ADVERTISEMENT

ಬೂಮ್ರಾ ಬೆನ್ನು ಮುರಿದು ಹೋಗಲಿದೆ: ಒಂದು ವರ್ಷದ ಹಿಂದೆಯೇ ಎಚ್ಚರಿಸಿದ್ದ ಅಖ್ತರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2022, 12:35 IST
Last Updated 30 ಸೆಪ್ಟೆಂಬರ್ 2022, 12:35 IST
ಜಸ್‌ಪ್ರೀತ್ ಬೂಮ್ರಾ
ಜಸ್‌ಪ್ರೀತ್ ಬೂಮ್ರಾ   

ನವದೆಹಲಿ: ಬೆನ್ನುನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ.

ಈ ನಡುವೆ ಬೂಮ್ರಾ ಗಾಯದ ಸಮಸ್ಯೆ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಒಂದು ವರ್ಷದ ಹಿಂದೆಯೇ ನೀಡಿರುವ ಹೇಳಿಕೆ ವೈರಲ್ ಆಗಿದೆ.

ಇನ್ನೊಂದು ವರ್ಷದಲ್ಲಿ ಬೂಮ್ರಾ ಬೆನ್ನು ಮುರಿದು ಹೋಗಲಿದೆ ಎಂದು ಅಖ್ತರ್ ಎಚ್ಚರಿಸಿದ್ದರು. ಅಖ್ತರ್ ಹೇಳಿದಂತೆ ವಿಪರೀತ ಬೆನ್ನು ನೋವಿಗೆ ಒಳಗಾಗಿರುವ ಬೂಮ್ರಾಗೆ ಚೇತರಿಸಿಕೊಳ್ಳಲು ಕನಿಷ್ಠ ಆರು ತಿಂಗಳ ವಿಶ್ರಾಂತಿ ಅವಶ್ಯಕತೆಯಿದೆ ಎಂದು ತಿಳಿದು ಬಂದಿದೆ.

ADVERTISEMENT

ಕಳೆದ ವರ್ಷ 'ಸ್ಪೋರ್ಟ್ಸ್ ತಕ್' ಕ್ರಿಕೆಟ್ ಸಂವಾದದಲ್ಲಿ ಪತ್ರಕರ್ತ ವಿಕ್ರಾಂತ್ ಗುಪ್ತಾ ಅವರ ಜೊತೆ ಚರ್ಚೆ ನಡೆಸಿದ್ದ ಅಖ್ತರ್, ಬೂಮ್ರಾ ಬೆನ್ನು ನೋವಿನ ಸಮಸ್ಯೆ ಬಗ್ಗೆ ವಿವರಣೆ ನೀಡಿದ್ದರು.

ಫ್ರಂಟಲ್ ಆಕ್ಷನ್ ಬೌಲಿಂಗ್ ಶೈಲಿಯನ್ನು ಬೂಮ್ರಾ ಹೊಂದಿದ್ದಾರೆ. ಅಂತವರು ಬೆನ್ನು ಹಾಗೂ ಭುಜದ ವೇಗದೊಂದಿಗೆ ಬೌಲಿಂಗ್ ಮಾಡುತ್ತಾರೆ. ಅಲ್ಲದೆ ಭುಜ ಹಾಗೂ ಬೆನ್ನನ್ನು ಹೆಚ್ಚು ಅವಲಂಬಿಸಿರುತ್ತಾರೆ. ಆದರೆ ನಾವು ಸೈಡ್-ಆನ್ ಬೌಲಿಂಗ್ ಶೈಲಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದರು.

ನಮ್ಮ ಸಮಸ್ಯೆಯನ್ನು ಸರಿದೂಗಿಸಬಹುದು. ಆದರೆ ಬೂಮ್ರಾ ಬೌಲಿಂಗ್ ಶೈಲಿಯಲ್ಲಿ ನೋವು ಕಾಣಿಸಿಕೊಂಡರೆ ತೊಂದರೆ ಎದುರಾಗುತ್ತದೆ. ನೀವು ಎಷ್ಟೇ ಪ್ರಯತ್ನಿಸಿದರೂ ನೋವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು.

ಇದನ್ನೂ ಓದಿ:

ಮಾಜಿ ವೇಗಿಗಳಾದ ಇಯಾನ್ ಬಿಷಷ್, ಶೇನ್ ಬಾಂಡ್ ಎಲ್ಲರೂ ಇದೇ ಸಮಸ್ಯೆಯಿಂದ ಬಳಲಿದ್ದರು. ಈಗ ಬೂಮ್ರಾ ಬೆನ್ನುನೋವಿನಿಂದ ಹೆಣಗಾಡುತ್ತಿದ್ದಾರೆ. ಹೀಗೆ ವಿರಾಮವಿಲ್ಲದೆ ಪ್ರತಿ ಪಂದ್ಯವನ್ನು ಆಡಿದರೆ ಬೂಮ್ರಾ ಬೆನ್ನು ಇನ್ನೊಂದು ವರ್ಷದಲ್ಲಿ ಮುರಿದು ಹೋಗಲಿದೆ. ಹಾಗಾಗಿ ಸಾಕಷ್ಟು ವಿಶ್ರಾಂತಿ ಜೊತೆಗೆ ನೋವಿನ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.