ಜಸ್‌ಪ್ರೀತ್ ಬೂಮ್ರಾ
ಲೀಡ್ಸ್: ‘ಕಾರ್ಯಭಾರ ನಿರ್ವಹಣೆಯ ಭಾಗವಾಗಿ ಐಪಿಎಲ್ ವೇಳೆಯಲ್ಲೇ ಭಾರತ ಟೆಸ್ಟ್ ತಂಡದ ನಾಯಕತ್ವ ಬೇಡವೆಂದು ಹೇಳಿದ್ದೆ’ ಎಂದು ಭಾರತ ತಂಡದ ವೇಗದ ಬೌಲಿಂಗ್ ತಾರೆ ಜಸ್‌ಪ್ರೀತ್ ಬೂಮ್ರಾ ಬಹಿರಂಗಪಡಿಸಿದ್ದಾರೆ. ನಾಯಕತ್ವದ ಕರ್ತವ್ಯಕ್ಕಿಂತ ಬೌಲಿಂಗ್ ಹೊಣೆ ವಹಿಸುವುದಕ್ಕೆ ಆದ್ಯತೆ ನೀಡುವ ತಮ್ಮ ಇಚ್ಛೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.
ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಚಾನೆಲ್‌ನಲ್ಲಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್– ಬ್ಯಾಟರ್ ದಿನೇಶ್ ಕಾರ್ತಿಕ್ ಅವರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಬೂಮ್ರಾ, ನಾಯಕತ್ವದ ಜವಾಬ್ದಾರಿ ನಿರಾಕರಿಸಿರುವ ಹಿಂದಿನ ನಿರ್ಧಾರಕ್ಕೆ ವಿವರಣೆ ನೀಡಿದ್ದಾರೆ.
‘ಇದರ ಹಿಂದೆ ದೊಡ್ಡ ಕಥೆಯೇನೂ ಇಲ್ಲ. ರೋಹಿತ್ ಮತ್ತು ವಿರಾಟ್ ಕೊಹ್ಲಿ ನಿವೃತ್ತರಾಗುವ ಮೊದಲು, ಐಪಿಎಲ್ ನಡೆಯುತ್ತಿದ್ದ ವೇಳೆಯೇ ನಾನು ಬಿಸಿಸಿಐ ಜೊತೆ ಮಾತನಾಡಿದ್ದೆ. ಐದು ಟೆಸ್ಟ್‌ಗಳ ಸರಣಿಗೆ ಪೂರ್ವಭಾವಿಯಾಗಿ ಕಾರ್ಯಭಾರದ ಬಗ್ಗೆ ಚರ್ಚಿಸಿದ್ದೆ’ ಎಂದು ಬೂಮ್ರಾ ಹೇಳಿದ್ದಾರೆ.
‘ನನ್ನ ಬೆನ್ನು ನೋವನ್ನು ನಿರ್ವಹಣೆ ಮಾಡುತ್ತಿದ್ದವರ ಜೊತೆಗೆ ಮಾತನಾಡಿದ್ದೆ. ಸರ್ಜನ್ ಜೊತೆಗೂ ಮಾತನಾಡಿದ್ದೆ. ಅವರು ಕಾರ್ಯದೊತ್ತಡ ನಿರ್ವಹಣೆಗೆ ಸಂಬಂಧಿಸಿ ನಾನು ಯಾವ ರೀತಿ ಇರಬೇಕು ಎಂದು ತಪ್ಪದೇ ಸಲಹೆ ನೀಡುತ್ತಿದ್ದರು’ ಎಂದಿದ್ದಾರೆ.
‘ಈ ಎಲ್ಲಾ ಸಮಾಲೋಚನೆಯ ನಂತರ ನಾನು ಒತ್ತಡರಹಿತವಾಗಿ ಇರಬೇಕೆಂಬ ಜಾಣ್ಮೆಯ ನಿರ್ಧಾರಕ್ಕೆ ಬಂದೆ. ನಂತರ ಬಿಸಿಸಿಐಗೆ ಕರೆ ಮಾಡಿ, ನಾಯಕತ್ವದ ಹೊಣೆಯಲ್ಲಿ ನನ್ನನ್ನು ಕಾಣಲು ಬಯಸುವುದಿಲ್ಲ. ಏಕೆಂದರೆ ಐದು ಟೆಸ್ಟ್‌ಗಳ ಸರಣಿಯ ಎಲ್ಲ ಪಂದ್ಯಗಳನ್ನು ಆಡಲು ನನಗೆ ಆಗದೇಹೋಗಬಹುದು ಎಂದು ತಿಳಿಸಿದ್ದೆ’ ಎಂದು ದೇಶದ ಅಗ್ರಮಾನ್ಯ ಬೌಲರ್ ಹೇಳಿದ್ದಾರೆ.
ರೋಹಿತ್ ನಿವೃತ್ತಿಯ ನಂತರ ಮತ್ತು ಬೂಮ್ರಾ ರೇಸ್‌ನಿಂದ ಹಿಂದೆ ಸರಿದ ಕಾರಣ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೆಸ್ಟ್ ತಂಡಕ್ಕೆ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಿತು. ಇದೇ 20ರಂದು ಆರಂಭವಾಗುವ ಐದು ಟೆಸ್ಟ್‌ಗಳ ಇಂಗ್ಲೆಂಡ್ ಸರಣಿ ಅವರ ಪಾಲಿಗೆ ನಾಯಕನಾಗಿ ಮೊದಲ ಸವಾಲು ಆಗಿದೆ.
‘ನಾಯಕತ್ವದ ಹೊಣೆಗೆ ಬಿಸಿಸಿಐ ನನ್ನ ಕಡೆ ಮುಖಮಾಡಿತ್ತು. ಆದರೆ ನಾನು ಬೇಡವೆಂದೆ. ತಂಡದ ಹಿತದೃಷ್ಟಿಯಿಂದಲೂ ಅದು ಉಚಿತವಾಗಿರಲಿಲ್ಲ. ಐದು ಟೆಸ್ಟ್‌ಗಳ ಸರಣಿಯ ಮೂರು ಟೆಸ್ಟ್‌ಗಳಲ್ಲಿ ಒಬ್ಬರು, ಉಳಿದ ಎರಡು ಪಂದ್ಯಗಳಿಗೆ ಒಬ್ಬರು ನೇತೃತ್ವ ವಹಿಸುವುದು ಸರಿಯೆನಿಸುವುದಿಲ್ಲ’ ಎಂದಿದ್ದಾರೆ.
‘ನಾಯಕತ್ವ ಒಂದು ಹುದ್ದೆ. ನಾಯಕರಾಗುವವರು ತಂಡದಲ್ಲಿ ಸದಾ ಇರುತ್ತಾರೆ. ನಾನು ಈಗ ಎಚ್ಚರಿಕೆ ವಹಿಸದೇ ಹೋದರೆ, ಭವಿಷ್ಯದಲ್ಲಿ ಏನಾಗಬಹುದು ಎಂದು ಹೇಳಲಾರೆ. ಈ ಮಾದರಿಯ ಕ್ರಿಕೆಟ್‌ನಿಂದ ಅರ್ಧದಲ್ಲೇ ಹೊರಹೋಗುವಂತಹ ಪರಿಸ್ಥಿತಿ ತಂದುಕೊಳ್ಳಲು ನಾನು ಬಯಸುವುದಿಲ್ಲ’ ಎಂದು ಬೂಮ್ರಾ ಎಚ್ಚರಿಕೆಯ ಮಾತನ್ನಾಡಿದ್ದಾರೆ.
ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವ ಎಂದು ಒಪ್ಪಿಕೊಂಡಿರುವ 31 ವರ್ಷ ವಯಸ್ಸಿನ ಬೂಮ್ರಾ, ಆದರೆ ನಾಯಕತ್ವಕ್ಕಿತ ಈ ಆಟವನ್ನು ಹೆಚ್ಚು ಪ್ರೀತಿಸುವುದಾಗಿಯೂ ತಿಳಿಸಿದ್ದಾರೆ.
‘ನಾಯಕತ್ವ ಎಂದರೆ ಬಹಳ ಹೆಚ್ಚಿನದು. ಅದಕ್ಕೆ ನಾನೂ ಪರಿಶ್ರಮ ಪಟ್ಟಿದ್ದೆ. ಆದರೆ ಭವಿಷ್ಯವನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ಭಾರತ ತಂಡಕ್ಕೆ ಕ್ರಿಕೆಟರ್ ಆಗಿ ಹೆಚ್ಚಿನ ಕೊಡುಗೆ ನೀಡಲು ಬಯಸಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಮೂರು ಪಂದ್ಯ ಆಡಲು ಒಲವು:
ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಸೇರಿದಂತೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಡೇಪಕ್ಷ ಮೂರು ಪಂದ್ಯಗಳನ್ನು ಆಡಲು ಬೂಮ್ರಾ ಯೋಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.