ADVERTISEMENT

ICC Test Rankings: ಅಗ್ರಸ್ಥಾನಕ್ಕೇರಿದ ಬೂಮ್ರಾ, ಜೈಸ್ವಾಲ್ ನಂ.2

ಪಿಟಿಐ
Published 27 ನವೆಂಬರ್ 2024, 9:31 IST
Last Updated 27 ನವೆಂಬರ್ 2024, 9:31 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ, ಯಶಸ್ವಿ ಜೈಸ್ವಾಲ್</p></div>

ಜಸ್‌ಪ್ರೀತ್ ಬೂಮ್ರಾ, ಯಶಸ್ವಿ ಜೈಸ್ವಾಲ್

   

(ಚಿತ್ರ ಕೃಪೆ: X/@BCCI)

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಅಗ್ರಸ್ಥಾನಕ್ಕೇರಿದ್ದಾರೆ.

ADVERTISEMENT

ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಅವರನ್ನು ಹಿಂದಿಕ್ಕಿರುವ ಬೂಮ್ರಾ ಎರಡು ಸ್ಥಾನಗಳ ಬಡ್ತಿ ಪಡೆದು ಅಗ್ರಸ್ಥಾನ ಅಲಂಕರಿಸಿದ್ದಾರೆ. ಬೂಮ್ರಾ ತಮ್ಮ ವೃತ್ತಿ ಜೀವನದಲ್ಲೇ ಗರಿಷ್ಠ ರೇಟಿಂಗ್ ಪಾಯಿಂಟ್ (883) ಗಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಐದರ ಗೊಂಚಲು ಸೇರಿದಂತೆ ಒಟ್ಟು ಎಂಟು ವಿಕೆಟ್‌ಗಳನ್ನು ಬೂಮ್ರಾ ಕಬಳಿಸಿದ್ದರು.

ಅಗ್ರ 10ರ ಪೈಕಿ ರವಿಚಂದ್ರನ್ ಅಶ್ವಿನ್ ಒಂದು ಸ್ಥಾನ ಬಡ್ತಿ ಪಡೆದು ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಮೊಹಮ್ಮದ್ ಸಿರಾಜ್ ಮೂರು ಸ್ಥಾನಗಳ ಏರಿಕೆ ಕಂಡು, 25ನೇ ಸ್ಥಾನ ಗಳಿಸಿದ್ದಾರೆ. ಇದೇ ಪಂದ್ಯದಲ್ಲಿ ಸಿರಾಜ್ ಒಟ್ಟು ಐದು ವಿಕೆಟ್ ಗಳಿಸಿದ್ದರು.

ಜೈಸ್ವಾಲ್ ನಂ.2

ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಯುವ ಪ್ರತಿಭಾವಂತ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಎರಡು ಸ್ಥಾನಗಳ ನೆಗೆತ ಕಂಡಿದ್ದು, ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.

ಬ್ಯಾಟರ್‌ಗಳ ಸಾಲಿನಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಅಗ್ರಸ್ಥಾನ (903) ಕಾಯ್ದುಕೊಂಡಿದ್ದು, ಜೈಸ್ವಾಲ್ 825 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಜೈಸ್ವಾಲ್ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಶತಕದ (161) ಸಾಧನೆ ಮಾಡಿದ್ದರು. ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು.

ಪರ್ತ್ ಪಂದ್ಯದಲ್ಲೇ ಟೆಸ್ಟ್ ವೃತ್ತಿ ಜೀವನದ 30ನೇ ಶತಕ ಗಳಿಸಿರುವ ವಿರಾಟ್ ಕೊಹ್ಲಿ, ಒಂಬತ್ತು ಸ್ಥಾನಗಳ ಬಡ್ತಿ ಪಡೆದು 13ನೇ ಸ್ಥಾನಕ್ಕೆ ತಲುಪಿದ್ದಾರೆ. ಮತ್ತೊಂದೆಡೆ ರಿಷಭ್ ಪಂತ್ ಆರನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಪರ್ತ್ ಟೆಸ್ಟ್ ಪಂದ್ಯದಲ್ಲಿ 295 ರನ್ ಅಂತರದ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ, ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ (423) ಹಾಗೂ ರವಿಚಂದ್ರನ್ ಅಶ್ವಿನ್ (290) ಮೊದಲೆರಡು ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ.

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಟಾಪ್ 10 ಬೌಲರ್‌ಗಳ ಪಟ್ಟಿ:

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಟಾಪ್ 10 ಬ್ಯಾಟರ್‌ಗಳ ಪಟ್ಟಿ:

ಐಸಿಸಿ ಟೆಸ್ಟ್ ತಂಡಗಳ ರ‍್ಯಾಂಕಿಂಗ್‌: ಆಸ್ಟ್ರೇಲಿಯಾ ಅಗ್ರ, ಭಾರತ ನಂ.2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.