ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 12:00 IST
Last Updated 4 ಜನವರಿ 2020, 12:00 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮೊದಲು ಸಂಪೂರ್ಣ ಜ್ಞಾನ ಹೊಂದದೆಪ್ರತಿಕ್ರಿಯಿಸುವುದಿಲ್ಲಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧ ಮೊದಲ ಅಂತರರಾಷ್ಟ್ರೀಯ ಟಿ20 ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ, ಈ ವಿಚಾರದಲ್ಲಿ ನಾನು ಜವಾಬ್ದಾರಿಯಿಲ್ಲದೆ ಏನನ್ನೂ ಮಾತನಾಡುವುದಿಲ್ಲ. ನಿಮಗೆ ತಿಳಿದಿರುವಂತೆ ಸಿಎಎ ಕುರಿತಂತೆ ಎರಡೂ ಕಡೆಯಲ್ಲಿ ಅಮೂಲಾಗ್ರ ಅಭಿಪ್ರಾಯಗಳಿವೆ. ಹಾಗಾಗಿ ನನಗೆ ಸಂಪೂರ್ಣ ಮಾಹಿತಿಯ ಅಗತ್ಯವಿದೆ. ಸಿಎಎ ಅರ್ಥ ಏನು ಮತ್ತು ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಆ ಕುರಿತು ಜವಾಬ್ದಾರಿಯಿಂದ ನನ್ನ ಅಭಿಪ್ರಾಯ ವ್ಯಕ್ತಪಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸಿಎಎ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನೀವೊಂದು ಹೇಳುತ್ತೀರ ಮತ್ತು ಮತ್ತೊಬ್ಬರು ಮತ್ತೊಂದು ವಿಚಾರವನ್ನು ಹೇಳುತ್ತಾರೆ. ಹಾಗಾಗಿ ಯಾವೊಂದರ ಕುರಿತು ಮಾತನಾಡಲು ಇಚ್ಛಿಸುವುದಿಲ್ಲ. ವಿಚಾರದ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆದ ಬಳಿಕವೇ ನನ್ನ ಅಭಿಪ್ರಾಯವೇನು ಎಂಬುದನ್ನು ಜವಾಬ್ದಾರಿಯಿಂದ ಉತ್ತರಿಸುವೆ ಎಂದು ಹೇಳಿದರು.

ADVERTISEMENT

ಪೌರತ್ವ ತಿದ್ದುಪಡಿ ಮಸೂದೆಗೆ ಸಂಸತ್‌ನ ಉಭಯ ಸದನಗಳಲ್ಲಿ ಅನುಮೋದನೆ ದೊರೆಯುತ್ತಿದ್ದಂತೆ ಗುವಾಹಟಿ ಸೇರಿದಂತೆ ಅಸ್ಸಾಂನ ಹಲವೆಡೆ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿತ್ತು.

ಇನ್ನು 2016ರಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನೋಟು ನಿಷೇಧ ಮಾಡಿದಾಗ, ಭಾರತದ ರಾಜಕೀಯ ಇತಿಹಾಸದಲ್ಲೇ ಇದೊಂದು ಅತ್ಯುತ್ತಮ ನಡೆ ಎಂದು ಕೊಹ್ಲಿ ಹೇಳಿದ್ದರು.

ಭಾರತ ತಂಡ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಅಂತರರಾಷ್ಟ್ರೀಯ ಟಿ-20 ಸರಣಿಯು ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಶ್ರೀಲಂಕಾ ಕ್ರಿಕೆಟ್‌ ತಂಡ ಮೂರು ಪಂದ್ಯಗಳ ಟಿ–20 ಸರಣಿ ಆಡಲು ಗುರುವಾರವೇ ಗುವಾಹಟಿಗೆ ಬಂದಿಳಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಭದ್ರತಾ ಪಡೆಗಳ ಬೆಂಗಾವಲಿನಲ್ಲಿ ತಂಡ ಹೋಟೆಲಿಗೆ ತೆರಳಿದೆ.

ಸರಣಿಯ ಮೊದಲ ಪಂದ್ಯ ಭಾನುವಾರ ಇಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 7ರಂದು ಇಂದೋರ್‌ನಲ್ಲಿ ಮತ್ತು ಅಂತಿಮ ಪಂದ್ಯ ಪುಣೆಯಲ್ಲಿ 10ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.