸ್ಟ್‌ನಲ್ಲಿ 27 ಶತಕ ಸಿಡಿಸಿದ್ದಾರೆ. ಹೀಗಾಗಿ ಸಚಿನ್ ದಾಖಲೆ ಮುರಿಯಲು ಕೊಹ್ಲಿಗೆ ಬೇಕಿರುವುದು 30 ಶತಕಗಳು ಮಾತ್ರ.

ಈ ಬಗ್ಗೆ ಕ್ರೀಡಾ ವಾಹಿನಿಯೊಂದರ ಜೊತೆ ಮಾತನಾಡಿರುವ ಬ್ರೆಟ್‌ ಲೀ, ‘ನಾವಿಲ್ಲಿ ಅಸಾಧಾರಣಸಂಖ್ಯೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗಾಗಿ ನೀವು ಈ ಸಾಧನೆ ಮಾಡಲು ಕೊಹ್ಲಿಗೆ 7–8 ವರ್ಷ ಬೇಕಾಗಬಹುದು ಎಂದಿದ್ದೀರಿ. ಸದ್ಯ ಕೊಹ್ಲಿ ಸಾಗುತ್ತಿರುವ ರೀತಿಯನ್ನು ನೋಡಿದರೆ ಖಂಡಿತಾ ಅವರು ಅದನ್ನು ಸಾಧಿಸಲಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಈ ದಾಖಲೆ ಬರೆಯಲು ಕೊಹ್ಲಿಗೆ ಮೂರು ಅಂಶಗಳು ಮುಖ್ಯವಾಗಲಿವೆ ಎಂದಿರುವ ಲೀ,ಅವುಗಳ ಬಗ್ಗೆಯೂ ವಿವರಿಸಿದ್ದಾರೆ. ‘ಮೊದಲನೆಯದಾಗಿ ಒಬ್ಬ ಬ್ಯಾಟ್ಸ್‌ಮನ್‌ ಆಗಿ ಪ್ರತಿಭೆ ಹೊಂದಿರಬೇಕು. ಅದು ಕೊಹ್ಲಿಗೆ ಖಂಡಿತಾ ಇದೆ. ಎರಡನೆಯದು ಫಿಟ್‌ನೆಸ್‌. ಕೊಹ್ಲಿ ಫಿಟ್‌ ಆಗಿದ್ದಾರೆ. ಅಂತಿಮವಾಗಿ ಮಾನಸಿಕ ಆರೋಗ್ಯ ತುಂಬಾ ಮುಖ್ಯ. 30 ವರ್ಷದ ನಂತರ ಮನೆಯಿಂದ, ಹೆಂಡತಿ ಮತ್ತು ಮಕ್ಕಳಿದ್ದರೆ ಅವರನ್ನು ಬಿಟ್ಟು ದೂರ ಪ್ರಯಾಣ ನಡೆಸಬೇಕು. ಈ ಸವಾಲುಗಳನ್ನು ಮೀರಲುಮಾನಸಿಕ ಆರೋಗ್ಯ ಉತ್ತಮವಾಗಿರಬೇಕು’ ಎಂದು ಹೇಳಿದ್ದಾರೆ.

‘ಕೊಹ್ಲಿ ತನ್ನ ಪ್ರತಿಭೆಯ ಮೂಲಕ ಈ ಮಲುಗಲ್ಲನ್ನು ಸುಲಭವಾಗಿ ಮುಟ್ಟಬಲ್ಲರು. ಅದು ಅವರ ಮಾನಸಿಕ ಸಾಮರ್ಥ್ಯವನ್ನು ಅವಲಂಬಿಸಿದೆ. ಕೊಹ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದರೆ, ಖಂಡಿತಾ ಸಚಿನ್‌ ಸಾಧನೆಯನ್ನು ಮೀರಲು ಸಾಧ್ಯ ಎಂದು ನಂಬುತ್ತೇನೆ’ಎಂದಿದ್ದಾರೆ.

ಆದರೂ ಸಚಿನ್‌ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭವಲ್ಲ ಎಂದು ಅಭಿಪ್ರಾಯಪಟ್ಟಿರುವ ಲೀ, ‘ಸಚಿನ್‌ ದಾಖಲೆಯನ್ನು ಯಾರಾದರೂ ಮುರಿಯಬಲ್ಲರು ಎಂದು ನೀವು ಹೇಗೆ ಹೇಳಬಲ್ಲಿರಿ?ಆತ ದೇವರು. ದೇವರಿಗಿಂತಲೂ ಉತ್ತಮವಾದುದ್ದನ್ನು ಮಾಡಲು ಯಾರಿಗಾದರೂ ಸಾಧ್ಯವೇ? ಕಾದು ನೋಡೋಣ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.